ಸಾರಾಂಶ
ಬೇಡ್ತಿ ನದಿಯ ಸಮೀಪದ ತುಂಬೇಬೀಡಿನಲ್ಲಿ ಜನಜಾಗೃತಿ ಸಮಾವೇಶ ಉದ್ಘಾಟನೆಕನ್ನಡಪ್ರಭ ವಾರ್ತೆ ಯಲ್ಲಾಪುರ
ಹರಿಯುವ ನೀರಿಗೆ ತಡೆ ಒಡ್ಡುವುದರಿಂದ ಭೂಮಿ, ಪರಿಸರ, ಜಲಚರ, ಪ್ರಾಣಿಸಂಕುಲಗಳೂ ಸೇರಿದಂತೆ ಪ್ರಕೃತಿಯ ಮೇಲೆ ಪರಿಣಾಮ ಬೀಳಲಿದೆ. ಅದರಿಂದಾಗಿ ಜಿಲ್ಲೆಯ ಸಮತೋತನದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ನೀರಿನ ಹರಿವಿನ ಅಧ್ಯಯನವೇ ಆಗಿಲ್ಲ. ಅದರಿಂದ ಭೂಮಿಯ ಇರುವಿಕೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ನಾವು ನಾಲ್ಕು ರೀತಿಯ ಹೋರಾಟವನ್ನು ನಡೆಸಿದಾಗ ಮಾತ್ರ ಈ ಯೋಜನೆಗಳು ನಿಲ್ಲಲು ಸಾಧ್ಯ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ, ಸೋಂದಾ ಸ್ವರ್ಣವಲ್ಲಿಯ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.ಭಾನುವಾರ ತಾಲೂಕಿನ ಮಂಚೀಕೇರಿ ಬಳಿಯ ಬೇಡ್ತಿ ನದಿಯ ಸಮೀಪದ ತುಂಬೇಬೀಡಿನಲ್ಲಿ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಮ್ಮ ಮುಂದೆ ಎತ್ತಿನ ಹೊಳೆಯ ವಿಫಲ ಯೋಜನೆ ಇದೆ. ಇದಕ್ಕೆ ಸಾವಿರಾರು ಕೋಟಿ ಹಣ ವ್ಯರ್ಥವಾಗಿದೆ. ಆದ್ದರಿಂದ ಎತ್ತಿನ ಹೊಳೆಯ ಯೋಜನೆಗಿಂತಲೂ ಬೃಹತ್ ಹೋರಾಟ ಗಟ್ಟಿಧ್ವನಿಯಲ್ಲಿ ಆಗಬೇಕಾಗಿದೆ. ಈ ಹೋರಾಟದಲ್ಲಿ ನಾಲ್ಕು ವಿಧದ ಹೋರಾಟ ನಡೆಸಬೇಕು. ಒಂದು ಜನಪ್ರತಿನಿಧಿಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರುವುದು. ಎರಡನೇಯದು ವೈಜ್ಞಾನಿಕ ಹೋರಾಟ ರಾಷ್ಟ್ರಮಟ್ಟದಲ್ಲಿಯೂ ಮಹತ್ವ ದೊರೆಯುತ್ತದೆ. ಮೂರನೇದು ಕಾನೂನಿನ ಹೋರಾಟ, ಕೊನೆಯದು ಪ್ರಮುಖವಾದ ಜನಾಂದೋಲನದ ಹೋರಾಟದಿಂದ ಯಾವುದೇ ಸರ್ಕಾರವಿದ್ದರೂ ಯೋಜನೆ ನಿಲ್ಲಿಸಲೇ ಬೇಕಾಗುತ್ತದೆ. ನಮಗೆ ಹಿಂದಿನೆಲ್ಲ ಹೋರಾಟಗಳಿಗಿಂತ ಹೆಚ್ಚಿನ ಬಲ ಇದೆ. ವ್ಯಕ್ತಿಯೊಬ್ಬರು ಡಿಪಿಆರ್ ಆಗಿದೆ ಎಂದು ಸುಳ್ಳು ಹೇಳಿದ್ದಾರೆ. ಈ ಹೋರಾಟ ಜಾತ್ಯತೀತ, ಪಕ್ಷಾತೀತವಾಗಿ ನಡೆಸಬೇಕು. ಶರಾವತಿ ಪಂಪ್ಡ್ ಯೋಜನೆ ಸೇರಿದಂತೆ ಜಿಲ್ಲೆಯ ಎಲ್ಲ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸುವವರೆಗೂ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಮ್ಮ ಹೋರಾಟ ಕೇವಲ ಬೇಡ್ತಿ, ವರದಾ ಹೋರಾಟಕ್ಕೆ ಸೀಮಿತವಾಗದೇ, ಶರಾವತಿ ಪಂಪ್ಡ್ ಸೇರಿದಂತೆ ಎಲ್ಲ ಹೋರಾಟಗಳಲ್ಲಿಯೂ ಭಾಗವಹಿಸಬೇಕು. ಜಿಲ್ಲೆಯ ಧಾರಣ ಸಾಮರ್ಥ್ಯದ ಅಧ್ಯಯನದ ವರದಿ ಬಂದ ವಿನಃ ಯಾವ ಯೋಜನೆಗೂ ನಾವು ಒಪ್ಪಬಾರದು. ಈಗಾಗಲೇ ಕಳಚೆ, ಶಿರೂರು, ಮತ್ತಿಘಟ್ಟ, ಭಟ್ಕಳ, ಹೊನ್ನಾವರ ಹೀಗೆ ಹತ್ತು ಹಲವು ಪ್ರದೇಶಗಳಲ್ಲಿ ತೀವ್ರ ಭೂಕುಸಿತದ ಪರಿಣಾಮ ಜಿಲ್ಲೆಯ ಚಿತ್ರಣವೇ ಬದಲಾಗುವ ಸ್ಥಿತಿಗೆ ತಲುಪಿದೆ. ಆದ್ದರಿಂದ ವೈಜ್ಞಾನಿಕ ವಿರೋಧದ ನಡುವೆಯೂ ನಾವು ಇಂತಹ ಅವೈಜ್ಞಾನಿಕ ಯೋಜನೆ ತರುವುದಕ್ಕೆ ಒಪ್ಪಬಾರದು. ಅಭಿವೃದ್ಧಿ ಅಗತ್ಯ. ಪರಿಸರಕ್ಕೆ ಪೂರಕವಾದ ಅಭಿವೃದ್ಧಿಗೆ ಒಪ್ಪಬೇಕು. ನಾವೆಲ್ಲ ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡೋಣ. ಈ ಹೋರಾಟದ ಜೊತೆಯಲ್ಲಿ ನಾನು ಮುಂಚೂಣಿಯಲ್ಲಿರುತ್ತೇನೆಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಜಿಲ್ಲೆಯ ಹೊರಗಿನವರಿಗೆ ಜಿಲ್ಲೆಯ ಸ್ಥಿತಿಗತಿ, ನೀರಿನ ಪ್ರಮಾಣ ಯಾವುದೂ ಅರಿವಿಲ್ಲ. ಪರಿಸರ ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಆಗಬೇಕೇ ವಿನಃ ಮನಬಂದಂತೆ ಮಾಡಲಾಗದು ಎಂದರು.ಹಿರಿಯ ಸಹಕಾರಿ ಪ್ರಮೋದ ಹೆಗಡೆ ಮಾತನಾಡಿ, ಯಾವುದೇ ಸರ್ಕಾರ ಸಂವಿಧಾನ ಮತ್ತು ಕಾನೂನು ವಿರುದ್ಧ ಯಾವ ಯೋಜನೆಯನ್ನೂ ತರಲಾಗದು. ಪಂಚಾಯತ್ ಕಾನೂನಿನ ಪ್ರಕಾರ ಗ್ರಾಪಂ ಸಭೆಯಲ್ಲಿ ಒಪ್ಪಿಗೆ ನೀಡದಿದ್ದರೆ ಯಾವ ಯೋಜನೆಯನ್ನೂ ಜಾರಿ ಮಾಡಲಾಗದು. ಅಂತಹ ಕಠಿಣ ಕಾನೂನು ನಮ್ಮಲ್ಲಿದೆ. ಅದಕ್ಕಾಗಿ ನ್ಯಾಯಾಲಯದ ಮೆಟ್ಟಿಲೂ ಏರಬಹುದು ಎಂದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕ ಮಾತನಾಡಿ, ಹೋರಾಟದ ಕುರಿತು ರೂಪುರೇಷೆ ವಿವರಿಸಿದರು.ಪರಿಸರ ತಜ್ಞ ಬಾಲಚಂದ್ರ ಸಾಯಿಮನೆ, ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ ಮಾತನಾಡಿದರು.
ಭರತನಹಳ್ಳಿ ಸೀಮೆಯ ಮಾತೃಮಂಡಳಿಯವರಿಂದ ಭಗವದ್ಗೀತಾ ಪಠಣ, ಸ್ಥಳೀಯ ವೈದಿಕರಿಂದ ವೇದಘೋಷ ನಡೆಯಿತು. ಗೋಪಾಲ ಹೆಗಡೆ ದಂಪತಿ ಮತ್ತು ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ದಂಪತಿ ಫಲ ಸಮರ್ಪಿಸಿ, ಸ್ವಾಗತಿಸಿದರು. ಗ್ರಾಪಂ ಸದಸ್ಯರ ಒಕ್ಕೂಟದ ಜಿಲ್ಲಾ ಸಂಚಾಲಕ ಎಂ.ಕೆ. ಭಟ್ಟ ಯಡಳ್ಳಿ ಮತ್ತು ಪ್ರಕಾಶ ಭಟ್ಟ ನಿರ್ವಹಿಸಿದರು. ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಬಾಮಣಕೊಪ್ಪ ವಂದಿಸಿದರು. ಕೊಳ್ಳ ಸಂರಕ್ಷಣಾ ಸಮಿತಿಯ ನರಸಿಂಹ ಸಾತೊಡ್ಡಿ ನಿರ್ಣಯ ಮಂಡಿಸಿದರು. ತಾಲೂಕಿನ ವಿವಿಧೆಡೆಗಳಿಂದ ಸಹಸ್ರ ಸಂಖ್ಯೆಯಲ್ಲಿ ದ್ವಿಚಕ್ರ ವಾಹನದ ಜಾಥಾದ ಮೂಲಕ ಹೋರಾಟಕ್ಕೆ ಮೆರಗು ತಂದರು.