ಹರಿಹರ ನಗರದ ಕೆ.ಎಚ್.ಬಿ. ಕಾಲೋನಿಯಲ್ಲಿ ಎಂಟ್ಹತ್ತು ದಿನಗಳಿಂದ ನಗರಸಭೆಯ ಕಸ ಸಂಗ್ರಹ ವಾಹನಗಳು ಸಕಾಲಕ್ಕೆ ಮನೆಗಳ ಬಳಿಗೆ ಬರುತ್ತಿಲ್ಲ. ಪರಿಣಾಮ ಹಸಿಕಸ, ಒಣಕಸ ಸಂಗ್ರಹಿಸಿ ಮನೆಗಳಲ್ಲಿಟ್ಟುಕೊಂಡ ನಿವಾಸಿಗಳು ಕಸ ವಿಲೇವಾರಿಗೆ ಪರದಾಡುವಂತಾಗಿದೆ.
- ಹರಿಹರ ನಗರಸಭೆ ಆಡಳಿತ ಬೇಜವಾಬ್ದಾರಿ । ನಿವಾಸಿಗಳು, ಸಾರ್ವಜನಿಕರ ತೀವ್ರ ಆಕ್ರೋಶ
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದ ಕೆ.ಎಚ್.ಬಿ. ಕಾಲೋನಿಯಲ್ಲಿ ಎಂಟ್ಹತ್ತು ದಿನಗಳಿಂದ ನಗರಸಭೆಯ ಕಸ ಸಂಗ್ರಹ ವಾಹನಗಳು ಸಕಾಲಕ್ಕೆ ಮನೆಗಳ ಬಳಿಗೆ ಬರುತ್ತಿಲ್ಲ. ಪರಿಣಾಮ ಹಸಿಕಸ, ಒಣಕಸ ಸಂಗ್ರಹಿಸಿ ಮನೆಗಳಲ್ಲಿಟ್ಟುಕೊಂಡ ನಿವಾಸಿಗಳು ಕಸ ವಿಲೇವಾರಿಗೆ ಪರದಾಡುವಂತಾಗಿದೆ.ಕಸ ವಿಲೇವಾರಿಗೆ ಕಸ ಸಂಗ್ರಹ ಗಾಡಿ ಬಾರದ ಕಾರಣ ಪ್ರತಿಯೊಬ್ಬರ ಮನೆಯಂಗಳ ಹಾಗೂ ಕಾಂಪೌಂಡ್ ಒಳಗೆ ಕಸದ ಮೂಟೆಗಳು ರಾಶಿಯೇ ಸೃಷ್ಟಿಯಾಗುತ್ತಿದೆ. ಹಸಿ ಕಸ ಕೊಳೆತು ದುರ್ವಾಸನೆ ಹರಡಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆಹಾರ ಅರಸಿ ಬರುವ ಬೀದಿನಾಯಿಗಳು ಮತ್ತು ಹಂದಿಗಳು ಮನೆಗಳ ಬಳಿ ಸಂಗ್ರಹಿಸಿದ್ದ ಕಸದ ಪೊಟ್ಟಣಗಳ ರಾಶಿಗೆ ಮುಗಿಬೀಳುತ್ತಿವೆ. ಕಸ ತುಂಬಿದ ಕವರುಗಳನ್ನು ರಸ್ತೆಯ ಮೇಲೆಲ್ಲ ಎಳೆದಾಡುತ್ತ ತ್ಯಾಜ್ಯವನ್ನು ಹರಡುತ್ತಿವೆ.
ಕಸದ ವಾಹನಗಳು ನಾಪತ್ತೆ ಆಗಿರುವುದು ನಿವಾಸಿಗಳನ್ನು ಕಂಗಾಲಾಗಿಸಿದೆ. ತುಂಬಿ ತುಳುಕುವ ಕಸದ ಬುಟ್ಟಿಗಳು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ತಮ್ಮ ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಇಟ್ಟುಕೊಂಡು, ದೂರದ ನಿರ್ಜನ ಪ್ರದೇಶಗಳಿಗೆ ತೆರಳಿ ಸುರಿದು ಬರುತ್ತಿದ್ದಾರೆ. ನಿತ್ಯವೂ ಕಸ ವಿಲೇವಾರಿ ಮಾಡಬೇಕಾದ ನಗರಸಭೆ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ನಗರ ಸ್ವಚ್ಛತೆ ಕಾಪಾಡಬೇಕಾದ ನಗರಸಭೆ ಅಧಿಕಾರಿಗಳು, ವಾಹನಗಳ ಕೊರತೆ, ಪೌರಕಾರ್ಮಿಕರ ಸಮಸ್ಯೆ ನೆಪವೊಡ್ಡಿ ಈ ಭಾಗಕ್ಕೆ ಕಸ ಸಂಗ್ರಹದ ವಾಹನಗಳನ್ನು ಕಳುಹಿಸುತ್ತಿಲ್ಲ. ಎಂಟ್ಹತ್ತು ದಿನಗಳೇ ಕಳೆದರೂ ಕೆಎಚ್‌ಬಿ ಕಾಲೋನಿಯ ಸ್ವಚ್ಛತೆಯತ್ತ ಗಮನಹರಿಸದ ಅಧಿಕಾರಿಗಳ ನಡೆಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಮುಂಚಿನಿಂದಲೂ ಇಲ್ಲಿಗೆ ಕಸ ಸಂಗ್ರಹದ ವಾಹನ ಸರಿಯಾಗಿ ಬರುತ್ತಿಲ್ಲ. ಕೆಲವೊಮ್ಮೆ ಬಂದರೂ ನಿಗದಿತ ಸಮಯ ಪಾಲಿಸುವುದಿಲ್ಲ. ಕಸ ವಿಲೇವಾರಿ ಮಾಡಲು ದಿನವಿಡೀ ಜನ ಕೆಲಸ ಕಾರ್ಯಗಳ ತೊರೆದು ಕಾಯುವ ಪರಿಸ್ಥಿತಿಯಿದೆ. ಈ ಬಗ್ಗೆ ಹಲವು ಬಾರಿ ನಗರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೆಚ್‌ಬಿ ಕಾಲೋನಿ ನಿವಾಸಿ ಪುಷ್ಪಾ ಸಮಸ್ಯೆ ತೋಡಿಕೊಂಡರು.ನಿವಾಸಿ ಭಾಗೀರಥಿ ಎಂಬವರು ಮಾತನಾಡಿ, ಆರೋಗ್ಯ ಅಧಿಕಾರಿಗಳಿಗೆ ಕರೆ ಮಾಡಿದರೆ, ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ. ಪೌರಾಯುಕ್ತರು ಕರೆಗಳನ್ನೇ ಸ್ವೀಕರಿಸುವುದಿಲ್ಲ. ನಿಯಮಿತವಾಗಿ ಕಸ ಸಂಗ್ರಹಿಸದಿದ್ದ ಮೇಲೆ, ಕಸ ವಿಲೇವಾರಿಗಾಗಿ ನಿವಾಸಿಗಳಿಂದ ಪ್ರತ್ಯೇಕ ಶುಲ್ಕವನ್ನು ಕಡ್ಡಾಯವಾಗಿ ಏಕೆ ವಸೂಲಿ ಮಾಡಬೇಕು ಎಂದು ಅಸಮಾಧಾನದಿಂದ ಪ್ರಶ್ನಿಸಿದ್ದಾರೆ.
ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ, ಸುಡುವಂತಿಲ್ಲ ಎಂದಾದರೆ ಕೊಳೆಯುತ್ತಿರುವ ಹಸಿಕಸವನ್ನು ಜನರು ತಲೆ ಮೇಲೆ ಹೊತ್ತು ತಿರುಗಬೇಕೇ? ಪರಿಸರ, ನೈರ್ಮಲ್ಯ ರಕ್ಷಣೆಯ ಬಗ್ಗೆ ಭಾಷಣ ಬಿಗಿಯುವ ಅಧಿಕಾರಿಗಳಿಗೆ ಕಾಲೋನಿಯಲ್ಲಿಯ ಸಮಸ್ಯೆ ಅರ್ಥವಾಗುತ್ತಿಲ್ಲ. ನಗರಸಭೆ ಕಚೇರಿ ಮುಂದೆ ಕಸ ಸುರಿದು ಪ್ರತಿಭಟಿಸುವುದೊಂದೇ ನಮಗೆ ಉಳಿದಿರುವ ದಾರಿ ಎಂದು ನಿವಾಸಿ ಶೈಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.- - -
(ಕೋಟ್)ಹರಿಹರ ನಗರಸಭೆಯಲ್ಲಿ ಕಸ ವಿಲೇವಾರಿ ವಾಹನಗಳು ಮತ್ತು ಪೌರ ಕಾರ್ಮಿಕರ ಕೊರತೆಯಿಂದ ಸಮಸ್ಯೆ ಉಂಟಾಗಿದೆ. 14 ಟಿಪ್ಪರ್ ಆಟೋಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. 60 ಹೊರಗುತ್ತಿಗೆ ಪೌರ ಕಾರ್ಮಿಕರ ನೇಮಕಕ್ಕೆ ಅನುಮೋದನೆ ದೊರೆತಿದೆ. ಆದಷ್ಟು ಶೀಘ್ರದಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಣೆಯಾಗಲಿದೆ.
- ತಿಮ್ಮಪ್ಪ, ಎಇಇ, ಪರಿಸರ ವಿಭಾಗ, ಹರಿಹರ ನಗರಸಭೆ.- - -
-19HRR. 03 &3A: ಹರಿಹರದ ಕೆಎಚ್‌ಬಿ ಕಾಲೋನಿಯ ರಸ್ತೆ ಬದಿಗಳಲ್ಲಿ ಕಸದ ರಾಶಿ ಸೃಷ್ಟಿಯಾಗಿರುವುದು.