ಅಳದಂಗಡಿ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಘಂಟಾ ಗೋಪುರವನ್ನು ಬುಧವಾರ ಭಕ್ತಾರ್ಪಣೆಗೊಳಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮ
ಬೆಳ್ತಂಗಡಿ: ದೈವಗಳನ್ನು ನಂಬುತ್ತಾ ಇರುವವರು ಹೊಡೆದಾಟಕ್ಕೆ ಇಳಿದರೆ ಅದು ಸತ್ಯದ ಮಣ್ಣಿಗೆ ಅಪಚಾರವೆಸಗಿದಂತೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.
ಅಳದಂಗಡಿ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಘಂಟಾ ಗೋಪುರವನ್ನು ಬುಧವಾರ ಭಕ್ತಾರ್ಪಣೆಗೊಳಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಳದಂಗಡಿಯ ಹಿಂದಿನ ಅರಸರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆದಿದ್ದೇನೆ. ಮಹಾಕಾವ್ಯಗಳನ್ನು, ಅನೇಕ ಕಾದಂಬರಿಗಳನ್ನು ರಚಿಸಿದ್ದೇನೆ. ತುಳುನಾಡಿನಲ್ಲಿ ಸಾವಿರ ದೈವಗಳಿದ್ದಂತೆ ಸಾವಿರ ಸತ್ಯದ ದಾರಿಗಳಿವೆ. ಅದರ ದಾರಿಯಲ್ಲಿನ ನಾವು ನಡೆದರೆ ಮಾತ್ರ ಜೀವನ ಸಾರ್ಥಕ್ಯವಾಗುತ್ತದೆ. ಹೀಗಾಗಿ ಸತ್ಯದ ನಾಡಿನದಲ್ಲಿ ದೈವಗಳಿಗೆ ಬೆಲೆ ಹಾಗೂ ನೆಲೆ ಕೊಡಲೇ ಬೇಕು. ಎಲ್ಲ ಜೀವಿಗಳ ಸೇವೆಯನ್ನು ಮಾಡುವ ಸಂಕಲ್ಪ ಹೊಂದಿದವರು ಮಾತ್ರ ದೇವರನ್ನು ಪೂಜಿಸಲು ಅರ್ಹರು. ಮಾನವ ಜನಾಂಗ ದೇವರ ಕುಟುಂಬಕ್ಕೆ ಸೇರಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ವಹಿಸಿದ್ದರು. ವೇದಿಕೆಯಲ್ಲಿ ಘಂಟಾ ಗೋಪುರದ ದಾನಿಗಳಾದ ಅಮಣಿ ಮಂಜು ದೇವಾಡಿಗ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ದುಬೈಯ ನಾರಾಯಣ ದೇವಾಡಿಗ, ಸುರೇಶ್ ದೇವಾಡಿಗ, ಜಯದೀಪ ದೇವಾಡಿಗ, ಪುಷ್ಪರಾಜ ದೇವಾಡಿಗ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಸದಸ್ಯ ಯೋಗೀಶ್ ಕುಮಾರ್, ಉದ್ಯಮಿ ದೇವೇಂದ್ರ ಹೆಗ್ಡೆ ಉಪಸ್ಥಿತರಿದ್ದರು. ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಅವರು ಘಂಟಾ ಮೆರವಣಿಗೆಯನ್ನು ಉದ್ಘಾಟಿಸಿದರು. ದಾನಿಗಳಾದ ಅಮನಿ ಮಂಜು ಅವರನ್ನು ಸಮ್ಮಾನಿಸಲಾಯಿತು. ದೈವಸ್ಥಾನದ ಆಡಳ್ತೇದಾರ ಶಿವಪ್ರಸಾದ್ ಅಜಿಲ ಸ್ವಾಗತಿಸಿದರು. ನಿತ್ಯಾನಂದ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರ್ವಹಿಸಿದರು.ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ಸ್ಮರಿಸಿಕೊಂಡ ಮೊಯಿಲಿ ಅವರು ಕಾಂಗ್ರೆಸ್ ಪಕ್ಷದ ಈಗಿನ ಸ್ಥಿತಿಯ ಬಗ್ಗೆ ವಿಶ್ಲೇಷಿಸುತ್ತಾ, ಕಾಂಗ್ರೆಸ್ ಮುಖಂಡರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಆತ್ಮವಿಮರ್ಶೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಬೆಳ್ತಂಗಡಿ: ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಮೊದಲದಿನದ ಅಂಗವಾಗಿ ಬುಧವಾರದ ಪೂರ್ವಾಹ್ನ ತೋರಣ, ಉಗ್ರಾಣ ಮುಹೂರ್ತ, ಪುಣ್ಯಾಹ ವಾಚನ, ನವಕಲಶ, ಧ್ವಜಾರೋಹಣ, ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಭಜನೆ, ದೇವರ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ ನೆರವೇರಿತು.