ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಡು ನೃತ್ಯದ ಜಿದ್ದಾಜಿದ್ದಿನ ಸ್ಪರ್ಧೆ, ಮನರಂಜನೆಯ ಮಹಾಪೂರ, ತಿನಿಸುಗಳ ಆಗರವಾಗಿ ಬೆಂಗಳೂರಿನ ಅತೀ ದೊಡ್ಡ ಫುಡ್, ಫ್ಯಾಷನ್, ಫನ್ ಉತ್ಸವ ‘ಆರ್.ಆರ್.ನಗರ ಸಂಭ್ರಮ’ ಕಳೆಗಟ್ಟಿದೆ.
ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್‌ನಿಂದ ಜ್ಞಾನಭಾರತಿ ವಾರ್ಡ್‌ನ ಮಲ್ಲತ್ತಹಳ್ಳಿ ಮೈದಾನ ನಾಲ್ವಡಿ ಕೃಷ್ಣರಾಜ ಒಡೆಯರ್ ಉದ್ಯಾನವನದಲ್ಲಿ ನಡೆಯುತ್ತಿರುವ ಆರ್.ಆರ್.ನಗರದ ಸಂಭ್ರಮ ವಾರಾಂತ್ಯದ ಹಿನ್ನೆಲೆಯಲ್ಲಿ ಇಮ್ಮಡಿಯಾಗಿತ್ತು.
ಇಡೀ ದಿನ ನಡೆದ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಸಾವಿರಾರು ಜನತೆ ಪಾಲ್ಗೊಂಡು ಸಂಭ್ರಮಿಸಿದರು. ಅದರಲ್ಲೂ ಸಂಜೆ ನಡೆದ ಸಂಗೀತ ಕಾರ್ಯಕ್ರಮ ಶ್ರೋತೃಗಳನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿತು. ಮಕ್ಕಳಿಗಾಗಿ ನಡೆದ ಕ್ಯೂಟ್‌ಬೇಬಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಚಿಣ್ಣರು ಬಣ್ಣಬಣ್ಣದ ಧಿರಿಸಿನಲ್ಲಿ ಆಕರ್ಷಿಸಿದರು.
ಬಳಿಕ ನಡೆದ ‘ಮಿನಿಟ್ ಟು ವಿನ್ ಇಟ್’ ಒಂದು ನಿಮಿಷದ ಮನರಂಜನಾ ಕಾರ್ಯಕ್ರಮ ನೆರೆದವರ ಮನ ರಂಜಿಸಿದರೆ ಬಳಿಕ ಜರುಗಿದ ಮಿಮಿಕ್ರಿ ಗೋಪಿ ಅವರ ಹಾಸ್ಯಕ್ಕೆ ಹಾಗೂ ಲೋಕೇಶ್, ಮಂಜು ಹಾಸನ್, ವೈಷ್ಣವಿ ಮೆಲೋಡಿಸ್ ತಂಡ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಬಳಿಕ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಇದಲ್ಲದೆ 30ಕ್ಕೂ ಹೆಚ್ಚಿನ ಬಗೆ ಬಗೆಯ ಖಾದ್ಯಗ ಮಳಿಗೆಗಳು ಜನರ ನೆಚ್ಚಿನ ತಾಣಗಳಾಗಿದ್ದವು. ಅದರಲ್ಲೂ ದಾವಣಗೆರೆ ಬೆಣ್ಣೆ ದೋಸೆ, ಬೋಂಡ ಬಜ್ಜಿ, ಪೊಟ್ಯಾಟೋ ಟ್ವಿಸ್ಟರ್, ಅವರೆಕಾಳು ದೋಸೆ, ಪುಳಿಯೊಗರೆ, ಚೈನಿಸ್ ತಿನಿಸುಗಳು, ವಡಾಪಾವ್, ಪಾವ್‌ಬಾಜಿ ಸೇರಿದಂತೆ ಹಲವು ಖಾದ್ಯಗಳನ್ನು ಜನತೆ ಇಷ್ಟಪಟ್ಟು ಸವಿದರು.
ಕುಟುಂಬ ಸಮೇತ ಆಗಮಿಸಿ ತಿನಿಸುಗಳನ್ನು ಮೆಲ್ಲುತ್ತ ಮನರಂಜನಾ ಕಾರ್ಯಕ್ರಮ ನೋಡಿದರು. ಇನ್ನು ಶಾಪಿಂಗ್ ಪ್ರಿಯರಿಗೆಂದು ತೆರೆದ್ದಿದ್ದ ಹತ್ತಾರು ಮಳಿಗೆಗಳ ಮುಂದೆ ಮಹಿಳೆಯರು ದಾಂಗುಡಿ ಇಟ್ಟಿದ್ದರು. ಗೃಹೋಪಯೋಗಿ ವಸ್ತುಗಳು, ಕಿವಿಯೋಲೆ, ಬಳೆಗಳನ್ನು ನೋಡುತ್ತ, ಖರೀದಿ ಮಾಡುತ್ತಿರುವ ದೃಶ್ಯ ಇಡೀ ದಿನ ಕಂಡುಬಂತು.
ಇಂದೇನು ಸಂಭ್ರಮ?
ಸಂಜೆ 5 ರಿಂದ6 ಗಂಟೆವರೆಗೆ ‘ಶಿವರಾತ್ರಿ’ ವಿಷಯದಡಿ ಚಿತ್ರಕಲಾ ಸ್ಪರ್ಧೆ, 6-7ರರೆಗೆ ‘ಸಾಂಪ್ರದಾಯಿಕ ಉಡುಗೆ’ ಫ್ಯಾಷನ್ ಶೋ, 7-7.30ರವರೆಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
7.30-8 ಗಂಟೆವರೆಗೆ ಸಾಗರ್ ತುರುವೆಕೆರೆ ಅವರಿಂದ ಹಾಸ್ಯ ಸಂಜೆ, 8-10 ಗಂಟೆವರೆಗೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.