27ರಿಂದ ಗಂಗೂಬಾಯಿ ವಿವಿ ಸಂಗೀತ, ನೃತ್ಯ ಪರೀಕ್ಷೆ

| Published : Jul 23 2024, 12:31 AM IST

ಸಾರಾಂಶ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದಿಂದ 2024ನೇ ಸಾಲಿನ ಸಂಗೀತ ಮತ್ತು ನೃತ್ಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜುಲೈ 27ರಿಂದ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳನ್ನು ಒಳಗೊಂಡಂತೆ ದಾವಣಗೆರೆ ಮಹಾನಗರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಹತೀ ಸಂಗೀತ ಮಹಾ ವಿದ್ಯಾಲಯದ ಕಾರ್ಯದರ್ಶಿ ವಿದ್ವಾನ್ ಎಂ. ದ್ವಾರಕೀಶ ದಾವಣಗೆರೆಯಲ್ಲಿ ಹೇಳಿದ್ದಾರೆ.

- ನಗರದಲ್ಲಿ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಪರೀಕ್ಷೆ: ವಿದ್ವಾನ್ ದ್ವಾರಕೀಶ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದಿಂದ 2024ನೇ ಸಾಲಿನ ಸಂಗೀತ ಮತ್ತು ನೃತ್ಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜುಲೈ 27ರಿಂದ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳನ್ನು ಒಳಗೊಂಡಂತೆ ದಾವಣಗೆರೆ ಮಹಾನಗರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಹತೀ ಸಂಗೀತ ಮಹಾ ವಿದ್ಯಾಲಯದ ಕಾರ್ಯದರ್ಶಿ ವಿದ್ವಾನ್ ಎಂ. ದ್ವಾರಕೀಶ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರೂ ಜಿಲ್ಲೆಗಳಿಗೆ ದಾವಣಗೆರೆ ಪರೀಕ್ಷಾ ಕೇಂದ್ರವಾಗಿದ್ದು, ಇಲ್ಲಿನ ತರಳಬಾಳು ಬಡಾವಣೆಯ ಶರಣ ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯಲ್ಲಿ ಜು.27ರಿಂದ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ಪರೀಕ್ಷಾ ಕೇಂದ್ರವನ್ನು ಸಂಗೀತ ಮತ್ತು ನೃತ್ಯ ಪರೀಕ್ಷಾರ್ಥಿಗಳಿಗೆ ಅನುಕೂಲ ಆಗುವಂತೆ ಸಜ್ಜುಗೊಳಿಸಲಾಗಿದೆ ಎಂದರು.

ಸಂಗೀತ ಪರೀಕ್ಷೆಗಳ ಹಿನ್ನೆಲೆ ಜು.23ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಸಂಗೀತ, ನೃತ್ಯ ಶಾಲೆಗಳ ಕಲಾ ಶಿಕ್ಷಕರ ಸಭೆ ಕರೆಯಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಿದೆ. ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ಸಮಯಕ್ಕಿಂದ 30 ನಿಮಿಷ ಮುಂಚೆ ಪರೀಕ್ಷಾ ಕೇಂದ್ರದಲ್ಲಿರಬೇಕು. ವಾದ್ಯ ವಿಭಾಗದ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ವಾದ್ಯಗಳನ್ನು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ವಾದ್ಯಗಳು ಶೃತಿಬದ್ಧವಾಗಿರಬೇಕು. ಇಲ್ಲದಿದ್ದರೆ ಸಂಸ್ಥೆಯಾಗಲೀ, ವಿವಿಯಾಗಲೀ ಜವಾಬ್ದಾರಿಯಲ್ಲ ಎಂದರು.

ನೃತ್ಯ ವಿಭಾಗದ ವಿದ್ಯಾರ್ಥಿಗಳು ಅವಶ್ಯಕತೆಗೆ ಅನುಗುಣವಾದಷ್ಟು ಅಲಂಕಾರ, ವೇಷಭೂಷಣದೊಂದಿಗೆ ಪರೀಕ್ಷೆಯನ್ನು ನೀಡಲು ಅವಕಾಶವಿದೆ. ನಟುವಾಂಗ ಕಲಾವಿದರ ಹೆಸರುಗಳನ್ನು ನೀಡಬೇಕು. ಕರ್ನಾಟಕ, ಹಿಂದುಸ್ಥಾನಿ ಸಂಗೀತ ಹಾಡುಗಾರಿಕೆ, ವಾದ್ಯ ವಿಭಾಗದ ವಿದ್ಯಾರ್ಥಿಗಳು ತಾವು ಗುರುಮುಖೇನ ಅಭ್ಯಾಸ ಮಾಡಿರುವ ಪಾಠಾಂತರದ ಕ್ರಮಬದ್ಧವಾದ ಪಟ್ಟಿಯನ್ನು ಸ್ಪಷ್ಟವಾಗಿ ನೀಡಬೇಕು. ಅಪೂರ್ಣ ಪಟ್ಟಿ ನೀಡಿದರೆ ವಿವಿ ಮುಂದಿನ ಕ್ರಮಗಳಿಗೆ ಸಂಸ್ಥೆಯಾಗಲೀ, ವಿವಿಯಾಗಲೀ ಜವಾಬ್ದಾರಿ ಆಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೂರೂ ಜಿಲ್ಲೆಗಳಿಂದ ಒಟ್ಟು 496 ವಿದ್ಯಾರ್ಥಿಗಳು ದಾವಣಗೆರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 296 ವಿದ್ಯಾರ್ಥಿಗಳು ಕಿರಿಯ ವಿಭಾಗದಲ್ಲಿದ್ದರೆ, ಉಳಿದವರು ಹಿರಿಯ ಹಾಗೂ ವಿದ್ವತ್ ವಿಭಾಗದಲ್ಲಿ ಪರೀಕ್ಷೆ ಬರೆಯುವರು. ಜು.27ರ ಮಧ್ಯಾಹ್ನ 1ರಿಂದ ಶಾಸ್ತ್ರ ವಿಭಾಗದ ಜೂನಿಯರ್ ಪರೀಕ್ಷೆ ನಡೆಯಲಿವೆ. ಜು.28ರ ಬೆಳಿಗ್ಗೆ 10ಕ್ಕೆ ಪ್ರಥಮ ಅವಧಿ, ಶಾಸ್ತ್ರ ಪತ್ರಿಕೆ-1, ಮಧ್ಯಾಹ್ನ 1.30ರಿಂದ 2ನೇ ಅವಧಿಯ ಶಾಸ್ತ್ರ ಪತ್ರಿಕೆ-2ರ ಸೀನಿಯರ್‌, ವಿದ್ವತ್ ಮಾಧ್ಯಮ, ವಿದ್ವನ್ನುತ್ತಮ ಶಾಸ್ತ್ರ ವಿಭಾಗದ ಪರೀಕ್ಷೆ ನಡೆಯಲಿವೆ ಎಂದು ತಿಳಿಸಿದರು.

ಆ.3ರ ಮಧ್ಯಾಹ್ನ 12.30ರಿಂದ, ಆ.4ರ ಬೆಳಗ್ಗೆ 8ರಿಂದ, ಆ.10ರ ಮಧ್ಯಾಹ್ನ 12.30ರಿಂದ, ಆ.11ರ ಬೆಳಗ್ಗೆ 8ರಿಂದ ಹೀಗೆ ನಾಲ್ಕು ದಿನಗಳ ಕಾಲ ಸಂಗೀತ, ನೃತ್ಯ ಪರೀಕ್ಷೆಗಳ ಜೂನಿಯರ್‌, ಸೀನಿಯರ್ ಹಂತಗಳ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಪರೀಕ್ಷೆ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ವಿದ್ವಾನ್‌ ಎಂ.ದ್ವಾರಕೀಶ (ಮೊ-94488-72944), ನಿರ್ದೇಶಕಿ ಸವಿತಾ ಕೂಲಂಬಿ (99860-44145), ವಿದುಷಿ ಡಾ.ಮಂಗಳಾ ರಾಜಶೇಖರ (99017-15102), ವಿದುಷಿ ಬೃಂದಾ (80503-44291) ಅವರಿಗೆ ಸಂಪರ್ಕಿಸುವಂತೆ ದ್ವಾರಕೀಶ ಮನವಿ ಮಾಡಿದರು.

ಸಂಸ್ಥೆ ನಿರ್ದೇಶಕಿ ಸವಿತಾ ಕೂಲಂಬಿ, ವಿದುಷಿ ಡಾ.ಮಂಗಳಾ ರಾಜಶೇಖರ, ವಿದುಷಿ ಬೃಂದಾ, ರಾಜಶೇಖರ ಬೆನ್ನೂರು, ಪ್ರಾಧ್ಯಾಪಕ ಪ್ರೊ. ಕೆ.ಶ್ರೀಧರ್ ಇತರರು ಇದ್ದರು.

- - - -22ಕೆಡಿವಿಜಿ4:

ದಾವಣಗೆರೆಯಲ್ಲಿ ಸೋಮವಾರ ಮಹತೀ ಸಂಗೀತ ಮಹಾವಿದ್ಯಾಲಯದ ಕಾರ್ಯದರ್ಶಿ ವಿದ್ವಾನ್ ಎಂ.ದ್ವಾರಕೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.