ಸಾರಾಂಶ
ಗೋಕರ್ಣ: ಗಂಗಾವಳಿ-ಮಂಜುಗುಣಿ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಕೂಡು ರಸ್ತೆ ಕಾಮಗಾರಿ ಪ್ರಾರಂಭದಲ್ಲಿ ವೇಗ ಪಡೆದು ಕೊನೆಯ ಹಂತದಲ್ಲಿ ನಿಧಾನವಾಗುತ್ತಿದ್ದು, ಗುತ್ತಿಗೆ ಕಂಪನಿ ಹೇಳಿದಂತೆ ಮಾ.25ಕ್ಕೆ ವಾಹನ ಸಂಚಾರಕ್ಕೆ ಮುಕ್ತವಾಗುವುದು ಅಸಾಧ್ಯವಾಗಿದೆ.
ಕಳೆದ ಏಳು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಸೇತುವೆ ಕಾಮಗಾರಿಯು ಸಾರ್ವಜನಿಕರು, ಸಂಘ ಸಂಸ್ಥೆಯ ಮನವಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ತುಸು ವೇಗ ಪಡೆದು ಅಂತೂ ಮೂರು ವರ್ಷದ ಹಿಂದೆ ಸೇತುವೆ ಪೂರ್ಣಗೊಂಡಿತ್ತು. ನಂತರ ಕೂಡು ರಸ್ತೆ ನಿರ್ಮಾಣ ವಿಳಂಬವಾಗಿತ್ತು. ಅಂತೂ ಅರೆಬರೆ ಕೂಡು ರಸ್ತೆಯಲ್ಲಿಯೇ ಮತ್ತೆ ಜನರ ಹೋರಾಟದ ಫಲವಾಗಿ ಜನಪ್ರತಿನಿಧಿ, ಅಧಿಕಾರಿಗಳ ಸಹಕಾರದಿಂದ ಲಘು ಹಾಗೂ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಅಪಾಯಕಾರಿ ಈ ರಸ್ತೆಯನ್ನು ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡುವಂತೆ ಜನರ ಆಗ್ರಹದ ಮೇರೆಗೆ ಜನಪ್ರತಿನಿಧಿಗಳ ಪ್ರಯತ್ನದಿಂದ ಕಳೆದ ಒಂದೂವರೆ ತಿಂಗಳ ಹಿಂದೆ ಕೆಲಸ ಪ್ರಾರಂಭವಾಗಿತ್ತು. ಈ ತಿಂಗಳ ಕೊನೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆ ನೀಡಲಾಗಿತ್ತು.ಏನಾಗಿದೆ ಏನಾಗಬೇಕು?:ಪ್ರಸ್ತುತ ಗಂಗಾವಳಿ ಭಾಗದ ಕೂಡು ರಸ್ತೆ ಬಹುತೇಕ ಮುಗಿದಿದೆ. ಆದರೆ ಮಂಜುಗುಣಿ ಭಾಗದಲ್ಲಿ ಅಂಡರ್‌ಪಾಸ್ ಸ್ಲಾಬ್ ಹಾಕಲಾಗಿದ್ದು, ಇದನ್ನು ೪೫ ದಿನಗಳವರೆಗೆ ಬಳಕೆ ಮಾಡಲಾಗುವುದಿಲ್ಲ. ಇದರ ಮುಂಭಾಗದಿಂದ ಸೇತುವೆ ಸಂಪರ್ಕಕ್ಕೆ ಬೃಹತ್ ಪ್ರಮಾಣದಲ್ಲಿ ಮಣ್ಣು ತುಂಬಿಕೊಡಬೇಕಿದೆ. ಇವೆಲ್ಲ ಪೂರ್ಣಗೊಳಿಸಿ ತುಂಬಿದ ಮಣ್ಣು ಹದಗೊಳಿಸುವುದರ ಜೊತೆ ಸಿಮೆಂಟ್ ಅಥವಾ ಡಾಂಬರೀಕರಣ ಮಾಡಬೇಕಿದೆ. ಸೇತುವೆಯ ಮೇಲೆಯೂ ಡಾಂಬರೀಕರಣ ಹಾಗೂ ಮತ್ತಿತರ ಕೆಲಸ ಬಾಕಿ ಉಳಿದಿದೆ. ಇಷ್ಟೊಂದು ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಕಳೆಯುತ್ತದೆ ಎನ್ನಲಾಗಿದೆ.
ಹುಬ್ಬಳ್ಳಿ -ಅಂಕೋಲಾ, ಗೋವಾ ರಾಜ್ಯದಿಂದ ಪ್ರವಾಸಿ ತಾಣ ಗೋಕರ್ಣಕ್ಕೆ ಸಂಪರ್ಕ ಕಲ್ಪಿಸುವ ಹತ್ತಿರದ ಮಾರ್ಗ ಬಳಕೆಗೆ ಇನ್ನಷ್ಟು ದಿನ ಕಾಯಬೇಕಾಗಿದೆ. ಜತೆಗೆ ಅಂಕೋಲಾ, ಕಾರವಾರಕ್ಕೆ ತೆರಳುವ ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ತೆರಳುವ ಜನರಿಗೆ ತೊಂದರೆ ಮುಂದುವರಿದಿದೆ.ನಾವು ಗಡುವು ನೀಡಿದ ಅವಧಿ ಮುಗಿಯುತ್ತಿದೆ. ಇನ್ನು ಕೆಲಸ ಪೂರ್ಣಗೊಂಡಿಲ್ಲ. ಆರಂಭದಲ್ಲಿನ ಕೆಲಸದ ವೇಗ ಈಗ ಇಲ್ಲ. ತ್ವರಿತವಾಗಿ ಕಾಮಗಾರಿ ಮುಗಿಸಬೇಕು. ಈ ತಿಂಗಳ ಕೊನೆಯಲ್ಲಿ ಮುಖ್ಯ ಎಂಜಿನಿಯರ್, ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದಾರೆ. ಈ ವೇಳೆ ಚರ್ಚಿಸಿ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳುತ್ತೇವೆ ಎನ್ನುತ್ತಾರೆ ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ.
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ನಿತ್ಯ ಪರೀಕ್ಷಾ ಕೇಂದ್ರಕ್ಕೆ ತೆರಳಲು ತೊಂದರೆಯಾಗುತ್ತಿದೆ. ಏಳು ವರ್ಷದಿಂದಲೂ ಒಂದಿಲ್ಲೊಂದು ಕಾರಣದಿಂದ ವಿಳಂಬವಾಗುತ್ತಿದೆ. ಈ ಬಾರಿಯಾದರೂ ತ್ವರಿತವಾಗಿ ಪೂರ್ಣಗೊಳಿಸುತ್ತಾರೆ ಎಂಬ ಭರವಸೆ ಇತ್ತು. ಆದರೆ ಇದು ಹುಸಿಯಾಗಿದೆ. ಮಳೆಗಾಲದ ಒಳಗಾದರೂ ಸಂಚಾರಕ್ಕೆ ಅವಕಾಶ ನೀಡಲಿ ಎನ್ನುತ್ತಾರೆ ಗಂಗಾವಳಿ ಸ್ಥಳೀಯ ನಿವಾಸಿ ಸದಾನಂದ ನಾಯ್ಕ.