ರೈತರಲ್ಲಿ ಮಂದಹಾಸ ತರಿಸಿದ ಜೋಳ, ಸಜ್ಜೆ ಬೆಳೆ

| Published : Mar 10 2024, 01:34 AM IST

ಸಾರಾಂಶ

ಯಾದಗಿರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 14592 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 355 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬೆಳೆ ಬಿತ್ತನೆಯಾಗಿದ್ದು, ಬರದಿಂದ ಕಂಗೆಟ್ಟ ರೈತರಿಗೆ ಆಹಾರ ಸಮಸ್ಯೆ ತಪ್ಪಿಸುವ ಮನೋಬಲ ಮೂಡಿದೆ.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆ ರೈತರಿಗೆ ಈ ಬಾರಿ ಜೋಳ ಹಾಗೂ ಸಜ್ಜಿ ಬೆಳೆ ಆಸರೆಯಾಗಿದೆ.

ಬಿಳಿ ಜೋಳ, ಸಜ್ಜೆ ಈ ಭಾಗದ ಜನರ ಮುಖ್ಯ ಆಹಾರ ಬೆಳೆ. ಸಜ್ಜೆ ಜೋಳದ ಬೆಳೆಯೊಂದು ಉತ್ತಮ ಫ‌ಸಲು ಬಂದರೆ ವರ್ಷದವರೆಗೆ ಆಹಾರದ ಸಮಸ್ಯೆ ತಪ್ಪಿ, ಎಂಥಹ ತಾಪತ್ರಯ ಬಂದರೂ, ರೈತರು ಅದನ್ನು ಎದುರಿಸುವ ಮನೋಬಲ ಬರುತ್ತದೆ. ಈ ಬೆಳೆ ಬಿತ್ತಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬಿತ್ತನೆ ವಿವರ:

ಶಹಾಪುರ ತಾಲೂಕಿನಲ್ಲಿ 3579 ಹೆಕ್ಟೇರ್ ಗುರಿಯಲ್ಲಿ 2900 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯಾಗಿದೆ. ಸಜ್ಜೆ 235 ಹೆಕ್ಟೇರ್ ಗುರಿಯಲ್ಲಿ 200 ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆಯಾಗಿದೆ. ಯಾದಗಿರಿ ತಾಲೂಕಿನಲ್ಲಿ 2779 ಹೆಕ್ಟೇರ್ ಗುರಿಯಲ್ಲಿ 1850 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯಾಗಿದೆ. ಸಜ್ಜೆ ಬಿತ್ತನೆಯಾಗಿಲ್ಲ. ವಡಗೆರಾ ತಾಲೂಕಿನಲ್ಲಿ 2550 ಹೆಕ್ಟೇರ್ ಗುರಿಯಲ್ಲಿ 2190 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯಾಗಿದೆ. ಸಜ್ಜೆ 120 ಹೆಕ್ಟೇರ್ ಗುರಿಯಲ್ಲಿ 100 ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆಯಾಗಿದೆ. ಗುರುಮಠಕಲ್ ತಾಲೂಕಿನಲ್ಲಿ 2491 ಹೆಕ್ಟೇರ್ ಗುರಿಯಲ್ಲಿ 2120 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯಾಗಿದೆ. ಸಜ್ಜೆ ಬಿತ್ತನೆಯಾಗಿಲ್ಲ. ಸುರಪುರ ತಾಲೂಕಿನಲ್ಲಿ 3588 ಹೆಕ್ಟೇರ್ ಗುರಿಯಲ್ಲಿ 3510 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯಾಗಿದೆ. ಸಜ್ಜೆ 174 ಹೆಕ್ಟೇರ್ ಗುರಿಯಲ್ಲಿ 105 ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆಯಾಗಿದೆ. ಹುಣಸಗಿ ತಾಲೂಕಿನಲ್ಲಿ 2383 ಹೆಕ್ಟೇರ್ ಗುರಿಯಲ್ಲಿ 2358 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯಾಗಿದೆ. ಸಜ್ಜೆ ಬಿತ್ತನೆಯಾಗಿಲ್ಲ. ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 14592 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದೆ. 355 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬೆಳೆಯಲಾಗುತ್ತಿದೆ.

ಸಜ್ಜೆ ಜೋಳ ಬಿತ್ತನೆಗೆ ಖರ್ಚಿನ ವಿವರ :

ಜೋಳ ಬಿತ್ತನಗೆ 15000-25000 ರು. ಖರ್ಚು ಮಾಡಿದ್ದಾರೆ. ಒಟ್ಟು 50000-80000 ರು. ಉಳಿತಾಯ ಆಗಬಹುದು ಎನ್ನುತ್ತಾರೆ ರೈತರು.

ಮಾರುಕಟ್ಟೆ ಬೆಲೆ:

ಮಾರುಕಟ್ಟೆಯಲ್ಲಿ ಸದ್ಯ ಒಂದು ಕ್ವಿಂಟಾಲ್‌ ಬಿಳಿ ಜೋಳಕ್ಕೆ 5 ಸಾವಿರ ರಿಂದ 6,500 ರು. ವರೆಗೆ ಇದೆ. ಸಜ್ಜೆ ಸದ್ಯ ಒಂದು ಕ್ವಿಂಟಾಲ್‌ಗೆ 3 ಸಾವಿರ ದಿಂದ 4,500 ರು. ವರೆಗೆ ಇದೆ. ಒಂದು ಎಕರೆ ಭೂಮಿಯಲ್ಲಿ ಸುಮಾರು 15-20 ಕ್ವಿಂಟಾಲ್‌ ಜೋಳ ಬಂದರೇ 50-60 ಸಾವಿರ ರು. ಆದಾಯ.

ಜಾನುವಾರಗಳಿಗೆ ಹೆಚ್ಚಿದ ಮೇವಿನ ಬೇಡಿಕೆ:

ಈ ಸಲ ಮಳೆ ಇಲ್ಲದೆ ಹಸಿರು ಹುಲ್ಲು ಜಾನುವಾರಗಳಿಗೆ ಸಿಗುತ್ತಿಲ್ಲ. ಸಹಜವಾಗಿ ಜೋಳದ ದಂಟಿಗೆ ಹೆಚ್ಚಿನ ಬೆಲೆ ಬಂದಿದೆ. ಒಂದು ಕಟ್ಟು (5 ಮೊಳಗ ಹಗ್ಗದಿಂದ ಜೋಳದ ಸೊಪ್ಪಿ ಅಥವಾ ಕಣಿಕಿ ಅಳತೆ ಮಾಡಿಕೊಡುವುದು)ಜೋಳದ ಸೊಪ್ಪಿಗೆ 500 ರಿಂದ 600 ವರೆಗೆ ಇದೆ. ಇನ್ನು ಭತ್ತದ ಹುಲ್ಲು ಒಂದು ಟ್ರ್ಯಾಕ್ಟರ್‌ಗೆ 3000 ದಿಂದ 4000 ಹಣ ಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಇದೆ.

ಜಾನುವಾರಗಳ ಮಾರಾಟ :

ಮೇವಿಲ್ಲದೆ ಜಾನುವಾರುಗಳು ಸೊರಗುತ್ತಿವೆ. ಬರಗಾಲ ಹಾಗೂ ದುಬಾರಿ ಬೆಲೆಯಿಂದಾಗಿ ನೀವು ಖರದಿಸಲು ರೈತರು ಪರದಾಡುತ್ತಿದ್ದಾರೆ. ಕೆಲವರಂತೂ ಮೇವು ಖರ್ದಿಸಲಾಗದೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಮನವಿ:

ಯಾದಗಿರಿ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಿತವಾದ ಹಿನ್ನೆಲೆ ಜಾನುವಾರುಗಳಿಗೆ ಮೇವಿನ ಕೊರತೆಯಿಂದಾಗಿ ನಿಶಕ್ತಿಯಾಗಿ ಅಡವಿಯಲ್ಲಿ ನಿತ್ರಾಣ ಆಗಿ ಮಲಗುತ್ತಿವೆ. ಜಿಲ್ಲೆ ಪ್ರತಿ ತಾಲೂಕು ಹೋಬಳಿ ಕೇಂದ್ರದಲ್ಲಿ ಮೇವಿನ ಸಂಗ್ರಹಣೆ ಮಾಡಬೇಕೆಂದು ರೈತ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿವೆ.

ಈಗ ಜೋಳ, ಸಜ್ಜೆ ಬಿತ್ತುವ ರೈತರ ಸಂಖ್ಯೆ ಬಹಳ ಕಡಿಮೆ ಇದೆ. ಹೆಚ್ಚು ರೊಕ್ಕ ಕೊಡುವ ಹತ್ತಿ, ತೊಗರಿ, ಮೆಣಸಿನಕಾಯಿ ಭತ್ತದ ಬೆಳೆ ಕಡೆ ಒಲವು ಜಾಸ್ತಿ ಇದೆ. ಆದರೆ ಈ ಸರ ಜಮೀನಿನಲ್ಲಿ ಜೋಳ ಒಳ್ಳೆ ಬೆಳೆ ಬಂದಿದೆ. ಜೊತೆಗೆ ಒಳ್ಳೆಯ ಧಾರಣೆ ಇದೆ. ಎಲ್ಲಾ ಖರ್ಚು ತೆಗೆದು 1ರಿಂದ 1.50 ಲಕ್ಷ ಲಾಭ ಬರುತ್ತದೆ.

ಮಾಳಪ್ಪ, ದರಿಯಾಪುರ ಗ್ರಾಮದ ಜೋಳ ಬೆಳೆದ ರೈತ.

ನನ್ನ ಹೊಲದಾಗ ನಾಲ್ಕು ಎಕರೆ ಸಜ್ಜೆ ಬಿತ್ತಿದ್ದೇನೆ. ಬಂಪರ್ ಬೆಳೆ ಬಂದಿದೆ. ವರ್ಷಪೂರ್ತಿ ಊಟಕ್ಕೇನು ತೊಂದರೆ ಇಲ್ಲ. ಸಂಸಾರಕ್ಕೆ ಬೇಕಾದಾಗ ಸ್ವಲ್ಪ ಸ್ವಲ್ಪ ಮಾರಿ ಸಂಸಾರ ನೀಗಿಸುತ್ತೇನೆ. ಸಜ್ಜೆ ಬೆಳೆ ನನ್ನ ಕೈ ಹಿಡಿದಿದೆ.

ಮಹಿಬೂಬ್ ಪಾಷಾ, ಸಗರ ಗ್ರಾಮದ ರೈತ.