ಸಮಗ್ರ ಕೃಷಿ ಪದ್ಧತಿಯಿಂದ ಬರಗಾಲ ಗೆದ್ದ ರೈತ ಗಂಗಣ್ಣ

| Published : Mar 10 2024, 01:34 AM IST / Updated: Mar 10 2024, 01:35 AM IST

ಸಾರಾಂಶ

ಬರಪೀಡಿತ ಪ್ರದೇಶ ಎಂದು ಕೃಷಿಯನ್ನೇ ತೊರೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಬರದ ನಾಡಲ್ಲಿ ಕಳೆದ ಹತ್ತು ವರ್ಷಗಳಿಂದ ಮಲೆನಾಡನ್ನು ಅಣಕಿಸುವಂತೆ ಕೃಷಿಯಲ್ಲಿ ಸಾಧನೆ ಮಾಡಿ ಯುವಕರಿಗೆ ರೈತ ಗಂಗಪ್ಪ ಮಾದರಿಯಾಗಿದ್ದಾರೆ.

ಬಿಜಿಕೆರೆ ಬಸವರಾಜ

ಮೊಳಕಾಲ್ಮುರು: ಬರಪೀಡಿತ ಪ್ರದೇಶ ಎಂದು ಕೃಷಿಯನ್ನೇ ತೊರೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಬರದ ನಾಡಲ್ಲಿ ಕಳೆದ ಹತ್ತು ವರ್ಷಗಳಿಂದ ಮಲೆನಾಡನ್ನು ಅಣಕಿಸುವಂತೆ ಕೃಷಿಯಲ್ಲಿ ಸಾಧನೆ ಮಾಡಿ ಯುವಕರಿಗೆ ರೈತ ಗಂಗಪ್ಪ ಮಾದರಿಯಾಗಿದ್ದಾರೆ.

ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸಿಕೊಂಡು ವಿವಿಧ ರೀತಿಯ ಸಾವಯವ ದೀರ್ಘಾವದಿ ಬೆಳೆಗಳನ್ನು ಬೆಳೆದಿರುವ ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದ ಜಿ.ವಿ.ಗಂಗಣ್ಣ ಸಮಗ್ರ ಕೃಷಿ ಪದ್ಧತಿಯಿಂದ ವಾರ್ಷಿಕ 30 ಲಕ್ಷ ರು. ಆದಾಯಗಳಿಸುತ್ತಾ ಬರಗಾಲವನ್ನೇ ಗೆದ್ದಿದ್ದಾರೆ.

ಸದಾ ಬರದ ಬವಣೆಯಲ್ಲಿ ನಲುಗುತ್ತಿರುವ ತಾಲೂಕಿನಲ್ಲಿ ಸಮಗ್ರ ಕೃಷಿ ಪದ್ಧತಿ ಬರದಲ್ಲಿಯೂ ಕೈ ಹಿಡಿಯಲಿದೆ ಎನ್ನುವುದನ್ನು ಸಾಬೀತು ಪಡಿಸಿರುವ ರೈತ ಗಂಗಣ್ಣ ಐಟಿಐ ವಿದ್ಯಾಭ್ಯಾಸ ಮಾಡಿ ಬಳ್ಳಾರಿಯ ಜಿಎಸ್‌ಡಬ್ಲ್ಯೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕೃಷಿಯತ್ತ ಹೆಜ್ಜೆ ಇಟ್ಟು ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸಿಕೊಂಡು ಮಲೆ ನಾಡನ್ನು ನಾಚಿಸುವಂತೆ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಒಂದು ಭೂಮಿ, ಒಂದು ನೀರು ಹತ್ತು ಬೆಳೆ ಎನ್ನುವ ಸಂಕಲ್ಪ ಹೊಂದಿರುವ ರೈತ ಗಂಗಪ್ಪ 30 ಎಕರೆಯಲ್ಲಿ 2 ಬೋರ್‌ವೆಲ್ ಕೊರೆಸಿದ್ದಾರೆ. 2 ಬೋರ್‌ವೆಲ್ಗಳ ಪೈಕಿ 3 ಇಂಚು ನೀರು ಸಿಗುತ್ತಿದೆ. ಸಮಗ್ರ ಕೃಷಿಯಾಧಾರಿತವಾಗಿ ರಕ್ತ ಚಂದನ, ಶ್ರೀಗಂಧ, ಮಾವು, ಸಪೋಟ, ಸೀತಾಫಲ, ಹುಣಸೆ, ನೆಲ್ಲಿ, ತೆಂಗು, ಪೇರಲ, ನೇರಳೆ, ತೇಗ ಹಾಗೂ ಗೋಡಂಬಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆದಿದ್ದು, ಕಡಿಮೆ ನೀರಿನಲ್ಲಿಯೇ ಇಡೀ ಭೂಮಿಯನ್ನು ತಂಪಾಗಿಸಿಕೊಳ್ಳುವಂತ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ.

ಪ್ರತಿ ಗಿಡಗಳ ಮಧ್ಯ ಭಾಗದ ಖಾಲಿ ಜಾಗದಲ್ಲಿ ವಿವಿಧ ಕೃಷಿ ಬೆಳೆಗಳನ್ನು ಬಿತ್ತನೆ ಮಾಡಿ ಹನಿ ನೀರಾವರಿ ಮೂಲಕ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ನೀರಿನ ತೇವಾಂಶ ಸಿಗುವಂತೆ ಸಮಗ್ರ ಕೃಷಿ ಪದ್ಧತಿಯನ್ನು ನಿರ್ವಹಿಸಿಕೊಂಡು ಕಡಿಮೆ ನೀರಿನಲ್ಲಿಯೂ ಉತ್ತಮ ಬೆಳೆಯನ್ನು ಬೆಳೆಯುತ್ತಾ ಭಾರಿ ಆದಾಯವನ್ನು ಗಳಿಸುತ್ತಿದ್ದಾರೆ.

30 ಎಕರೆಯೂ ಸಂಪೂರ್ಣವಾಗಿ ಸಾವಯವ ಬೆಳೆಯಾಗಿದೆ. ಗಿಡಗಳಿಂದ ಬಿದ್ದ ಎಲೆಗಳನ್ನು ಅಲ್ಲಿಯೇ ಗೊಬ್ಬರವನ್ನಾಗಿಸಿಕೊಳ್ಳುತ್ತಿದ್ದಾರೆ. ಜೀವಾಮೃತ ಮತ್ತು ಗೋಕುಮಾಮೃತ ಎನ್ನುವ ಸಾವಯವ ದ್ರವವನ್ನು ಸ್ವತಃ ತಾವೇ ತಯಾರಿಸಿಕೊಳ್ಳುತ್ತಿದ್ದಾರೆ. 2 ಲೀಟರ್‌ ದೇಸಿ ಕೆಮಿಕಲ್‌ಗೆ 2 ಲೀಟರ್‌ ದೇಸಿ ಮಜ್ಜಿಗೆ, 2 ಕೆಜಿ ದೇಸಿ ಬೆಲ್ಲ ಮಿಶ್ರಣ ಮಾಡಿ 200 ಲೀಟರ್‌ ಬೆರೆಸಿ ಪ್ರತಿ ಆರು ತಿಂಗಳಿಗೊಮ್ಮೆ ನೀರಿನ ಜತೆಗೆ ಜೀವಾಮೃತ ನೀಡುತ್ತಿದ್ದಾರೆ.

ರೋಗಬಾಧೆ ತಡೆಗೆ ಬೇವಿನ ಸೊಪ್ಪನ್ನು ಎರಡು ದಿನ ನೆನಸಿ 200 ಲೀಟರ್‌ ನೀರು ಹಾಕಿ ನೀಮಾಸ್ತ್ರ ಎನ್ನುವ ಶಿಲೀಂದ್ರ ನಾಶಕವನ್ನು ತಯಾರಿಸಿಕೊಂಡು ಡ್ರಿಪ್ ಪೈಪಿಗೆ ಸಂಪರ್ಕ ಕಲ್ಪಿಸುತ್ತಾರೆ. ಇದುವರೆಗೂ ಬೆಳೆಗಳಿಗೆ ರೋಗಗಳು ಬಂದಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಹೆಚ್ಚಿನ ಶ್ರಮ ಇಲ್ಲದೆ. ಹೆಚ್ಚಿನ ಕೂಲಿ ಆಳುಗಳ ಅಗತ್ಯ ಇಲ್ಲದೆ ವಾರ್ಷಿಕ 2 ಲಕ್ಷ ರು. ವ್ಯಯ ಮಾಡುವ ರೈತ ಗಂಗಣ್ಣ ಮಾವು, ಸೀತಾಫಲ, ನೇರಳೆ, ಪೇರಲ, ಹುಣಸೆ ಸೇರಿದಂತೆ ಹಣ್ಣಿನ ಬೆಳೆಗಳಿಂದಲೂ ಆದಾಯಗಳಿಸುತ್ತಿದ್ದಾರೆ.

ಸಂಪೂರ್ಣವಾಗಿ ಸಾವಯವ ಫಸಲಿನಿಂದಾಗಿ ಗಂಗಣ್ಣ ಬೆಳೆದ ಹಣ್ಣುಗಳಿಗೆ ಭಾರಿ ಬೇಡಿಕೆಯೂ ಇದೆ. ಹೊರ ರಾಜ್ಯದ ಮುಂಬೈ, ಚನ್ನೈ ಸೇರಿದಂತೆ ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಬಳ್ಳಾರಿ ಜಿಂದಾಲ್ ಕಂಪನಿಯವರು ತೋಟಕ್ಕೆ ಆಗಮಿಸಿ ಖರೀದಿಸಿ ಅವರೇ ಕಟಾವು ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ರೈತ ಗಂಗಣ್ಣ.