ಶುದ್ಧ ಕುಡಿಯುವ ನೀರಿನ ಯೋಜನೆ ಸಾಕಾರ: ಜ್ಞಾನೇಂದ್ರ

| Published : Mar 10 2024, 01:34 AM IST

ಶುದ್ಧ ಕುಡಿಯುವ ನೀರಿನ ಯೋಜನೆ ಸಾಕಾರ: ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

2024ರೊಳಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ ಆಶ್ವಾಸನೆಯಂತೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಆದ್ಯತೆಯನ್ನು ನೀಡಿದೆ. ಜನಪರವಾದ ಈ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ 2024ರೊಳಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ ಆಶ್ವಾಸನೆಯಂತೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಆದ್ಯತೆಯನ್ನು ನೀಡಿದೆ. ಜನಪರವಾದ ಈ ಯೋಜನೆ ಸಾಕಾರಗೊಳ್ಳುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸರ ಗ್ರಾಮದಲ್ಲಿ ಶನಿವಾರ ₹68 ಲಕ್ಷ ವೆಚ್ಚದ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಅಶುದ್ಧವಾದ ಕುಡಿಯುವ ನೀರಿನಿಂದಾಗಿ ಶೇ.80 ಭಾಗ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಈ ಸಮಸ್ಯೆ ನಿವಾರಿಸಲು ತಾಲೂಕಿನ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ₹500 ಕೋಟಿ ಅನುದಾನ ನೀಡಿದೆ ಎಂದರು.

ಈ ಹಿಂದೆ ಕುಡಿಯಲು ಗದ್ದೆಯಲ್ಲಿರುವ ಗುಮ್ಮಿ ಕೆರೆಯ ನೀರನ್ನು ಬಳಸಲಾಗುತ್ತಿತ್ತು. ಆದರೆ, ಈಗ ಜನರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧೀಕೃತ ನೀರು ಅನಿವಾರ್ಯವಾಗಿದೆ. ವಿದ್ಯುತ್ ಮತ್ತು ಕಾರ್ಮಿಕರ ಸಮಸ್ಯೆಯಿಂದ ನೀರನ್ನು ಒದಗಿಸುವ ಸಮಸ್ಯೆಯೂ ಎದುರಾಗಿದೆ. ಈ ಸಲುವಾಗಿ ತಾಲೂಕಿನ 36 ಗ್ರಾಪಂಗಳಿಗೆ ಶಾಶ್ವತವಾಗಿ ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸಲು ಬಹುಗ್ರಾಮ ಯೋಜನೆಯಡಿ ₹344 ಕೋಟಿ ಅನುದಾನ ಮಂಜೂರಾಗಿದೆ. ಜನರ ಆರೋಗ್ಯ ಸುಧಾರಿಸಿದರೆ ಜನಪ್ರತಿನಿಧಿಗಳಾದ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.

ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪವಾರ್, ಉಪಾಧ್ಯಕ್ಷ ಜಯಣ್ಣ, ಸದಸ್ಯ ಗುರುಮೂರ್ತಿ, ತಾಪಂ ಮಾಜಿ ಸದಸ್ಯರಾದ ಟಿ.ಮಂಜುನಾಥ್ ಹಾಗೂ ಭಾರತಿ ಸುರೇಶ್, ಗಿರೀಶ್ ಭಂಡಾರಿ ಇದ್ದರು.

- - - -09ಟಿಟಿಎಚ್01:

ತೀರ್ಥಹಳ್ಳಿ ತಾಲೂಕು ಹಿರೇಸರ ಗ್ರಾಮದಲ್ಲಿ ₹68 ಲಕ್ಷ ವೆಚ್ಚದ ಜಲಜೀವನ್ ಮಿಷನ್ ಯೋಜನೆಗೆ ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ರಾಘವೇಂದ್ರ ಪವಾರ್, ತಾಪಂ ಮಾಜಿ ಸದಸ್ಯರಾದ ಟಿ.ಮಂಜುನಾಥ್, ಭಾರತಿ ಸುರೇಶ್ ಇದ್ದರು.