ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಯುತ್ತಿರುವುದನ್ನು ಕಂಡು ಭಯಭೀತರಾದ ದುಷ್ಕರ್ಮಿಗಳು ಗಾಂಜಾ ತುಂಬಿದ್ದ ಬ್ಯಾಗ್ ಬಿಟ್ಟು ಪರಾರಿಯಾಗಿರುವ ಶಂಕೆ

ಹೊಸಪೇಟೆ: ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಅನಾಮಧೇಯ ಬ್ಯಾಗ್‌ನಲ್ಲಿ ಅಂದಾಜು ₹8 ಲಕ್ಷ ಮೌಲ್ಯದ 8 ಕೆಜಿ 225 ಗ್ರಾಂ ಗಾಂಜಾ ಪತ್ತೆಯಾಗಿದೆ.

ರೈಲ್ವೆ ರಕ್ಷಣಾ ಪಡೆ (ಆರ್ ಪಿಎಫ್) ತಪಾಸಣೆ ನಡೆಸುತ್ತಿದ್ದ ವೇಳೆ ರೈಲ್ವೆ ಪೊಲೀಸ್‌ ಶ್ವಾನದಳದ ಅಲೆಕ್ಸ್ ಶ್ವಾನ ಗಾಂಜಾ ತುಂಬಿದ ಬ್ಯಾಗ್ ಕಣ್ಣಿಗೆ ಬಿದ್ದಿದೆ. ಆರ್‌ಪಿಎಫ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ರೈಲ್ವೆ ನಿಲ್ದಾಣದ ಆವರಣದಲ್ಲಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಿಲ್ದಾಣದ ಪಾದಚಾರಿ ಮಾರ್ಗದ ಬಳಿ ಅನಾಥವಾಗಿ ಬಿದ್ದಿದ್ದ ಬ್ಯಾಗ್‌ವೊಂದನ್ನು ಶ್ವಾನ ಅಲೆಕ್ಸ್ ಪತ್ತೆ ಹಚ್ಚಿದೆ.

ತಕ್ಷಣವೇ ಜಾಗೃತರಾದ ಅಧಿಕಾರಿಗಳು ಬ್ಯಾಗ್ ತೆರೆದು ಪರಿಶೀಲಿಸಿದಾಗ ಪ್ಲಾಸ್ಟಿಕ್ ಟೇಪ್‌ನಿಂದ ಬಿಗಿಯಾಗಿ ಸುತ್ತಿಡಲಾಗಿದ್ದ ಒಟ್ಟು 5 ಪ್ಯಾಕೆಟ್‌ ಪತ್ತೆಯಾಗಿವೆ. ಅವುಗಳನ್ನು ಪರಿಶೀಲಿಸಿದಾಗ ಒಳಗೆ ಅಂದಾಜು 8 ಕೆಜಿ 225 ಗ್ರಾಂ ತೂಕದ ಗಾಂಜಾ ಇರುವುದು ದೃಢಪಟ್ಟಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು ₹8 ಲಕ್ಷ ಎಂದು ಅಂದಾಜಿಸಲಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಯುತ್ತಿರುವುದನ್ನು ಕಂಡು ಭಯಭೀತರಾದ ದುಷ್ಕರ್ಮಿಗಳು ಗಾಂಜಾ ತುಂಬಿದ್ದ ಬ್ಯಾಗ್ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದು, ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ.

ಪ್ರಭಾರಿ ಡಿವೈಎಸ್ಪಿ ಭಾರತಿ, ಅಧಿಕಾರಿ ಶಂಕರ್ ದೊಡ್ಮನಿ, ಎಚ್‌.ವೀರಮ್ಮ, ಮಹಾಂತೇಶ್‌ ಸವಳಿ, ಗೌಡಪ್ಪ, ಎಚ್‌.ಇಮಾಮ್‌ ಸಾಹೇಬ್‌, ಸುಧಾಕರ್‌, ಆಂಜನೇಯ, ನರಸಪ್ಪ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿ ಪುಟ್ಟಸ್ವಾಮಿ ಗೌಡ, ಸಂಗಮೇಶ್‌ ಕಲ್ಬುರ್ಗಿ, ಮಂಜುನಾಥ ಬಿ.ಕೆ.ಎನ್‌. ಚಂದ್ರಹಾಸ್‌, ಉಸ್ಮಾನ್‌, ಶರಣಪ್ಪ, ಆನಂದ್, ಪ್ರಮೋದ್‌ ಸಿಂಗ್ ಸೇರಿದಂತೆ ಇತರರು ದಾಳಿ ನಡೆಸಿದ್ದರು.

​ಈ ಕುರಿತು ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.