ಗಾಂಜಾ: ಹುಬ್ಬಳ್ಳಿ ಪೊಲೀಸರ ಭರ್ಜರಿ ಬೇಟೆ

| Published : Aug 01 2024, 12:16 AM IST

ಸಾರಾಂಶ

ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ರಾಜಸ್ಥಾನ ಮೂಲದ ವ್ಯಕ್ತಿಯೋರ್ವನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಓಂಪ್ರಕಾಶ ಉರ್ಫ್‌ ಪಿಂಟೂ ಬಾರಮೇರ್ ಎಂಬಾತನೇ ಬಂಧಿತ. ಈತ ನಗರದ ರೈಲ್ವೆ ನಿಲ್ದಾಣದ ಬುಗಿಬುಗಿ ಹೋಟೆಲ್‌ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ.

ಹುಬ್ಬಳ್ಳಿ:

ಗಾಂಜಾ ಮಾರಾಟ ಮತ್ತು ಸಾಗಾಟದ ವಿರುದ್ಧ ಸಮರ ಸಾರಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರೇಟ್‌, ಭರ್ಜರಿ ಬೇಟೆಯಾಡಿದ್ದಾರೆ.

ಅಂತಾರಾಜ್ಯ ಗಾಂಜಾ ಮಾರಾಟಗಾರನನ್ನು ಹೆಡೆಮುರಿ ಕಟ್ಟಿರುವ ಪೊಲೀಸರು, ಬರೋಬ್ಬರಿ ₹ 85 ಸಾವಿರ ಮೌಲ್ಯದ ಗಾಂಜಾ, ₹ 96.50 ಲಕ್ಷ ನಗದು ಸೇರಿದಂತೆ ₹1.06 ಕೋಟಿ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ಬಂಧಿತನ ಬಳಿ 30 ಎಟಿಎಂ ಕಾರ್ಡ್‌, ನಕಲಿ ಬ್ಯಾಂಕ್‌ ಖಾತೆ, ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಪತ್ತೆಯಾಗಿವೆ.

ಮಾಧ್ಯಮಗೋಷ್ಠಿಯಲ್ಲಿ ಈ ವಿವರ ನೀಡಿದ ಕಮಿಷನರ್‌ ಎನ್‌. ಶಶಿಕುಮಾರ, ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ರಾಜಸ್ಥಾನ ಮೂಲದ ವ್ಯಕ್ತಿಯೋರ್ವನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಓಂಪ್ರಕಾಶ ಉರ್ಫ್‌ ಪಿಂಟೂ ಬಾರಮೇರ್ ಎಂಬಾತನೇ ಬಂಧಿತ. ಈತ ನಗರದ ರೈಲ್ವೆ ನಿಲ್ದಾಣದ ಬುಗಿಬುಗಿ ಹೋಟೆಲ್‌ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಎಸಿಪಿ ಉಮೇಶ ಚಿಕ್ಕಮಠ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎಂ.ಎಂ. ತಹಶೀಲ್ದಾರ್ ನೇತೃತ್ವದ ತಂಡ ಮಂಗಳವಾರ ಸಂಜೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಆರೋಪಿ ಕಳೆದ 6 ತಿಂಗಳಿಂದ ಇಲ್ಲಿನ ಕೇಶ್ವಾಪುರದಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದನು. ಮಾಹಿತಿ ಸಂಗ್ರಹಿಸಿ ಆರೋಪಿಯ ಕೊಠಡಿಗೆ ತೆರಳಿ ಪರಿಶೀಲಿಸಿದ ವೇಳೆ ₹ 96.50 ಲಕ್ಷ ನಗದು, ₹ 50 ಸಾವಿರ ಮೌಲ್ಯದ ಮೊಬೈಲ್, ವಿವಿಧ ಬ್ಯಾಂಕಿನ 30 ಎಟಿಎಂ ಕಾರ್ಡ್‌, 36 ಚೆಕ್‌ , 4 ಪಾಸ್‌ಬುಕ್, 9 ಪಾನ್‌ಕಾರ್ಡ್, 7 ರಬ್ಬರ್ ಸ್ಟಾಂಪ್, 6 ಸ್ವಾಪಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಸಮಗ್ರ ತನಿಖೆ:

ವಶಪಡಿಸಿಕೊಂಡಿರುವ 888 ಗ್ರಾಂ ಗಾಂಜಾವನ್ನು ರಾಜಸ್ಥಾನದ ಅಶೋಕಕುಮಾರ ಎಂಬುವವನು ಒಂದು ವಾರದ ಹಿಂದೆ ಹುಬ್ಬಳ್ಳಿಗೆ ತಂದಿರುವುದಾಗಿ ಆರೋಪಿ ಮಾಹಿತಿ ನೀಡಿದ್ದಾನೆ. ಅವನು ಹುಬ್ಬಳ್ಳಿ ಸುತ್ತಮುತ್ತಲಿನ ಬೇರೆ ತಾಲೂಕಿಗಳಿಗೆ ಭೇಟಿ ನೀಡುತ್ತ ಕೆಲವರ ಸಂಪರ್ಕದಲ್ಲಿರುವುದು, ರಾಯಚೂರಿಗೆ ಭೇಟಿ ನೀಡಿದ್ದು, ಗೋವಾದಲ್ಲಿ ವಾಸವಾಗಿರುವ ಕುರಿತು ಮಾಹಿತಿ ನೀಡಿದ್ದಾನೆ. ಇದೇ ವ್ಯವಹಾರಕ್ಕಾಗಿ ನಕಲಿ ದಾಖಲಾತಿ ಸೃಷ್ಟಿಸಿ, ಬ್ಯಾಂಕ್‌ಗಳಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆ ತೆರೆಯುತ್ತಿದ್ದನೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.

ಗೋವಾದಲ್ಲಿ ತರಬೇತಿ:

ನಕಲಿ ಆಧಾರ್‌ ಕಾರ್ಡ್ ಮಾಡಲು ಆರೋಪಿಯು ಗೋವಾದಲ್ಲಿ ಮೂರು ತಿಂಗಳು ಕಾಲ ತರಬೇತಿ ಪಡೆದು, ವ್ಯಾಪಾರಸ್ಥರ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಗಾಂಜಾ ವ್ಯವಹಾರದ ಜತೆ ನಕಲಿ ಆಧಾರ್‌ ಕಾರ್ಡ್ ಸೃಷ್ಟಿ ಮಾಡಿ ಬ್ಯಾಂಕ್‌ನಲ್ಲಿ ನಕಲಿ ಖಾತೆ ತೆರೆಯಲು ಒಬ್ಬನಿಂದ ಸಾಧ್ಯವಿಲ್ಲ. ಬೇರೆಯವರ ಸಹಕಾರ ಇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಅಲ್ಲಿ ಮತ್ತೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯ್, ಇನ್‌ಸ್ಪೆಕ್ಟ‌ರ್ ಎಂ.ಎಂ. ತಹಶೀಲ್ದಾ‌ರ್ ಸೇರಿದಂತೆ ಹಲವರಿದ್ದರು.ಗಾಂಜಾ ಮುಕ್ತ ನಗರವಾಗಿಸಲು ಬದ್ಧ:

ಹು-ಧಾ ಮಹಾನಗರದ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡ ನಂತರ 12ಕ್ಕೂ ಹೆಚ್ಚು ಪ್ರಮುಖ ಪ್ರಕರಣಗಳನ್ನು ದಾಖಲಿಸಿ 61 ಗಾಂಜಾ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. 315ಕ್ಕೂ ಹೆಚ್ಚು ಗಾಂಜಾ ವ್ಯಸನಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ- ಕಾಲೇಜುಗಳಲ್ಲಿ ಡ್ರಗ್ಸ್‌, ಗಾಂಜಾ ಸೇವನೆಯಿಂದಾಗುವ ಹಾನಿಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಕುರಿತು ಕೆಲವೇ ದಿನಗಳಲ್ಲಿ ಶಾಲಾ- ಕಾಲೇಜುಗಳ ಮುಖ್ಯಸ್ಥರ, ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ, ಸೂಚನೆ ನೀಡಲು ತೀರ್ಮಾನಿಸಲಾಗಿದೆ. ಒಟ್ಟಾರೆಯಾಗಿ ಹುಬ್ಬಳ್ಳಿ- ಧಾರವಾಡವನ್ನು ಗಾಂಜಾ ಮುಕ್ತ ಮಹಾನಗರವನ್ನಾಗಿಸು ಬದ್ಧ ಎಂದರು.