ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದ ದೊಡ್ಡಕೆರೆ ತುಂಬಿ ಹರಿಯುವ ರಾಜಕಾಲುವೆ ಈಗ ಕಸ ಸಂಗ್ರಹದ ಕಾಲುವೆಯಾಗಿ ಬದಲಾಗಿದ್ದರೂ ಸಹ ಇತ್ತ ಪುರಸಭೆಯೂ ಗಮನಹರಿಸುತ್ತಿಲ್ಲ ಮತ್ತೊಂದೆಡೆ ಸಣ್ಣ ನೀರಾವರಿ ಇಲಾಖೆ ಸಹ ಕಡೆಗಣಿಸಿರುವುದರಿಂದ ರಾಜಕಾಲುವೆ ದಿನೇ ದಿನೆ ಮಾಯವಾಗುವ ಹಂತದಲ್ಲಿದೆ.ಒಂದು ಕಾಲದಲ್ಲಿ ಪಟ್ಟಣದ ನಾಗರಿಕರ ಕುಡಿಯುವ ನೀರಿನ ಆಶ್ರಯ ತಾಣವಾಗಿದ್ದ ದೊಡ್ಡಕೆರೆ ತುಂಬಿ ನೀರು ಹರಿದಾಗ ನೀರು ರಾಜಕಾಲುವೆ ಮೂಲಕ ಅತ್ತಿಗಿರಿಕೊಪ್ಪದ ಕೆರೆಗೆ ಹರಿಯಲು ಇರುವ ದೊಡ್ಡ ರಾಜಕಾಲುವೆ. ಹಲವು ದಶಕಗಳಿಂದ ದೊಡ್ಡಕೆರೆ ತುಂಬದ ಕಾರಣ ದೊಡ್ಡ ರಾಜಕಾಲುವೆ ಈಗ ಸಣ್ಣ ರಾಜಕಾಲುವೆಯಾಗಿ ಬದಲಾಗಿದೆ.ರಾಜಕಾಲುವೆ ಮೇಲೆ ಮನೆ
ಮತ್ತೊಂದು ಕಡೆ ರಾಜಕಾಲುವೆಯಲ್ಲೆ ಕೆಲವರು ಮನೆಗಳನ್ನು ರಾಜಾರೋಷವಾಗಿ ನಿರ್ಮಾಣ ಮಾಡಿಕೊಂಡಿದ್ದರೂ ಸಹ ಪ್ರಶ್ನಿಸುವ ಸಾಹಸವನ್ನು ಯಾರೂ ಮಾಡಿಲ್ಲ, ಇದರಿಂದ ಮತ್ತಷ್ಟು ಒತ್ತುವರಿದಾರರಿಗೆ ಒತ್ತುವರಿ ಮಾಡಿಕೊಳ್ಳಲು ಉತ್ತೇಜನ ನೀಡಿದಂತಾಗಿದೆ. ೨೦೦೪ರಲ್ಲಿ ಸುರಿದ ಭಾರೀ ಮಳೆಗೆ ದೊಡ್ಡಕೆರೆ ತುಂಬಿ ಕೋಡಿ ಹರಿದಾಗ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಆಗದೆ ಬಡಾವಣೆಗಳ ಒಳಗೆ ನುಗ್ಗಿ ನಾಗರೀಕರನ್ನು ಆತಂಕ ಉಂಟು ಮಾಡಿತ್ತು.ಕೆರೆಯಿಂದ ಹಿಡಿದು ಅತ್ತಿಗಿರಿಕೊಪ್ಪದ ಕೆರೆವರೆಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿರುವ ಕಾರಣ ಹಾಗೂ ರಾಜಕಾಲುವೆಯಲ್ಲಿ ತುಂಬಿರುವ ತ್ಯಾಜ್ಯಗಳಿಂದ ನೀರು ಕಾಲುವೆ ಬಿಟ್ಟು ಬಡಾವಣೆಯತ್ತ ಹರಿಯಿತು. ಇದರಿಂದ ಎಚ್ಚೆತ್ತುಕೊಂಡಿದ್ದ ಅಂದಿನ ಜಿಲ್ಲಾಡಳಿತ ಒತ್ತುವರಿ ಹಾಗೂ ಕಾಲುವೆಯಲ್ಲಿ ತುಂಬಿರುವ ಹೂಳು ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಲು ಸೂಚಿಸಿತ್ತು.ಹೆಸರಿ ಒತ್ತುವರಿ ಸರ್ವೆ ಮಾಡಿ ಗುರುತಿಸಿದ್ದರು.
ಒತ್ತುವರಿ ತೆರವು ಮಾಡಿಸಿಲ್ಲ ಆದರೆ ೨೦ವರ್ಷಗಳೇ ಕಳೆದರೂ ಒತ್ತುವರಿ ಮಾತ್ರ ತೆರವುಗೊಳಿಸುವ ಗೋಜಿಗೆ ಯಾರೂ ಮುಂದಾಗಿಲ್ಲ ಮತ್ತು ಕಾಲುವೆಯಲ್ಲಿ ತುಂಬಿರುವ ಹೂಳನ್ನೂ ಸಹ ಸ್ವಚ್ಛತೆ ಮಾಡಿಲ್ಲ. ಹಲವು ಬಾರಿ ರಾಜಕಾಲುವೆ ಹೆಸರಲ್ಲಿ ಹಣ ಮಾತ್ರ ದುರ್ಬಳಕೆಯಾಗಿದೆ ಎಂಬ ಆರೋಪ ಇದೆ.ಇದು ರಾಜಕಾರಣಿಗಳ ಆಡಳಿತಕ್ಕೆ ಹಿಡಿದ ಕೈಕನ್ನಡಿಯಾಗಿದೆ. ಮಳೆ ಕೊರತೆಯಿಂದ ರಾಜಕಾಲುವೆಗಳು ಮುಳ್ಳು ಗಡಿಗಳಿಂದ ಆವರಿಸಿದೆ, ಇದನ್ನೇ ನೆಪಮಾಡಿಕೊಂಡು ಕೆಲವರು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.ಇನ್ನೂ ಕೆಲವರು ಮನೆ ಬಾಗಿಲಿಗೆ ಕಸ ಸಂಗ್ರಹಿಸುವ ವಾಹನ ಬಂದರೂ ಕಸ ವಾಹನಕ್ಕೆ ಹಾಕದೆ ರಾಜಕಾಲುವೆಯಲ್ಲಿ ಎಸೆಯುತ್ತಿರುವುದರಿಂದ ರಾಜಕಾಲುವೆ ಸ್ವರೂಪವೆ ಬದಲಾಗಿದೆ. ಕೆರೆಕೋಡಿ ನಿವಾಸಿಯೊಬ್ಬರು ಕೆರೆಯನ್ನೇ ತಿಪ್ಪೆ ಮಾಡಿಕೊಂಡು ನಿತ್ಯ ಸಗಣಿ ಎಸೆಯುತ್ತಿದ್ದಾರೆ.
ಅತ್ತಿಗಿರಿಕೊಪ್ಪದ ಕೆರೆ ಅಧೋಗತಿಇದೇ ರೀತಿ ಅತ್ತಿಗಿರಿಕೊಪ್ಪದ ಕೆರೆಯ ಸ್ಥಿತಿ ಸಹ ದೊಡ್ಡಕೆರೆಗಿಂತಲೂ ಭಿನ್ನವೇನಲ್ಲ, ಇಲ್ಲಿಯೂ ರೈಲ್ವೆ ಸ್ಟೇಷನ್‌ನಲ್ಲಿ ಸಂಗ್ರಹಿಸುವ ಕಸವನ್ನು ಕೆರೆಯಲ್ಲಿ ಎಸೆಯುವ ಮೂಲಕ ಕೆರೆಯನ್ನು ಮಲೀನ ಮಾಡಲಾಗುತ್ತಿದೆ.ಇದಲ್ಲದೆ ಪಟ್ಟಣದ ತ್ಯಾಜ್ಯ ನೀರೆಲ್ಲಾ ಅತ್ತಿಗಿರಿಕೊಪ್ಪದ ಕೆರೆಗೆ ಹರಿಯುತ್ತಿರುವುದರಿಂದ ಕೆರೆ ದುರ್ನಾನ ಬೀರುತ್ತಿದೆ. ಮತ್ತೊಂದು ಕಡೆ ಇಲ್ಲಿಯೂ ಕೆರೆಯನ್ನು ಬಲಿಷ್ಟರು ಒತ್ತುವರಿ ಮಾಡಿಕೊಂಡು ಕೆರೆಯಲ್ಲೆ ಬೆಳೆಯನ್ನು ಬೆಳೆಯುತ್ತಿದ್ದಾರೆ.
ಶಾಸಕರ ಸಂಕಲ್ಪ ಈಡೇರಿಲ್ಲಈ ಕೆರೆಯನ್ನು ಅಭಿವೃದ್ದಿಗೊಳಿಸಿ ಪ್ರವಾಸಿ ತಾಣವಾಗಿ ಮಾಡುವ ಸಂಕಲ್ಪವನ್ನು ಶಾಸಕರು ಹೊಂದಿದ್ದರು. ಆದರೆ ಯಾಕೋ ಈಗ ಕೆರೆಯನ್ನು ಮರೆತಿದ್ದಾರೆ. ದೊಡ್ಡಕೆರೆಯಲ್ಲಿಯೂ ಸಹ ತ್ಯಾಜ್ಯ ನೀರು ತುಂಬಿ ಕೆರೆ ಬಳಿ ಹೋದರೆ ಸಾಕು ಮೂಗು ಮುಚ್ಚಿಕೊಳ್ಳುವಂತಾಗಿದೆ.ಈ ಎರಡೂ ಕೆರೆಗಳಿಗೆ ಶಾಸಕರು ಮೋಕ್ಷ ಕಲ್ಪಿಸಿ ಅಭಿವೃದ್ದಿಪಡಿಸುವರೇ ಎಂದು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.