ಯುವತಿ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಗಂಗಾಮತ ಸಮಾಜ ಒತ್ತಾಯ

| Published : May 18 2024, 12:31 AM IST

ಯುವತಿ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಗಂಗಾಮತ ಸಮಾಜ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಪ್ರೀತಿ ನಿರಾಕರಣೆ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ನೆತ್ತರ ಹರಿದಿರುವುದು ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ.

ಹೊಸಪೇಟೆ: ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರ್ ಬರ್ಬರ ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಗಂಗಾಮತ ಸಮಾಜದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ಗಂಗಾಮತ ಸಂಘದ ಗೌರವಾಧ್ಯಕ್ಷ ವೈ.ಯಮುನೇಶ್ ಮಾತನಾಡಿ, ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಪ್ರೀತಿ ನಿರಾಕರಣೆ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ನೆತ್ತರ ಹರಿದಿರುವುದು ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ. ಗಿರೀಶ್ ಸಾವಂತ್ ಎಂಬ ಯುವಕ ಅಂಜಲಿ ಅಂಬಿಗೇರ್‌ ಎಂಬ ಯುವತಿಯನ್ನು ಬೆಳ್ಳಂಬೆಳಗ್ಗೆ ಆಕೆಯ ಮನೆಯಲಿ ಹತ್ಯೆ ಮಾಡಿದ್ದಾನೆ. ಅಂಜಲಿಯನ್ನು ಕೊಲೆ ಮಾಡುವುದಾಗಿ ಈ ಯುವಕನಿಂದ ಬೆದರಿಕೆ ಬಂದ ಬಗ್ಗೆ ಕುಟುಂಬದವರು ಪೊಲೀಸರ ಗಮನಕ್ಕೆ ತಂದಾಗಲೂ ಇದೊಂದು ಸಾಮಾನ್ಯ ಪ್ರಕರಣ ಎನ್ನುವಂತೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಪೊಲೀಸರು ಎಚ್ಚೆತ್ತು ಆರೋಪಿಯನ್ನು ಪತ್ತೆ ಹಚ್ಚಿ ಜೈಲುಪಾಲು ಮಾಡಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲ ಎಂದರು.

ಜಿಲ್ಲಾ ಸಂಘದ ಅಧ್ಯಕ್ಷ ಅಂಬಾಡಿ ನಾಗರಾಜ್ ಮಾತನಾಡಿ, ನೇಹಾ ಹಿರೇಮಠ ಹತ್ಯೆಯಾದಾಗ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಮೃತಳ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಆದರೆ ಅಂಜಲಿಯ ಹತ್ಯೆಯ ನಂತರ ಯಾವೊಬ್ಬ ಪಕ್ಷದ ಮುಖಂಡರು ಆಕೆಯ ಮನೆಗೆ ಹೋಗದಿರುವುದು ಹಿಂದುಳಿದ ಸಣ್ಣಪುಟ್ಟ ಜಾತಿಗಳ ಬಗ್ಗೆ ಅನಾದರ ಹಾಗೂ ತಾರತಮ್ಯಕ್ಕೆ ಸಾಕ್ಷಿಯಾಗಿದೆ. ಮುಗ್ಧ ಜನರು ಹತ್ಯೆಯಾದಾಗ ಆರೋಪಿಗಳಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಿ ಜಾತಿ, ಧರ್ಮದ ಹಂಗಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ನೆಲದ ಮೇಲಿನ ಕಾನೂನಿಗೆ ಗೌರವ ನೀಡಿದಂತಾಗುತ್ತದೆ ಎಂದರು.

ಸಂಘಟನೆಯ ಪದಾಧಿಕಾರಿಗಳಾದ ಅಂಬಿಗೇರ ಮಂಜುನಾಥ, ಮೇಘನಾಥ, ಸೂರ್ಯನಾರಾಯಣ, ಮುತ್ಕೂರು ರಾಮಣ್ಣ, ಬಾರಕೀರ ನೀಲಪ್ಪ, ಪ್ರೊ. ಉಮಾಮಹೇಶ್ವರ್, ಎಸ್.ನಾಗರಾಜ, ಸುರೇಶ, ಜೆ.ಎಂ.ಅಶೋಕ, ಶ್ರೀಧರ್, ವಿ.ಹೊನ್ನೂರಪ್ಪ, ಎಂ.ರೇಣೇಶ್, ಕಂಪ್ಲಿಅಶೋಕ, ರಾಜೇಶ್, ವರುಣ್, ಮಡ್ಡೇರ್‌ ದಾನಪ್ಪ, ನೀಲಪ್ಪ, ಶಶಿಧರ, ಮಲ್ಲಯ್ಯ, ವಿಜಯಕುಮಾರ್ ಮತ್ತಿತರರಿದ್ದರು.