ದರೋಡೆಕೋರರು, ಜೂಜುಕೋರರು ರಾಜಕಾರಣಕ್ಕೆ: ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

| Published : Apr 22 2024, 02:03 AM IST

ದರೋಡೆಕೋರರು, ಜೂಜುಕೋರರು ರಾಜಕಾರಣಕ್ಕೆ: ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾರೋ ಅಯೋಗ್ಯನನ್ನು ಕರೆತಂದು ಮಾತನಾಡಿಸುತ್ತಾರೆ. ಅವರ ಮನೆಯಲ್ಲಿ ಯಾರು ಹೆಣ್ಣುಮಕ್ಕಳಿಲ್ಲವಾ? ಜೂಜಾಡಿಸುವವರನ್ನೆಲ್ಲಾ ರಾಜಕಾರಣಕ್ಕೆ ಕರೆತರುವವರಿಗೆ ನಾಚಿಕೆಯಾಗಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಾಂಗ್ರೆಸ್‌ನವರು ಜೂಜುಕೋರರು, ದರೋಡೆಕೋರರು, ಹಲಾಲ್‌ಟೋಪಿಗಳನ್ನೆಲ್ಲಾ ರಾಜಕಾರಣಕ್ಕೆ ಕರೆತರುತ್ತಿದ್ದಾರೆ ಎಂದು ಹೇಳುವ ಮೂಲಕ ಮದ್ದೂರು ಶಾಸಕ ಕೆ.ಎಂ.ಉದಯ್‌ ರನ್ನು ಗುರಿಯಾಗಿಸಿಕೊಂಡು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜೆಡಿಎಸ್‌-ಬಿಜೆಪಿ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರೋ ಅಯೋಗ್ಯನನ್ನು ಕರೆತಂದು ಮಾತನಾಡಿಸುತ್ತಾರೆ. ಅವರ ಮನೆಯಲ್ಲಿ ಯಾರು ಹೆಣ್ಣುಮಕ್ಕಳಿಲ್ಲವಾ? ಜೂಜಾಡಿಸುವವರನ್ನೆಲ್ಲಾ ರಾಜಕಾರಣಕ್ಕೆ ಕರೆತರುವವರಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.

ಜಿಲ್ಲೆಯ ರಾಜಕಾರಣಕ್ಕೆ ತನ್ನದೇ ಆದ ಘನತೆ-ಗೌರವಗಳಿವೆ. ಮುತ್ಸದ್ಧಿ ನಾಯಕರು ರಾಜಕಾರಣ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇನ್ನಾದರೂ ಸುಸಂಸ್ಕೃತರನ್ನು ರಾಜಕಾರಣಕ್ಕೆ ಕರೆತರುವಂತೆ ಸಲಹೆ ನೀಡಿದರು.

ಒಕ್ಕಲಿಗರ ನಾಯಕತ್ವಕ್ಕೆ ಪರದಾಡುತ್ತಿದ್ದಾರೆ. ನಂಜನಗೂಡು ಹತ್ತಿರ ಬಸ್ ಬಿದ್ದಾಗ ಡಿ.ಕೆ.ಶಿವಕುಮಾರ್‌ಗೆ ಒಕ್ಕಲಿಗರು ನೆನಪಾಗಲಿಲ್ಲ, ಕನಗನಮರಡಿ ಬಸ್ ದುರಂತ ಸಂಭವಿಸಿದಾಗಲೂ ಕುಮಾರಸ್ವಾಮಿಯವರೇ ಬಂದು ಸಾಂತ್ವನ ಹೇಳಬೇಕಾಯಿತು. ಕೇವಲ ಒಬ್ಬ ಕಂಟ್ರ್ಯಾಕ್ಟರ್ ಗೆ ಅನುಕೂಲ ಮಾಡಿಕೊಡಲು ನಮ್ಮ ಕೆರೆ- ಕಟ್ಟೆಗಳನ್ನು ಒಣಗಿಸಿದರು ಎಂದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಕಾಂಗ್ರೆಸ್‌ನವರು ಅಧಿಕಾರದ ದುರಹಂಕಾರದಲ್ಲಿ ಮೆರೆಯುತ್ತಿದ್ದಾರೆ. ರಾಷ್ಟ್ರಕ್ಕೆ ಒಂದು ಪ್ರಣಾಳಿಕೆ, ಮಂಡ್ಯಕ್ಕೆ ಒಂದು ಪ್ರಣಾಳಿಕೆ ಮಾಡಿದ್ದಾರೆ. ಸುರ್ಜೇವಾಲ ಬಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಸುರ್ಜೇವಾಲ ಜೀ ನಿಮ್ಮ ಪ್ರಣಾಳಿಕೆ ಇಲ್ಲಿ ನಡೆಯೋಲ್ಲ. ಮಂಡ್ಯ ಜನ ಸ್ವಾಭಿಮಾನದ ಜನಗಳು. ನೀವು ದೆಹಲಿಗೆ ಹೋಗ್ತಾ ಇರಿ ಸುರ್ಜೇವಾಲ ಜೀ ಎಂದು ಅಣಕಿಸಿದರು.

ಡಾ.ಎಚ್‌.ಎನ್‌.ರವೀಂದ್ರ ಮಾತನಾಡಿ, ಭಾವನೆಗಳು ಇರುವವರು ಅಳುತ್ತಾರೆ, ನಗುತ್ತಾರೆ. ಭಾವನೆಗಳಿಲ್ಲದಿರುವವರು ಮನುಷ್ಯರೇ ಅಲ್ಲ. ಎಲ್ಲಾ ಸಮಯದಲ್ಲೂ ಒಂದೇ ರೀತಿ ನಾಟಕ ಮಾಡಿಕೊಂಡು ಇರಲಾಗುವುದಿಲ್ಲ. ಕುಮಾರಸ್ವಾಮಿ ಗೆದ್ದರೆ ಕೇಂದ್ರ ಸಚಿವರಾಗುತ್ತಾರೆ‌. ಕೃಷಿ ಮತ್ತು ರಸಗೊಬ್ಬರ ಖಾತೆಗಳು ಸಿಗಲಿ ಎಂಬುದು ನನ್ನ ಆಶಯವಾಗಿದೆ ಎಂದರು.

ಸ್ಟಾರ್ ಚಂದ್ರು ಗೆದ್ರೆ ಏನು ಮಾಡಬೇಕೆಂದರೂ ಚಲುವರಾಯಸ್ವಾಮಿ ಅವರನ್ನು ಕೇಳಬೇಕಾಗುತ್ತದೆ. ಇದಕ್ಕೆ ನಾವು ಅವಕಾಶ ಕೊಡಬಾರದು. ಡಿಕೆಶಿ ಬುಡಕ್ಕೂ ಡೈನಾಮೇಟ್ ಇಡಲು ಚಲುವರಾಯಸ್ವಾಮಿ ಪ್ಲಾನ್ ಹಾಕುತ್ತಿದ್ದಾರೆ.

ಮೈಷುಗರ್ ಆಸ್ತಿ ಅಡವಿಟ್ಟು ಹೊಸ ಕಾರ್ಖಾನೆ ಮಾಡುವುದಾಗಿ ಹೇಳುತ್ತಾರೆ. ನಮ್ಮ ಆಸ್ತಿ ಮಾರಿ ಹೊಸ ಕಾರ್ಖಾನೆ ಕಟ್ಟಲು ಇವರು ಯಾರು? ಎಂದು ಪ್ರಶ್ನಿಸಿದರು.

ನಾನು ಯಾವುದೇ ಪಕ್ಷ ಸೇರುವುದಿಲ್ಲ. ವ್ಯಕ್ತಿ ಆಧಾರಿತ ರಾಜಕಾರಣ‌ ಮಾಡುತ್ತೇನೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಜಿಲ್ಲೆ ಕೊಡುವುದು ಬೇಡ ಎಂದರು.