ಗಂಗೊಳ್ಳಿ ಅಗ್ನಿ ದುರಂತ: 1.75 ಕೋಟಿ ರು. ಪರಿಹಾರ ಮಂಜೂರು- ಯಶ್ಪಾಲ್ ಸುವರ್ಣ

| Published : Feb 21 2024, 02:10 AM IST

ಗಂಗೊಳ್ಳಿ ಅಗ್ನಿ ದುರಂತ: 1.75 ಕೋಟಿ ರು. ಪರಿಹಾರ ಮಂಜೂರು- ಯಶ್ಪಾಲ್ ಸುವರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮಾಲೀಕರಿಗೆ ರಾಜ್ಯ ಸರ್ಕಾರ 1.75 ಕೋಟಿ ರು. ಹಾಗೂ ಶಿರೂರಿನಲ್ಲಿ ಪ್ರವಾಹದಿಂದ ಹಾನಿಗೀಡಾದ ನಾಡದೋಣಿಗಳಿಗೆ 28 ಲಕ್ಷ ರು. ಪರಿಹಾರವನ್ನು ಮೀನುಗಾರರ ಸಂಕಷ್ಟ ಪರಿಹಾರನಿಧಿ ಮಂಜೂರು ಮಾಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ನವೆಂಬರ್‌ನಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೀನುಗಾರಿಕಾ ಬೋಟುಗಳು ಸುಟ್ಟು ಹೋಗಿ ಕೋಟ್ಯಂತರ ರುಪಾಯಿ ನಷ್ಟ ಅನುಭವಿಸಿದ ಮಾಲೀಕರಿಗೆ ರಾಜ್ಯ ಸರ್ಕಾರ 1.75 ಕೋಟಿ ರು. ಹಾಗೂ ಶಿರೂರಿನಲ್ಲಿ ಪ್ರವಾಹದಿಂದ ಹಾನಿಗೀಡಾದ ನಾಡದೋಣಿಗಳಿಗೆ 28 ಲಕ್ಷ ರು. ಪರಿಹಾರವನ್ನು ಮೀನುಗಾರರ ಸಂಕಷ್ಟ ಪರಿಹಾರನಿಧಿಯ ಮೂಲಕ ಮಂಜೂರು ಮಾಡಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಮೀನುಗಾರಿಕೆ ಸಚಿವ ಮಾಂಕಾಳ ಎಸ್. ವೈದ್ಯರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಮೀನುಗಾರರ ಸಂಕಷ್ಟ ಪರಿಹಾರನಿಧಿ ಸಮಿತಿಯ ಸಭೆಯಲ್ಲಿ ಈ ಪ್ರಕರಣದಿಂದ ಸಮಸ್ಯೆಗೀಡಾದ ಮೀನುಗಾರರಿಗೆ ಸೂಕ್ತ ಪರಿಹಾರ ನಿಟ್ಟಿನಲ್ಲಿ ಚರ್ಚಿಸಿ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಯಿತು.

ಗಂಗೊಳ್ಳಿ ಬೋಟ್ ಅಗ್ನಿ ಅವಘಡದಿಂದ ಬೋಟ್ ಮಾಲೀಕರು ಆರ್ಥಿಕವಾಗಿ ದೊಡ್ಡ ನಷ್ಟವನ್ನು ಎದುರಿಸಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಈ ಘಟನೆಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಮುಖ್ಯಮಂತ್ರಿಗಳ ಪರಿಹಾರನಿಧಿಯ ಮೂಲಕ ಗರಿಷ್ಠ ಪರಿಹಾರ ಒದಗಿಸುವಂತೆ ಸಭೆಯಲ್ಲಿ ಸಚಿವರಿಗೆ ಸಮಿತಿಯ ಸದಸ್ಯ ಶಾಸಕ ಯಶ್ಪಾಲ್‌ ಸುವರ್ಣ ಮನವಿ ಮಾಡಿದರು.

ಕರಾವಳಿ ಜಿಲ್ಲೆಯ ಸಮಸ್ತ ಮೀನುಗಾರರ ಮನವಿಯನ್ನು ಪರಿಗಣಿಸಿ ಪರಿಹಾರ ಮಂಜೂರಾತಿಗೆ ವಿಶೇಷ ಮುತುವರ್ಜಿವಹಿಸಿದ ಮೀನುಗಾರಿಕಾ ಸಚಿವರಾದ ಮಾಂಕಾಳ ಎಸ್. ವೈದ್ಯ, ಗರಿಷ್ಠ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಮೀನುಗಾರರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಯಶ್ಪಾಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.