ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಕೇವಲ ಕಾರ್ಪೊರೇಟ್ ಶಕ್ತಿಗಳು ಬಲಗೊಳ್ಳುತ್ತಿದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಉದ್ಯೋಗದ ಭರವಸೆ ನುಂಗುವ ವಿಬಿ ಜಿ ರಾಮ್ ಜಿ ಯೋಜನೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಕೇವಲ ಕಾರ್ಪೊರೇಟ್ ಶಕ್ತಿಗಳು ಬಲಗೊಳ್ಳುತ್ತಿದ್ದು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಉದ್ಯೋಗದ ಭರವಸೆ ನುಂಗುವ ವಿಬಿ ಜಿ ರಾಮ್ ಜಿ ಯೋಜನೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.ನಗರದಲ್ಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನಾ ಸಂಘ ಸಂಸ್ಥೆಗಳ ಮುಖಂಡರ ಜೊತೆಗೆ ಸಭೆ ನಡೆಸಿ ಅವರು ಮಾತನಾಡಿದರು. ಎಚ್.ವೈ.ಮೇಟಿಯವರು 5 ಬಾರಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ ಜನಾನುರಾಗಿ ನಾಯಕರಾಗಿದ್ದರು, ಜಾತಿಬೇಧವಿಲ್ಲದೆ ಜನರ ಸೇವೆ ಸಲ್ಲಿಸಿದವರು. ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಯ ಕನಸು ಕಂಡಿದ್ದರು, ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬಾಗಲಕೋಟೆಯ ಅಭಿವೃದ್ಧಿಗೆ ಶ್ರಮಿಸಿದ ಎಚ್.ವೈ.ಮೇಟಿಯವರ ಪುತ್ರ ಉಮೇಶ್ ಮೇಟಿಯವರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಕೋರಿದರು.
ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ ನಮ್ಮದು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ರಕ್ಷಣೆ ದೊರೆಯಬೇಕು. ದುರ್ಬಲ ವರ್ಗದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಶಕ್ತಿ ಇಲ್ಲದವರಿಗೆ ಆದ್ಯತೆ ನೀಡಿದೆ. ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ ಮತ್ತು ಸಾಮಾಜಿಕ ಬಲ ತುಂಬಲು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.ಬಿಜೆಪಿ ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಲಭಿಸದೆ ಹೋಗಿದ್ದರೆ ನಾವು ಗುಲಾಮರಾಗಿಯೇ ಇರುತ್ತಿದ್ದೆವು. ಕಾಂಗ್ರೆಸ್ ಎಲ್ಲಾ ಕಾಲದಲ್ಲಿಯೂ ಬಡವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ಬಿಜೆಪಿಯವರು ಕರ್ನಾಟಕದಲ್ಲಿ 9 ವರ್ಷಗಳ ಕಾಲ ಅಧಿಕಾರ ಮಾಡಿದ್ದು, ಏನು ಮಾಡಿದ್ದಾರೆ ಎಂದು ಅವರು ಜನರ ಮುಂದೆ ಹೇಳುವುದೇ ಇಲ್ಲ. ಅದರ ಬದಲಿಗೆ ನಮ್ಮ ಸರಕಾರವನ್ನು ಟೀಕೆ , ಅಪಪ್ರಚಾರ ಮಾಡಿಕೊಂಡು ಓಡಾಡಿದ್ದಾರೆ. ಬಿಜೆಪಿ ನುಡಿದಂತೆ ನಡೆದ ಪಕ್ಷವಲ್ಲ ಎಂದ ಅವರು, ನರೇಂದ್ರ ಮೋದಿಯವರು 2014ರಲ್ಲಿ ಹೇಳಿದ್ದನ್ನು ಇಲ್ಲಿಯವರೆಗೂ ಜಾರಿ ಮಾಡಿಲ್ಲ. ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಬಡತನ ಹೋಗುತ್ತದೆ, ನಿರುದ್ಯೋಗ ಹೋಗಲಾಡಿಸಲಾಗುತ್ತದೆ. ರೈತರ ಆದಾಯ ದುಪ್ಪಟ್ಟಾಗುತ್ತದೆ ಎಂದೆಲ್ಲಾ ಹೇಳಿದ್ದರು. ಒಳ್ಳೆ ದಿನಗಳು ಬರಲಿಲ್ಲ. ರೈತರ ಆದಾಯವೂ ಎರಡು ಪಟ್ಟು ಆಗಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿ ಮನೆಗೆ ₹15 ಲಕ್ಷ ಕೊಡುತ್ತೇನೆ ಎಂದಿದ್ದರು, ಕೊಟ್ಟರೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ: ದೇಶದಲ್ಲಿ ರೈತರಿಗೆ ಊಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದು, ಮಲ ಹೊರುವ ಪದ್ದತಿ ನಿಷೇಧ, ಸಾಲ ಮನ್ನಾ ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಬಿಜೆಪಿ 28 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದರೆ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ನಮ್ಮ ಸರಕಾರ ಯುವನಿಧಿ ಯೋಜನೆ ಜಾರಿ ಮಾಡಿದೆ. ಇದನ್ನು ಬಿಜೆಪಿ ಏಕೆ ಮಾಡಲಿಲ್ಲ ಎಂದರು.ಅಂತ್ಯೋದಯ, ಸರ್ಯೋದಯ ಮಂತ್ರವನ್ನು ಮಹಾತ್ಮ ಗಾಂಧಿ ನೀಡಿದ್ದರು. ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲು ಪ್ರತಿಯೊಬ್ಬರೂ , ಸಾಮಾಜಿಕ, ಶೈಕ್ಷಣಿಕವಾಗಿ ಪ್ರಬಲರಾಗಬೇಕು ಎಂದರು.