ಜಾತಿಗಣತಿ ವರದಿ ವಿರುದ್ಧ ಗಾಣಿಗ ಸಮಾಜದವರ ಹೋರಾಟ: ಅಶೋಕ ನಾಗಲೋಟಿ

| Published : Mar 05 2024, 01:37 AM IST

ಜಾತಿಗಣತಿ ವರದಿ ವಿರುದ್ಧ ಗಾಣಿಗ ಸಮಾಜದವರ ಹೋರಾಟ: ಅಶೋಕ ನಾಗಲೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ನವನಗರದ ಜ್ಯೋತಿ ಕೋ-ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಗಾಣಿಗ ಸಮಾಜದ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ನಾಗಲೋಟಿ ಮಾತನಾಡಿ, ಇಂದು ಎಲ್ಲಾ ರಾಜಕೀಯ ಪಕ್ಷಗಳು ಗಾಣಿಗ ಸಮಾಜವನ್ನು ತುಳಿಯಲು ಹುನ್ನಾರ ಮಾಡುತ್ತಿವೆ ಎಂದು ಆರೋಪಿಸಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಂದು ಎಲ್ಲಾ ರಾಜಕೀಯ ಪಕ್ಷಗಳು ಗಾಣಿಗ ಸಮಾಜವನ್ನು ತುಳಿಯಲು ಹುನ್ನಾರ ಮಾಡುತ್ತಿವೆ ಎಂದು ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ನಾಗಲೋಟಿ ಆರೋಪಿಸಿದರು.

ನವನಗರದ ಜ್ಯೋತಿ ಕೋ-ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಗಾಣಿಗ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಜಾತಿಗಣತಿ ವರದಿಯನ್ನು ಜಯಪ್ರಕಾಶ ಹೆಗಡೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಗಾಣಿಗ ಸಮಾಜ ಕಡೆಗಣಿಸಲಾಗಿದೆ. ಗಾಣಿಗ ಸಮಾಜವನ್ನು ಲಿಂಗಾಯತ ಸಮುದಾಯದಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿ ಗಾಣಿಗ ಸಮುದಾಯ ಜೀರೋ ಆಗಿದೆ. ಇದನ್ನು ನೋಡಿದರೆ ಮೇಲ್ನೋಟಕ್ಕೆ 2ಎ ಮೀಸಲಾತಿಯಿಂದ ತೆಗೆಯುವ ಹುನ್ನಾರ ನೆಡದಿದೆ ಎಂದು ಕಾಣುತ್ತಿದೆ. ಅದಕ್ಕಾಗಿ ಗಾಣಿಗ ಸಮಾಜದವರು ಎಚ್ಚೆತ್ತುಕೊಂಡು ಹೋರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ಹೋರಾಟದ ದಿನಾಂಕವನ್ನು ಸಮಾಜದವರಿಗೆ ತಿಳಿಸಲಾಗುವುದು ಎಂದು ಹೇಳಿದರು.

ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ದುಂಡಪ್ಪ ಏಳೆಮ್ಮಿ ಮಾತನಾಡಿ, ಅವೈಜ್ಞಾನಿಕವಾದ ಜಾತಿ ಗಣತಿ ವರದಿ ಬಗ್ಗೆ ನಮ್ಮ ಸಮಾಜದವರು ತೀವ್ರ ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಈಗಿದ್ದ ಮೀಸಲಾತಿಯೂ ಕೈತಪ್ಪುವ ಕಾಲ ದೂರ ಇಲ್ಲ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಗಾಣಿಗ ಸಮಾಜಕ್ಕೆ ಇಲ್ಲಿಯವರಿಗೂ ಒಂದು ಸ್ವಂತ ಜಾಗವಿಲ್ಲ. ಸಮಾಜದಿಂದ ದೇಣಿಗೆ ಎತ್ತುವ ಮೂಲಕ ಬಾಗಲಕೋಟೆ ನಗರದ ಸುತ್ತಮುತ್ತ 2 ಎಕರೆ ಜಾಗ ಖರೀದಿಸಿ ಸಮಾಜದ ಕಲ್ಯಾಣ ಮಂಟಪ ಹಾಗೂ ಸಮಾಜದ ಇತರ ಕಾರ್ಯಗಳಿಗೆ ಒಂದು ಜಾಗದ ಅವಶ್ಯಕತೆ ಬಗ್ಗೆ ತಿಳಿಸಿದರು.

ಸಮಾಜದ ಯುವ ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಈಗ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಗಾಣಿಗ ಸಮಾಜದ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಇದರ ಬಗ್ಗೆ ಗಾಣಿಗ ಸಮಾಜದವರು ಹೋರಾಟ ಮಾಡದಿದ್ದರೆ ಮುಂದೆ ನಮ್ಮ ಮಕ್ಕಳ ಭವಿಷ್ಯಕ್ಕೆ ದೊಡ್ಡ ನಷ್ಟವಾಗಲಿದೆ. ಅದಕ್ಕಾಗಿ ಶೀಘ್ರವಾಗಿ ಈ ಅವೈಜ್ಞಾನಿಕವಾದ ಜಾತಿ ಗಣತಿ ವರದಿ ಬಗ್ಗೆ ಹೋರಾಟ ಮಾಡಬೇಕು ಎಂದು ತಿಳಿಸಿದರು. ಬಾಗಲಕೋಟೆಯಲ್ಲಿ ನಮ್ಮ ಸಮಾಜಕ್ಕೆ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪ ಬಹಳ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಮಾಜದ ಹಿರಿಯರು ಕಾರ್ಯವನ್ನು ಮಾಡಬೇಕು. ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದರು.

ಸಮಾಜದ ಮುಖಂಡರಾದ ಚಂದ್ರಕಾಂತ ಕೇಸನೂರ ಮಾತನಾಡಿದರು.

ಪದಾಧಿಕಾರಿಗಳ ಆಯ್ಕೆ :

ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ದುಂಡಪ್ಪ ಏಳೆಮ್ಮಿ ಅವರಿಂದ ಖಾಲಿಯಾದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಚೊಳಚಗುಡ್ಡ ಅವರನ್ನು ತಾಲೂಕು ನಗರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಾಗಲಕೋಟೆ ಗ್ರಾಮೀಣ ಅಧ್ಯಕ್ಷರನ್ನಾಗಿ ಪ್ರಶಾಂತ ಮಾಚಕನೂರ ಹಾಗೂ ಗ್ರಾಮೀಣ ಪ್ರಧಾನ ಕಾರ್ಯದರ್ಶಿಯಾಗಿ ಈರಣ್ಣ ಗಲಾಟೆ ಅವರನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.