ಸಾರಾಂಶ
ಭದ್ರಾವತಿಯಲ್ಲಿ ಕಳೆದ ಎರಡು ವರ್ಷದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಈ ಎಲ್ಲಾ ಅಕ್ರಮಗಳು ಶಾಸಕರ ನೆರಳಿನಲ್ಲಿಯೇ ನಡೆಯುತ್ತಿವೆ. ಅವರೊಂದಿಗೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಆರೋಪಿಸಿದರು.
ಶಿವಮೊಗ್ಗ : ಭದ್ರಾವತಿಯಲ್ಲಿ ಕಳೆದ ಎರಡು ವರ್ಷದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಬದಲಿಗೆ ಗಾಂಜಾ, ಇಸ್ಪೀಟ್, ಅಕ್ರಮ ಮರಳು ದಂಧೆ, ಮೀಟರ್ ಬಡ್ಡಿ ದಂಧೆಯ ಅಡ್ಡವಾಗಿದೆ. ಈ ಎಲ್ಲಾ ಅಕ್ರಮಗಳು ಶಾಸಕರ ನೆರಳಿನಲ್ಲಿಯೇ ನಡೆಯುತ್ತಿವೆ. ಅವರೊಂದಿಗೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಆರೋಪಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜನರಿಂದ ಆಯ್ಕೆಯಾದ ಎಂಎಲ್‌ಎ ಭದ್ರಾವತಿಯಲ್ಲೇ ಇಲ್ಲ. ಅವರು ಹೆಸರಿಗೆ ಮಾತ್ರ ಶಾಸರು. ಅವರ ಮಕ್ಕಳು ಅಧಿಕಾರದ ದರ್ಪದಲ್ಲಿ ಮೆರೆಯುತ್ತಿದ್ದಾರೆ. ಇವರ ಆರ್ಭಟ, ದೌರ್ಜನ್ಯ ಮಿತಿ ಮೀರಿದೆ. ಅವರನ್ನು ತಡೆಯುವವರು ಯಾರೂ ಇಲ್ಲದಂತಾಗಿದೆ. ಅಕ್ರಮ ಮರಳು ಸಾಗಣೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಿವೆ ಎಂದರು.
ಶಾಸಕ ಹಾಗೂ ಅವರ ಪುತ್ರರ ಅಕ್ರಮ ಚಟುವಟಿಕೆಗಳ ವಿರುದ್ಧ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಜನರಿಗೆ ನ್ಯಾಯ ಕೊಡಿಸಬೇಕಾದ ಅಧಿಕಾರಗಳೇ ಶಾಸಕರು ಹೇಳಿದ ಕೆಲಸವನ್ನು ಮಾತ್ರ ಮಾಡುವ ಕೆಲಸಗಾರರಾಗಿದ್ದಾರೆ. ಇವರ ದರ್ಪ ಹೀಗೆ ಮುಂದುವರಿದರೆ ಇನ್ನೂ ಮೂರು ವರ್ಷದಲ್ಲಿ ಭದ್ರಾವತಿಯನ್ನೇ ಹರಾಜು ಹಾಕುತ್ತಾರೆ ಎಂದು ಕಿಡಿಕಾರಿದರು.
ಇದಕ್ಕೆ ಸಾಕ್ಷಿ ಎಂಬಂತೆ ಅಕ್ರಮ ಮರಳು ಸಾಗಣೆಗೆ ಸಂಬಂಧಿಸಿದಂತೆ ಅದನ್ನು ತಡೆಯಲು ಬಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿಯ ಶಾಸಕನ ಪುತ್ರ ಅವಾಚ್ಯವಾಗಿ ನಿಂದಿಸಿದ್ದಾರೆ. ಬೆದರಿಕೆ ಹಾಕಿದ್ದಾರೆ. ಹೀಗಾದರೆ ಅಧಿಕಾರಿಗಳು ಏನು ಮಾಡಲು ಸಾಧ್ಯ? ಮಹಿಳೆ ಎಂದು ನೋಡದೇ ಅಶ್ಲೀಲವಾಗಿ ಆತ ಮಾತನಾಡಿದ್ದಾನೆ. ಈ ಎಲ್ಲದರ ಹಿಂದೆ ಶಾಸಕರ ಕುಮ್ಮಕ್ಕು ಇದೆ. ಅವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಫೆ.14ಕ್ಕೆ ಪ್ರತಿಭಟನೆ:
ಮಹಿಳಾ ಅಧಿಕಾರಿಯ ಮೇಲೆ ಶಾಸಕರ ಪುತ್ರನ ದೌರ್ಜನ್ಯ ಖಂಡಿಸಿ ಫೆ.14ರಂದು ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದಿನ ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ಜೆಡಿಎಸ್ ಮುಖಂಡ ನಿಖಿಲ್ ಕುಮಾರ್ ಸ್ವಾಮಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಭದ್ರಾವತಿಯ ಅಕ್ರಮಗಳಿಗೆ ಕೊನೆಯೇ ಇಲ್ಲದಂತಾಗಿದೆ. ಶಾಸಕ ಸಂಗಮೇಶ್ ಅವರು ರಾಜೀನಾಮೆ ನೀಡಬೇಕು. ಅವರ ಪುತ್ರನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಫೆ.14ರಂದು ಭದ್ರಾವತಿಯ ಮಾಧವಾಚಾರ್ ಸರ್ಕಲ್ ನಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಎಸ್.ಎಲ್.ನಿಖಿಲ್, ಪ್ರಮುಖರಾದ ದ್ಯಾನೇಶಪ್ಪ, ಗೀತಾ ಸತೀಶ್, ಪ್ರೇಮ್ ಕುಮಾರ್, ಸುನಿಲ್, ಲೋಹಿತ್, ನಿರಂಜನ್, ರಾಘವೇಂದ್ರ ಇದ್ದರು.
ಕ್ಯಾಸಿನೋ ಆಗಿ ಭದ್ರಾವತಿ ಪರಿವರ್ತನೆ
ಇಡೀ ಭದ್ರಾವತಿ ಅಕ್ರಮ ಚಟುವಟಿಕೆಗಳ ನಗರವಾಗಿದೆ. ಇಸ್ಪೀಟ್ ದಂಧೆಯಂತೂ ಎಗ್ಗಿಲ್ಲದೇ ನಡೆಯುತ್ತಿದೆ. ಶಾಸಕರ ಪುತ್ರ ಸುಮಾರು 12 ಕಡೆ ಇಸ್ಪೀಟ್ ಜೂಜಾಟ ಬಹಿರಂಗವಾಗಿಯೇ ನಡೆಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಭದ್ರಾವತಿಗೆ ಇಸ್ಪೀಟ್ ಆಡಲು ಬರುತ್ತಾರೆ. ಜೊತೆಗೆ ಗಾಂಜಾ ಹಾವಳಿ ಹೆಚ್ಚಿದೆ. ಗೋವಾದಲ್ಲಿ ಇರುವಂತೆ ಒಂದು ರೀತಿಯ ಜೂಜಾಟದ ಅಡ್ಡೆಯಾಗಿ, ಕ್ಯಾಸಿನೋ ಆಗಿ ಭದ್ರಾವತಿ ಪರಿವರ್ತನೆಯಾಗುತ್ತಿದೆ. ಅಧಿಕಾರಿಗಳು ಶಾಸಕರ ಬೆದರಿಕೆಗೆ ಯಾವ ಕೇಸನ್ನೂ ದಾಖಲಿಸಿಕೊಳ್ಳುತ್ತಿಲ್ಲ ಎಂದು ಯುವ ಜನತಾ ದಳದ ಜಿಲ್ಲಾಧ್ಯಕ್ಷ ಮಧುಕುಮಾರ್ ಆರೋಪಿಸಿದರು.
ಆರೋಪಿ ಬಿಟ್ಟು ಉಳಿದವರ ಬಂಧನ: ಪ್ರಸನ್ನಕುಮಾರ್
ಸಮಾಜ ತಲೆತಗ್ಗಿಸುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಎಂಎಲ್ಎ ಮಕ್ಕಳು ಮಹಿಳಾ ಅಧಿಕಾರಿ ಮೇಲೆ ದರ್ಪ ಮೆರೆದಿದ್ದಾರೆ. ಮಾಧ್ಯಮದಲ್ಲಿ ಒತ್ತಡ ಬಂದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಆದರೆ, ಯಾರನ್ನು ಬಂಧಿಸಬೇಕೋ ಅವರನ್ನು ಬಂಧಿಸಿಲ್ಲ ಅವರ ವಿರುದ್ದ ಪ್ರಕರಣ ದಾಖಲು ಮಾಡಿಲ್ಲ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.
ಯಾರೋ ಟೈಪ್ ಮಾಡಿ ತಂದ ಲೆಟರ್ ಅನ್ನು ಮಹಿಳಾ ಅಧಿಕಾರಿ ಪೊಲೀಸರಿಗೆ ಕೊಟ್ಟಿದ್ದಾರೆ. ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಭದ್ರಾವತಿಯಲ್ಲಿದೆ ಎಂದರು.
ಮಹಿಳಾ ಅಧಿಕಾರಿ ನೋವಿಗೆ ಸ್ಪಂದಿಸುವ ಕೆಲಸ ಸರ್ಕಾರದಿಂದ ಆಗಿಲ್ಲ. ಭದ್ರಾವತಿ ಘಟನೆಯ ನೈಜ ತನಿಖೆ ನಡೆಯಬೇಕಿದೆ. ಕೂಡಲೇ ಶಾಸಕ ಸಂಗಮೇಶ್ ರಾಜೀನಾಮೆ ನೀಡಬೇಕು. ಪೊಲೀಸ್ ಇಲಾಖೆ ಯಾರ ಒತ್ತಡಕ್ಕೆ ಮಣಿಯದೆ ಪ್ರಕರಣ ದಾಖಲಿಸಬೇಕು. ಎಂಎಲ್ಎ ಮಗನ ವಿರುದ್ದ ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.