ಗಂಗಾವಳಿ ಸೇತುವೆ ಮಣ್ಣು ಕುಸಿತ

| Published : Jun 10 2024, 12:51 AM IST

ಸಾರಾಂಶ

ಮಣ್ಣು ತುಂಬಿದ ಜಾಗದ ಸುತ್ತ ಗೋಡೆ ಅಥವಾ ಪಿಚ್ಚಿಂಗ್ ನಿರ್ಮಿಸದೆ ಬಿಟ್ಟ ಪರಿಣಾಮ ಈ ಆವಾಂತರವಾಗಿದೆ. ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಗೋಕರ್ಣ: ಗಂಗಾವಳಿ- ಮಂಜುಗುಣಿ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಕೂಡು ರಸ್ತೆಯ ಗಂಗಾವಳಿ ಭಾಗದಲ್ಲಿ ಭಾರಿ ಮಳೆಗೆ ಮಣ್ಣು ಕುಸಿದಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ.

ಕಳೆದ ಆರು ವರ್ಷದಿಂದ ಸೇತುವೆ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿ ಕಳೆದ ವರ್ಷ ಸೇತುವೆ ಪೂರ್ಣಗೊಂಡರೂ ಕೂಡು ರಸ್ತೆ ಮಾಡದೆ ಬಿಡಲಾಗಿತ್ತು. ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಹೋರಾಟಜ ಬಳಿಕ ಬೈಕ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಆದರೆ ಕೆಲಸ ಹಾಗೆ ಬಿಟ್ಟಿದ್ದರಿಂದ ಕಾಮಗಾರಿ ತ್ವರಿತಗೊಳಿಸಿ ಎಲ್ಲ ವಾಹನಗಳ ಸಂಚರಿಸಲು ವ್ಯವಸ್ಥೆ ಮಾಡಿಕೊಡುವಂತೆ ಈ ಭಾಗದ ಜನರು ಆಗ್ರಹಿಸಿದ್ದರು. ಇಲ್ಲವಾದಲ್ಲಿ ಲೋಕಸಭಾ ಚುಣಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದರು. ಇದರಿಂದ ಎಚ್ಚೆತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತರಾತುರಿಯಲ್ಲಿ ಎರಡು ಕಡೆ ಮಣ್ಣು ತುಂಬಿ ಕೂಡು ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರು. ಆದರೆ ಮಣ್ಣು ತುಂಬಿದ ಜಾಗದ ಸುತ್ತ ಗೋಡೆ ಅಥವಾ ಪಿಚ್ಚಿಂಗ್ ನಿರ್ಮಿಸದೆ ಬಿಟ್ಟ ಪರಿಣಾಮ ಈ ಆವಾಂತರವಾಗಿದೆ. ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಪರದಾಡಿದ ಪ್ರವಾಸಿಗರು: ಅಂಕೋಲಾ, ಕಾರವಾರ ಕಡೆಯಿಂದ ನಿತ್ಯ ಪ್ರವಾಸಿ ಹಾಗೂ ಸ್ಥಳೀಯ ನೂರಾರು ವಾಹನಗಳು ಗೋಕರ್ಣಕ್ಕೆ ಇದೇ ಮಾರ್ಗದಲ್ಲಿ ತೆರಳುತ್ತದೆ. ಭಾನುವಾರ ವಾಹನಗಳು ತಿಳಿಯದೆ ಈ ಸ್ಥಳಕ್ಕೆ ಬಂದಾಗ ಮುಂದೆ ಹೋಗಲಾಗದೆ ಪರದಾಡಿದರು. ಅಂತೂ ಇಕ್ಕಟ್ಟಾದ ರಸ್ತೆಯಲ್ಲಿ ಹರಸಾಹಸ ಮಾಡಿ ವಾಹನ ದಾಟಿಸಲಾಯಿತು.