ಬಹುಮತ ಹೊಂದಿದ ಬಿಜೆಪಿಯಲ್ಲಿ ಹೆಚ್ಚಿದ ಪೈಪೋಟಿ

| Published : Aug 21 2024, 12:39 AM IST

ಸಾರಾಂಶ

ಇಲ್ಲಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆ. 26ರಂದು ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಏರಲು ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ತೀವ್ರ ಪೈಪೋಟಿ ಹೆಚ್ಚಿದೆ.

ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ದಿನಗಣನೆ

ಆಡಳಿತ ಪಡೆಯಲು ಕಾಂಗ್ರೆಸ್‌ನಲ್ಲೂ ಯತ್ನ

ರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆ. 26ರಂದು ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಏರಲು ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ತೀವ್ರ ಪೈಪೋಟಿ ಹೆಚ್ಚಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲು ನಿಗದಿಯಾಗಿದೆ. ಪ್ರಸ್ತುತ ನಗರಸಭೆ ಒಟ್ಟು 35 ಸದಸ್ಯ ಬಲ ಹೊಂದಿದ್ದು, ಇದರಲ್ಲಿ ಬಿಜೆಪಿ 14, ಜೆಡಿಎಸ್ 2, ಪಕ್ಷೇತರ 2, ಶಾಸಕರು 1, ಮತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದ 10 ಸದಸ್ಯರು ಸೇರಿದಂತೆ 29 ಸದಸ್ಯರ ಬಲ ಬಿಜೆಪಿ ಹೊಂದಿದೆ. ಆದರೆ, ಕಾಂಗ್ರೆಸ್ ಕೇವಲ 7 ಸದಸ್ಯರು ಮತ್ತು ಸಂಸದರ 1 ಮತ ಸೇರಿ 8 ಸದಸ್ಯರ ಬಲ ಹೊಂದಿದೆ.

ಬಿಜೆಪಿಯಲ್ಲಿ ಪೈಪೋಟಿ:

ಬಿಜೆಪಿಗೆ ನಗರಸಭೆಯಲ್ಲಿ ಬಹುಮತ ಇದೆ ಎಂಬ ಕಾರಣಕ್ಕೆ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ. ಹಿಂದುಳಿದ ವರ್ಗಗಳ (ಅ) ಮೀಸಲಾತಿ ಆಗಿದ್ದರಿಂದ ಮೂಲ ಬಿಜೆಪಿಯವರಾದ 17ನೇ ವಾರ್ಡಿನ ನೀಲಕಂಠ ಕಟ್ಟಿಮನಿ, 19ನೇ ವಾರ್ಡಿನ ಅಜಯ್ ಬಿಚ್ಚಾಲಿ ಮತ್ತು 11ನೇ ವಾರ್ಡಿನ ಪರುಶರಾಮ ಮಡ್ಡೇರ್ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌ನಿಂದ ವಲಸೆ ಬಂದ ಅಲ್ಪಸಂಖ್ಯಾತರಾದ 10ನೇ ವಾರ್ಡಿನ ಮುಸ್ತಾಕಲಿ, 5ನೇ ವಾರ್ಡಿನ ಉಸ್ಮಾನ್ ಬಿಚ್ಚಗತ್ತಿ, 16ನೇ ವಾರ್ಡಿನ ಮೌಲಾಸಾಬ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನಿಂದ ಬಂದಿರುವ ಇವರಿಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಸೂಚಿಸಬೇಕೋ, ಬೇಡವೋ ಎನ್ನುವ ಬಗ್ಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 13ನೇ ವಾರ್ಡಿನ ಪಾರ್ವತಮ್ಮ ಹೆಸರು ಕೇಳಿ ಬರುತ್ತದೆ.

ಕಾಂಗ್ರೆಸ್:

ಕಾಂಗ್ರೆಸ್ ಕೇವಲ 7 ಸದಸ್ಯರು ಮತ್ತು ಓರ್ವ ಕಾಂಗ್ರೆಸ್ ಸಂಸದ ಸೇರಿದಂತೆ 8 ಸದಸ್ಯರ ಬಲ ಹೊಂದಿದೆ. ಆದರೂ ನಗರಸಭೆ ಆಡಳಿತದ ಚುಕ್ಕಾಣಿ ನಡೆಸಲು ಯತ್ನ ನಡೆಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆಆರ್‌ಪಿಪಿ ಪಕ್ಷ (ಈಗಿನ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ) ಬೆಂಬಲಿಸಿ 10 ಸದಸ್ಯರು ಹೋಗಿದ್ದರು. ಈಗ ಕಾಂಗ್ರೆಸ್‌ನಿಂದ ವಲಸೆ ಹೋದ 10 ಸದಸ್ಯರು, ಪಕ್ಷೇತರ ಓರ್ವ ಸದಸ್ಯರು ತಮಗೆ ಬೆಂಬಲ ಸೂಚಿಸುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸದಲ್ಲಿದೆ. ಇದರಿಂದಾಗಿ 19 ಸದಸ್ಯರು ಬಲ ತಮಗೂ ಇದೆ ಎಂದು ಹೇಳುತ್ತ ಅಧಿಕಾರ ಪಡೆಯುವ ಯತ್ನದಲ್ಲಿದೆ. ಪ್ರಮುಖವಾಗಿ 22ನೇ ವಾರ್ಡಿನ ಸುನೀತಾ ಶ್ಯಾವಿ, 8ನೇ ವಾರ್ಡಿನ ಖಾಸೀಂಸಾಬ ಗದ್ವಾಲ್, 23ನೇ ವಾರ್ಡಿನ ಅಭಿದಾ ಮುದ್ದಾಬಳ್ಳಿ ರೇಸ್ ನಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ32ನೇ ವಾರ್ಡಿನ ಹುಲಿಗೆಮ್ಮ ಕಿರಿಕಿರಿ ಹೆಸರು ಕೇಳಿಬರುತ್ತಿದೆ.