ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕಾದರೆ ಸಮಾಜದ ಎಲ್ಲರೂ ಒಂದಾಗಿ, ಒಂದೇ ಧ್ವನಿಯಲ್ಲಿ ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಮುನ್ನಡೆಯಬೇಕು.

ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕಾದರೆ ಸಮಾಜದ ಎಲ್ಲರೂ ಒಂದಾಗಿ, ಒಂದೇ ಧ್ವನಿಯಲ್ಲಿ ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಮುನ್ನಡೆಯಬೇಕು. ಆಗ ಸಮಾಜಕ್ಕೆ ಉತ್ತಮ ಭವಿಷ್ಯ ನಿರ್ಮಾಣವಾಗಲಿದೆ. ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ನಾನೂ ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸ್ಥಳೀಯ ವಿನಾಯಕ ನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯನವರು ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದು, ಬದುಕಿನ ಕಟು ಸತ್ಯಗಳನ್ನು ನಿಷ್ಠುರವಾಗಿ ಹಾಗೂ ನೇರವಾಗಿ ವಚನಗಳ ಮೂಲಕ ಪ್ರತಿಪಾದಿಸಿದ ಮಹಾನ್ ವಚನಕಾರರು. ಅಂಬಿಗರ ಸಮಾಜ ದೇಶದ ಉದ್ದಗಲಕ್ಕೂ ಹರಡಿದ್ದು, ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದೆ. ಸುಮಾರು 37 ನಾಮಾಂಕಿತಗಳಿಂದ ಗುರುತಿಸಿಕೊಂಡಿರುವ ಈ ಸಮುದಾಯದ ವೃತ್ತಿ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಬಹುತೇಕ ಒಂದೇ ಆಗಿವೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಒಂದೇ ಧ್ವನಿಯಲ್ಲಿ ಮುನ್ನಡೆಯಬೇಕು ಎಂದರು.

ಈಗಾಗಲೇ ಕೆಲವು ನಾಮಾಂಕಿತ ಜಾತಿಗಳಿಗೆ ಮೀಸಲಾತಿ ದೊರೆತಿದೆ. ಗಂಗಾಮತ ಸಮಾಜದವರು ಹಿಂದುಳಿದ ವರ್ಗದಲ್ಲಿದ್ದು, ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಿದೆ. ಅಧ್ಯಯನ ವರದಿ ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದ್ದು, ಆ ಸಂದರ್ಭದಲ್ಲಿ ಸಮಾಜದೊಂದಿಗೆ ತಾನು ನಿಲ್ಲುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಮಾಜದ ಮುಖಂಡರು ಮನವಿ ಮಾಡಿದ್ದು, ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 1 ಕೋಟಿ ಹಾಗೂ ನಂತರ ತಮ್ಮ ಸರ್ಕಾರದ ಅವಧಿಯಲ್ಲಿ 5 ಕೋಟಿ, ಸ್ಥಳೀಯ ಶಾಸಕರ ಅನುದಾನದಿಂದ 3 ಕೋಟಿ ಸೇರಿ ಒಟ್ಟು 8 ಕೋಟಿ ಅನುದಾನ ನೀಡಲಾಗಿದೆ. ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ರಾಜ್ಯದ ವಿವಿಧೆಡೆಯಿಂದ ಬರುವ ಸಮಾಜದವರಿಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಗಂಗಾಮತ ಸಮಾಜ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ.ದಂಡಿನ, ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ, ತಾಲೂಕಾಧ್ಯಕ್ಷ ಬಸವರಾಜ ಕಳಸೂರ, ಸಂಜೀವಕುಮಾರ ನೀರಲಗಿ, ಎಂ.ಎಂ. ಮೈದೂರ, ಲಿಂಗಯ್ಯ ಹಿರೇಮಠ, ಮಂಜುನಾಥ ಭೋವಿ, ಸಂಜಯ ಸುಣಗಾರ, ಶಂಕರ ಸುತಾರ, ಪ್ರವೀಣ ವಡ್ನಿಕೊಪ್ಪ, ಅಣ್ಣಪ್ಪ ಚಾಕಾಪುರ, ಹೊನ್ನಪ್ಪ ಹಾಳಿ, ಪ್ರದೀಪ ಶೇಷಗಿರಿ, ಚಂದ್ರಶೇಖರ ಜಾಡರ, ರಾಜಣ್ಣ ಜಾಡಮಲ್ಲಿ, ಕಾಂತೇಶ ಅಂಬಿಗೇರ, ಕರಬಸಪ್ಪ ಹಳದೂರ, ಉದಯ ಅಂಬಿಗೇರ, ರವಿಕುಮಾರ ಬಂಗೇರಾ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಗಂಗಾಮತ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದು, ಇದೀಗ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವುದು ಶ್ಲಾಘನೀಯ. ಗಂಗಾಮತ ಸಮಾಜದ ನೌಕರರ ಭವನ ನಿರ್ಮಾಣಕ್ಕೆ ಸುಮಾರು 30 ಲಕ್ಷ ಅನುದಾನ ನೀಡಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಯಾನವನಕ್ಕೆ ಅಂಬಿಗರ ಚೌಡಯ್ಯನವರ ಹೆಸರನ್ನು ನಾಮಕರಣ ಮಾಡಲು ಪ್ರಯತ್ನಿಸಲಾಗುವುದು ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಗಂಗಾಮತ ಸಮಾಜದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಮಾಜ ಹಬ್ಬ ಹರಿದಿನ, ಜಾತ್ರೆ, ಉತ್ಸವಗಳ ನೆಪದಲ್ಲಿ ಮೂಢನಂಬಿಕೆ, ಮೌಢ್ಯತೆಗಳಿಗೆ ಬಲಿಯಾಗಬಾರದು. ಮಕ್ಕಳ ಶಿಕ್ಷಣಕ್ಕೆ ಸಾಲಸೂಲ ಮಾಡಿಯಾದರೂ ಗುಣಮಟ್ಟದ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಬೆಳೆಸಬೇಕು. ಇಂತಹ ಅರ್ಥಪೂರ್ಣ ಕಾರ್ಯಕ್ರಮ ರಾಜ್ಯ ಸಮಿತಿ, ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ನರಸೀಪುರದ ಅಂಬಿಗರ ಚೌಡಯ್ಯನವರ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.