ತೆಂಗಿನ ಸಸಿಗಳಿಗೆ ಕಾಂಡ ಕೊರಕ ಜೀರುಂಡೆ, ಮುಳ್ಳು ಹಂದಿಗಳ ಕಾಟ

| Published : Mar 10 2024, 01:34 AM IST

ತೆಂಗಿನ ಸಸಿಗಳಿಗೆ ಕಾಂಡ ಕೊರಕ ಜೀರುಂಡೆ, ಮುಳ್ಳು ಹಂದಿಗಳ ಕಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆ ಬಯಲು ಮತ್ತು ಹೇಮಾವತಿ ನದಿಯ ಒಡ್ಡು ನಾಲೆಗಳಾದ ಮಂದಗೆರೆ, ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ರೈತರು ತೆಂಗು ಮತ್ತು ಅಡಿಕೆ ಕೃಷಿಯಲ್ಲಿ ಹೆಚ್ಚು ತೊಡಗುತ್ತಿದ್ದು, ಇದರಿಂದ ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಅರೆ ನೀರಾವರಿ ಪ್ರದೇಶದಲ್ಲೂ ತೆಂಗು ಬೆಳೆ ವಿಸ್ತಾರಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತೆಂಗಿನ ಸಸಿಗಳಿಗೆ ಕಾಂಡ ಕೊರಕ ಜೀರುಂಡೆಗಳು ಮತ್ತು ಮುಳ್ಳು ಹಂದಿಗಳ ಕಾಟ ಹೆಚ್ಚಾಗಿರುವುದರಿಂದ ತಾಲೂಕಿನ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆರೆ ಬಯಲು ಮತ್ತು ಹೇಮಾವತಿ ನದಿಯ ಒಡ್ಡು ನಾಲೆಗಳಾದ ಮಂದಗೆರೆ, ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ರೈತರು ತೆಂಗು ಮತ್ತು ಅಡಿಕೆ ಕೃಷಿಯಲ್ಲಿ ಹೆಚ್ಚು ತೊಡಗುತ್ತಿದ್ದು, ಇದರಿಂದ ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಅರೆ ನೀರಾವರಿ ಪ್ರದೇಶದಲ್ಲೂ ತೆಂಗು ಬೆಳೆ ವಿಸ್ತಾರಗೊಳ್ಳುತ್ತಿದೆ.

ತೋಟಗಾರಿಕಾ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಪ್ರಸ್ತುತ 28 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. 10 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಅಡಿಕೆ ಬೇಸಾಯ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಕೆ.ಆರ್.ಪೇಟೆ ಮತ್ತು ಕಿಕ್ಕೇರಿ ಎಪಿಎಂಸಿಯಲ್ಲಿ ತೆಂಗಿನ ಕಾಯಿ, ಎಳನೀರು ಮಾರಾಟದ ಜೊತೆಗೆ ಅಡಿಕೆ ಮಾರುಕಟ್ಟೆಯೂ ವಿಸ್ತಾರಗೊಳ್ಳುತ್ತಿದೆ. ಅಡಿಕೆ ಸಂಸ್ಕರಣಾ ಘಟಗಳೂ ಗ್ರಾಮೀಣ ಪ್ರದೇಶದಲ್ಲಿ ತಲೆಯೆತ್ತುತ್ತಿವೆ.

ಭತ್ತ ಮತ್ತು ಕಬ್ಬಿನ ಬೇಸಾಯ ತ್ಯಜಿಸಿ ತೆಂಗು ಮತ್ತು ಅಡಿಕೆ ಬೇಸಾಯದತ್ತ ಮುಖ ಮಾಡಿರುವ ರೈತರಿಗೆ ಕಾಂಡ ಕೊರಕ ಜೀರುಂಡೆಗಳ ಕಾಟ ಮತ್ತು ಮುಳ್ಳುಹಂದಿಗಳ ಹಾವಳಿಯಿಂದ ತಮ್ಮ ತೆಂಗಿನ ಸಸಿಗಳನ್ನು ಸಂರಕ್ಷಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ.

4 ರಿಂದ 5 ವರ್ಷದ ತೆಂಗಿನ ಸಸಿಗಳ ಬುಡವನ್ನು ತಿನ್ನುವ ಜೀರುಂಡೆಗಳು ತೆಂಗಿನ ಕಾಂಡದಲ್ಲಿಯೇ ಮೊಟ್ಟೆಯಿಟ್ಟು ಮರಿ ಮಾಡಿ ಬೆಳೆಯುತ್ತಿದ್ದು, ತೆಂಗಿನ ಸಸಿಗಳು ಸುಳಿ ಸಮೇತ ಒಣಗಿ ಹೋಗುವಂತೆ ಮಾಡುತ್ತಿವೆ. ಬಲಿಷ್ಠ ತೆಂಗಿನ ಸಸಿಗಳ ಬುಡವನ್ನು ಕಾಡುಹಂದಿಗಳು ಕತ್ತರಿಸಿ ಹಾಕುತ್ತಿವೆ.

ತೆಂಗಿನ ಗಿಡಗಳ ರಕ್ಷಣೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ದಿವ್ಯ ನಿರ್ಲಕ್ಷ್ಯ ತಾಳಿವೆ. ಜೀರುಂಡೆ ನಿಯಂತ್ರಣಕ್ಕೆ ಮೋಹಕ ಬಲೆ ಮತ್ತು ಟ್ರ್ಯಾಕ್ ಡಬ್ಬಿ ಅಳವಡಿಕೆ ಕ್ರಮವನ್ನು ಕೆಲ ರೈತರು ಅನುಸರಿಸುತ್ತಿದ್ದಾರೆ. ಟ್ರ್ಯಾಕ್ ಡಬ್ಬಕ್ಕೆ ಒಂದು ಬಗೆಯ ಸುವಾಸನೆಯುಕ್ತ ದ್ರಾವಣ ಹಾಕಿದರೆ ಜೀರುಂಡೆಗಳು ಸುವಾಸನೆಗೆ ಆಕರ್ಷಿತವಾಗಿ ಬಂದು ಡಬಡಿಯಲ್ಲಿ ಬೀಳುತ್ತವೆ. ಜೀರುಂಡೆಗಳನ್ನು ಆಕರ್ಷಿಸುವ ಟ್ರ್ಯಾಕ್ ಡಬ್ಬಿಗಳನ್ನು ಪ್ರತಿ ಗಿಡಕ್ಕೂ ಅಳವಡಿಸಬೇಕು.

ಖಾಸಗಿಯವರಲ್ಲಿ ಈ ಡಬ್ಬಿಗಳನ್ನು ಕೊಂಡುಕೊಳ್ಳಲು ರೈತ ಪ್ರತಿ ಡಬ್ಬಿಗೆ 300 ರಿಂದ 400 ರು. ಪಾವತಿಸಬೇಕು. ಇದು ರೈತರಿಗೆ ಅಧಿಕ ವೆಚ್ಚವಾಗುತ್ತಿದೆ. ಮುಳ್ಳು ಹಂದಿಗಳ ಕಾಟದ ನಿಯಂತ್ರಣಕ್ಕೆ ಪರಿಹಾರವೇ ಇಲ್ಲದಂತಾಗಿದೆ. ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ಯಾವುದೇ ಮಾರ್ಗದರ್ಶನ ನೀಡುತ್ತಿಲ್ಲ ಎಂದು ದೂರಿದ್ದಾರೆ.

ರಾಜ್ಯದಲ್ಲಿ ತೆಂಗು ಅಭಿವೃದ್ದಿ ಮಂಡಳಿ ಇದ್ದರೂ ಅದು ಬೆಳೆಗಾರರ ನೆರವಿಗೆ ಬರುತ್ತಿಲ್ಲ. ಸರ್ಕಾರ ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಗಂಭೀರ ಪ್ರಯತ್ನ ಮಾಡಬೇಕು. ಜೀರುಂಡೆಗಳ ನಿಯಂತ್ರಣಕ್ಕೆ ಅಳವಡಿಸುವ ಟ್ರ್ಯಾಕ್ ಡಬ್ಬಗಳಿಗೆ ಸಹಾಯ ಧನ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ತೆಂಗು ಬೆಳೆಗೆ ಕೀಟ ಭಾದೆ ಮತ್ತು ಕಾಡು ಪ್ರಾಣಿಗಳ ಹಾವಳಿ ತುಂಬಾ ಗಂಭೀರವಾದುದು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರೇ ಕೃಷಿ ಸಚಿವರಾಗಿದ್ದಾರೆ. ಸಚಿವರ ಕ್ಷೇತ್ರದಲ್ಲಿ ತೋಟಗಾರಿಕಾ ಇಲಾಖೆಗಳು ರೈತರ ನೆರವಿಗೆ ಧಾವಿಸದೆ ನಿಷ್ಕ್ರಿಯವಾಗಿರುವುದು ದುರ್ದೈವ. ತಕ್ಷಣವೇ ಕೃಷಿ ಸಚಿವರು ಇಲಾಖಾ ಅಧಿಕಾರಿಗಳ ಸಭೆ ಕರೆದು ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು.

-ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ.

ತೆಂಗಿನ ಸಸಿಗಳಿಗೆ ಜೀರುಂಡೆ ಕಾಟ ನಿಯಂತ್ರಣಕ್ಕೆ ರೈತರಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದೆ. ಪ್ರತಿ ಎಕರೆಗೆ 2 ಸೆಟ್ ಮೋಹಕ ಬಲೆ ಬೇಕಿದ್ದು ಇಲಾಖೆ ಸಹಾಯ ಧನದ ಮೂಲಕ ವಿತರಿಸುತ್ತಿದೆ. ಟ್ರ್ಯಾಕ್ಸ್ ಡಬ್ಬಿಗಳಿಗೆ ಸಾಮಾನ್ಯ ವರ್ಗ ರೈತರಿಗೆ ಶೇ. 40 ಮತ್ತು ಪರಿಶಿಷ್ಟ ಜಾತಿ ವರ್ಗದ ರೈತರಿಗೆ ಶೇ.50 ಸಹಾಯ ಧನ ನೀಡಲಾಗುತ್ತಿದೆ. ಆದರೆ, ಮುಳ್ಳು ಹಂದಿಗಳ ಹಾವಳಿ ಬಗ್ಗೆ ರೈತರು ಯಾವುದೇ ಮಾಹಿತಿ ನೀಡಿಲ್ಲ.

- ಎಂ.ಡಿ.ಲೋಕೇಶ್, ಹಿರಿಯ ಸಹಾಯಕ ನಿರ್ದೇಶಕರು, ತಾಲೂಕು ತೋಟಗಾರಿಕೆ ಇಲಾಖೆ