ಹಾವೇರಿ ಬಿಜೆಪಿ ಟಿಕೆಟ್‌ ನನಗೆ ನೀಡಬೇಕು: ಮಾಜಿ ಸಚಿವ ಬಿ.ಸಿ.ಪಾಟೀಲ

| Published : Mar 10 2024, 01:34 AM IST / Updated: Mar 10 2024, 02:38 PM IST

ಹಾವೇರಿ ಬಿಜೆಪಿ ಟಿಕೆಟ್‌ ನನಗೆ ನೀಡಬೇಕು: ಮಾಜಿ ಸಚಿವ ಬಿ.ಸಿ.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಟಿಕೆಟ್ ಸಿಗಲಿಲ್ಲವೆಂದರೆ ಮುಂದಿನ ನಡೆ ಬಗ್ಗೆ ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ನನಗೆ ನನ್ನದೇ ಆದ ಹಾದಿ ಇದೆ, ನಾನು ನಡೆದಿದ್ದೇ ದಾರಿ

ಹಿರೇಕೆರೂರು: ನಾನು ಶಾಸಕ ಸ್ಥಾನ ತ್ಯಾಗ ಮಾಡಿ ಬಂದವನು, ನಮ್ಮಿಂದ ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ರಚನೆಯಾಗಿ ಆಡಳಿತ ನಡೆಸಿದೆ. ಇದೀಗ ನಾವು ಮನೆಯಲ್ಲಿ ಕೂತುಕೊಂಡಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನಮಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದ್ದಾರೆ.

ಪಟ್ಟಣದ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಕೆಟ್​​ಗಾಗಿ ನಮಗೆ ಹೆದರಿಸೋದು, ಬೆದರಿಸೋದು ಗೊತ್ತಿಲ್ಲ. ಆದರೆ, ಸುಮ್ಮನೇ ಇದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು.

ಈಗಾಗಲೇ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ, ನಾನು ಹಾವೇರಿ ಗದಗ ಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗೆ ಹಾವೇರಿ ಲೋಕಸಭಾ ಟಿಕೆಟ್ ಕೊಡಬೇಕು. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ.

 ಆದರೆ, ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವನಲ್ಲ. ಕೇಂದ್ರ ನಾಯಕರನ್ನು ಭೇಟಿ ಮಾಡಿಲ್ಲ. ನನಗೆ ಕೊಡಬೇಕು ಅಂತ ವಾದ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಟಿಕೆಟ್ ಸಿಗಲಿಲ್ಲವೆಂದರೆ ಮುಂದಿನ ನಡೆ ಬಗ್ಗೆ ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ನನಗೆ ನನ್ನದೇ ಆದ ಹಾದಿ ಇದೆ, ನಾನು ನಡೆದಿದ್ದೇ ದಾರಿ. ನನಗೆ ಹೆಬ್ಬಾರ್​, ಸೋಮಶೇಖರ್ ಹಾದಿ ಬೇಕಾಗಿಲ್ಲ. 

ಕೃಷಿ ಸಚಿವನಾಗಿ ರೈತರ ಹಿತ ಕಾದಿದ್ದೇವೆ. ಕಾಂತೇಶ್ ಅವರ ಬಗ್ಗೆ ಮಾತನಾಡಲು ಹೋಗಲ್ಲ. ಕಾಂತೇಶ್​​ಗೂ ನನಗೂ ಸಂಬಂಧ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪನವರೇ ಕಾಂತೇಶ್ ಜೊತೆ ನಿಂತು ಗೆಲ್ಲಿಸಿಕೊಂಡು ಬರುವುದಾಗಿ ಮಾತುಕೊಟ್ಟಿದ್ದಾರೆ. ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಆ ಮಾತು ಈಶ್ವರಪ್ಪ ಅಲ್ಲ, ಯಡಿಯೂರಪ್ಪನವರೇ ಹೇಳಬೇಕಲ್ವಾ? ಅವರು ಹೇಳಿದರೆ ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ನಮಗೆ ಈ ಬಗ್ಗೆ ಯಡಿಯೂರಪ್ಪ ಏನೂ ಹೇಳಿಲ್ಲ. ನಾನು ಸೋತಿದ್ದೀನಿ, ಅವಕಾಶ ಕೊಟ್ಟರೆ ಗೆಲ್ಲುತ್ತೇನೆ ಅಂತ ಕೇಳಿದ್ದೇನೆ ಎಂದರು.

ಮುಂದೆ ನಿರ್ಧಾರ: ಕಾಂತೇಶ್​​ ಇಲ್ಲವೇ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರೊಂದಿಗೆ ಮಾತನಾಡಿ, ಮುಂದೆ ವಿಚಾರ ಮಾಡುತ್ತೇನೆ. ಅಭ್ಯರ್ಥಿಯು ಹಾವೇರಿ-ಗದಗದವರೇ ಆಗಬೇಕಲ್ವಾ? ಎಂದ ಬಿ.ಸಿ.ಪಾಟೀಲ್​, ನಾನು ಎಲ್ಲ ಹೇಳಿದರೆ ನಿಮಗೆ ರುಚಿ ಉಳಿಯಲ್ಲ, ನಾನು ಎಚ್ಚರಿಕೆ ಕೊಡುತ್ತಿಲ್ಲ. 

ಟಿಕೆಟ್​ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದೇನೆ. ಒಬ್ಬ ಗ್ರಾಪಂ ಸದಸ್ಯ ಕೂಡ ತನ್ನ ಸ್ಥಾನ ತ್ಯಾಗ ಮಾಡಲ್ಲ, ನಾವು ತ್ಯಾಗ ಮಾಡಿದ್ದೇವೆ. ನಮಗೆ ಕೊಡುವುದರಲ್ಲಿ ನ್ಯಾಯ ಇದೆ ಎಂದರು.