ಸಾರಾಂಶ
ಗಂಗಾವತಿ: ತಾಲೂಕಿನ ಸಾಣಾಪುರ ಜಂಗ್ಲಿ ರಸ್ತೆ ಬಳಿ ನಡೆದ ಓರ್ವ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಬಂಧಿತ ಇಬ್ಬರು ಆರೋಪಿಗಳೊಂದಿಗೆ ಸಾಣಾಪುರ ಬಳಿ ಘಟನಾ ಸ್ಥಳ ಮಹಜರು ನಡೆಸಿದರು.
ಸ್ಥಳಕ್ಕೆ ಇಬ್ಬರು ಆರೋಪಿಗಳನ್ನು ಕರೆದುಕೊಂಡು ಹೋಗಿ ತನಿಖೆ ಕೈಗೊಂಡಿರುವ ಪೊಲೀಸರು ಸ್ಥಳೀಯರೊಂದಿಗೆ ಚರ್ಚಿಸಿ ಪಂಚನಾಮೆ ನಡೆಸಿದರು. ಈ ಸಂದರ್ಭದಲ್ಲಿ ಆರೋಪಿಗಳಿಂದ ತಾವು ಮಾಡಿದ ಕೃತ್ಯದ ಬಗ್ಗೆ ವಿವರಣೆ ಪಡೆದಿರುವ ಪೊಲೀಸರು, ಆರೋಪಿಗಳು ಹಲ್ಲೆಗೆ ಉಪಯೋಗಿಸಿರುವ ಕಲ್ಲು, ಕಟ್ಟಿಗೆ ಮತ್ತು ಮೂವರನ್ನು ಕಾಲುವೆಗೆ ತಳ್ಳಿರುವ ಬಗ್ಗೆ ವಿವರಣೆ ಪಡೆದರು. ಅಲ್ಲದೆ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ರೇಪ್ ಮಾಡಿರುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಹೋಂ ಸ್ಟೇ ಮೇಲೆ ನಿಗಾ: ಮೂರು ದಿನಗಳ ಹಿಂದೆ ಸಾಣಾಪುರ ಬಳಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಹನುಮನನಳ್ಳಿ, ಸಾಣಾಪುರ, ಅನೆಗೊಂದಿ ರೆಸಾರ್ಟ್‌ಗಳ ಮೇಲೆ ನಿಗಾ ವಹಿಸಿದ್ದು, ಎಲ್ಲ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ವಾಸ್ತವ್ಯ ಮಾಡಿರುವ ವಿದೇಶಿ ಪ್ರವಾಸಿಗರು ಹಾಗೂ ದೇಶಿ ಪ್ರವಾಸಿಗರ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಅಹಿತಕರ ಘಟನೆಗಳಿಗೆ ನೀವೇ ಹೊಣೆಗಾರರು ಎಂದು ಎಚ್ಚರಿಸಿದ್ದಾರೆ.
ಸಾಣಾಪುರದ ಜಂಗ್ಲಿ ರಸ್ತೆ ಬಳಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅರೋಪಿಗಳನ್ನು ಸ್ಥಳಕ್ಕೆ ಕರೆದುಕಂಡು ಹೋಗಿ ಪಂಚನಾಮೆ ಮಾಡಲಾಗಿದೆ ಎಂದು ಗಂಗಾವತಿ ಪೊಲೀಸ್ ಠಾಣೆ ಗ್ರಾಮೀಣ ಸಿಪಿಐ ಸೋಮಶೇಖರ್ ಜುಟ್ಟಲ್ ಹೇಳಿದ್ದಾರೆ.