ಗುತ್ತಲದಲ್ಲಿ ಕಸ ವಿಲೇವಾರಿ, ಸ್ವಚ್ಛತೆ ಸಮಸ್ಯೆ, ಸಾರ್ವಜನಿಕರ ಆತಂಕ

| Published : Jul 13 2024, 01:40 AM IST

ಗುತ್ತಲದಲ್ಲಿ ಕಸ ವಿಲೇವಾರಿ, ಸ್ವಚ್ಛತೆ ಸಮಸ್ಯೆ, ಸಾರ್ವಜನಿಕರ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಅದರಂತೆ ಗುತ್ತಲ ಪಟ್ಟಣದಲ್ಲಿಯೂ ಡೆಂಘೀ ಪ್ರಕರಣಗಳು ಕಂಡು ಬಂದರೂ ಸಹ ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಂಜುನಾಥ ಯರವಿನತಲಿಕನ್ನಡಪ್ರಭ ವಾರ್ತೆ ಗುತ್ತಲ

ಹಾವೇರಿ ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಅದರಂತೆ ಗುತ್ತಲ ಪಟ್ಟಣದಲ್ಲಿಯೂ ಡೆಂಘೀ ಪ್ರಕರಣಗಳು ಕಂಡು ಬಂದರೂ ಸಹ ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪಟ್ಟಣದಲ್ಲಿ ಕಸ ವಿಲೇವಾರಿ ಹಾಗೂ ಸ್ವಚ್ಛತೆ ಸಮಸ್ಯೆ ಇದ್ದು, ಬಸ್ ನಿಲ್ದಾಣ ಬಳಿ ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಚಕಾರ ಎತ್ತದೆ ಸುಮ್ಮನಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಪಟ್ಟಣದ ಅನೇಕ ವಾರ್ಡಿನ ಚರಂಡಿಗಳು ಕಸ, ಗಿಡ, ಬಳ್ಳಿಗಳಿಂದ ತುಂಬಿ ಹೋಗಿದ್ದು ಕೊಳೆತು ದುರ್ಗಂಧ ಬೀರುತ್ತಿದೆ. ಸ್ವಚ್ಛಗೊಳಿಸುವಲ್ಲಿ ಮುಖ್ಯಾಧಿಕಾರಿ ಸರಿಯಾದ ಕ್ರಮ ಕೈಗೊಳ್ಳದಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವಂತಾಗಿದೆ. ಅದರಲ್ಲೂ ಸಾರ್ವಜನಿಕರು ಮಲೇರಿಯಾ, ಡೆಂಘೀಯಂತಹ ರೋಗದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.

ಪಟ್ಟಣದ ಆಶಾ ಕಾರ್ಯಕರ್ತೆಯರು ಮನೆಗಳ ಮುಂದಿನ ತೊಟ್ಟಿ, ಬ್ಯಾರೆಲ್‌ಗಳನ್ನು ಶುಚಿಗೊಳಿಸಲು ಮನೆಮನೆಗೆ ತೆರಳಿ ತಿಳಿವಳಿಕೆ ನೀಡುತ್ತಿದ್ದರೆ, ಪಟ್ಟಣದಲ್ಲಿನ ಬೆಳವಗಿ ರಸ್ತೆ ಬಳಿಯ ಗೋಕಟ್ಟೆ ಕಲುಷಿತ ನೀರಿನಿಂದ ಸಂಪೂರ್ಣವಾಗಿ ಹಸಿರುಗಟ್ಟಿ ಸೊಳ್ಳೆಗಳು ಉತ್ಪತ್ತಿಯ ತಾಣವಾಗಿದೆ. ರಾಣಿಬೆನ್ನೂರ ರಸ್ತೆ ಬಳಿಯ ದೊಡ್ಡಹೊಂಡ, ಸಣ್ಣ ಹೊಂಡವು ಸಹ ಕಸ, ಗಿಡಗಳಿಂದ ಕಲುಷಿತವಾಗಿ ನೀರು ಗಬ್ಬು ನಾರುತ್ತಿದೆ. ಹಾವನೂರ, ರಾಣಿಬೆನ್ನೂರ, ನೆಗಳೂರ ರಸ್ತೆಯ ಅಕ್ಕ ಪಕ್ಕದಲ್ಲಿ ತಿಪ್ಪೆಗುಂಡಿಗಳಿದ್ದರೂ ಪ.ಪಂ. ಮುಖ್ಯಾಧಿಕಾರಿ ಕಂಡು ಕಾಣದಂತೆ ಮೌನಕ್ಕೆ ಜಾರಿದ್ದಾರೆ ಎಂದು ಪಟ್ಟಣದ ಜನತೆ ಆರೋಪಿಸಿದ್ದಾರೆ.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಅಸ್ಪತ್ರೆಗಳಲ್ಲಿ ಕೆಮ್ಮು, ಜ್ವರ, ನೆಗಡಿಯಂತ ಅನೇಕ ಕಾಯಿಲೆಗಳಿಗೆ ಪ್ರತಿ ನಿತ್ಯ ನೂರಾರು ಜನ ತುತ್ತಾಗಿದ್ದರೂ ಅಧಿಕಾರಿಗಳು ಸ್ವಚ್ಛತೆಯ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಲ್ಲದೇ ಪಟ್ಟಣದ ಅನೇಕರು ಡೆಂಘೀ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸೊಳ್ಳೆಗಳ ನಿಯಂತ್ರಣಕ್ಕೆ 1 ಯಂತ್ರದಲ್ಲಿ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಮಾತ್ರ ಫಾಗಿಂಗ್‌ ಮಾಡಲಾಗಿದ್ದು ಇನ್ನು ಹಲವು ಕಡೆಗಳಲ್ಲಿ ಶಿವನಗರ, ಮಾಲತೇಶ ನಗರ, ಸ್ವಾಮಿ ವಿವೇಕಾನಂದ ನಗರ, ಚಿದಂಬರ ನಗರ ಸೇರಿದಂತೆ ಹಲವೆಡೆ ಫಾಗಿಂಗ್ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಫಾಗಿಂಗ್, ಮೇಲಾಥಿಯನ್ ಪುಡಿ ಸಿಂಪರಣೆ ಮೂಲಕ ಪಟ್ಟಣದ ಜನತೆಯನ್ನು ಸಾಂಕ್ರಾಮಿಕ ರೋಗಗಳ ಭೀತಿಯಿಂದ ಪಾರಾಗುವಂತೆ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಪ.ಪಂ. ಮುಖ್ಯಾಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದು, ಕೆಲ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಸೀಮಿತವಾದಂತಾಗಿದೆ. ಪಟ್ಟಣದ ಯಾವುದೇ ವಾರ್ಡ್‌ನಲ್ಲಿ ಮೇಲಾಥಿಯನ್ ಪುಡಿಯನ್ನು ಸಿಂಪರಣೆ ಮಾಡಿಲ್ಲ. ಅನೇಕ ವಾರ್ಡ್‌ಗಳಲ್ಲಿ ಚರಂಡಿಗಳು ಕಸ, ಗಿಡ ಗಂಟಿಗಳಿಂದ ತುಂಬಿ ನಾರುತ್ತಿದ್ದು ಸ್ವಚ್ಛಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಗೋಕಟ್ಟೆ , ಹೊಂಡಗಳನ್ನು ಸ್ವಚ್ಛಗೊಳಿಸಬೇಕು ಎಂದು ಪಪಂ ಸದಸ್ಯ ಬರಮಪ್ಪ ಹಾದಿಮನಿ ಹೇಳಿದರು.