ಸಿ.ಕೆ. ನಾಗರಾಜ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ ಮುಂದಿನ ರಸ್ತೆ, ಎದುರು ಬಸವಣ್ಣ ಮಂಟಪ, ತುಂಗಭದ್ರಾ ನದಿ ದಂಡೆ ಪಕ್ಕ ಸೇರಿದಂತೆ ಹಂಪಿ ಸ್ಮಾರಕ, ಮಂಟಪಗಳ ಬಳಿ ಎಲ್ಲೆಂದರಲ್ಲಿ ಕಸದ ರಾಶಿಯೇ ಕಂಡು ಬರುತ್ತಿದೆ.

ಪ್ರವಾಸಿಗರು ಬಹಳ ಇಷ್ಟ ಪಟ್ಟು ಹಂಪಿಗೆ ಬರುತ್ತಾರೆ. ಹಂಪಿಯಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಿದ್ದರೂ ದೇಶ-ವಿದೇಶದಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಹಂಪಿಯ ಮಂಟಪಗಳ ಬಳಿ, ಸ್ಮಾರಕಗಳ ಬಳಿ ಕಸದ ರಾಶಿಯೇ ಬಿದ್ದಿದೆ. ಆದರೆ ರಾಜ್ಯ ಪುರಾತತ್ವ, ಕೇಂದ್ರ ಪುರಾತತ್ವ, ಹಂಪಿ ಅಭಿವೃದ್ಧಿ ಪ್ರಾಧಿಕಾರಗಳು ಕಸ ತೆಗೆಯಲು, ಸ್ವಚ್ಛವಾಗಿಟ್ಟುಕೊಳ್ಳಲು ಆಸಕ್ತಿ ವಹಿಸಿಲ್ಲ.

ಹಂಪಿಯ ಸ್ಮಾರಕಗಳ ಬಳಿ ಶುಚಿತ್ವ ಕಾಯ್ದುಕೊಂಡು ಪ್ರವಾಸಿಗರ ಮನ ಸೆಳೆಯಬೇಕಾದ ಇಲಾಖೆಗಳೇ ನಿರ್ಲಕ್ಷ್ಯ ವಹಿಸಿವೆ. ಇದರಿಂದ ಹಂಪಿಯು ಕಸದ ತಿಪ್ಪೆಯಾಗುತ್ತಿದೆ. ಹಂಪಿಯ ಮಂಟಪ ಹಾಗೂ ಸ್ಮಾರಕಗಳ ಪ್ರವಾಸಿಗರು ಊಟ ಮಾಡಿ ಬಿಸಾಕಿದ ಊಟದ ಎಲೆಗಳು, ನೀರಿನ ಬಾಟಲಿಗಳು ಸೇರಿದಂತೆ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪೇಪರ್‌ ಸೇರಿದಂತೆ ಇನ್ನಿತರ ಕಸ ಬಿದ್ದಿರುವುದರಿಂದ ಪ್ರವಾಸಿಗರು ಇಂಥಹ ಸ್ಮಾರಕಗಳ ಬಳಿ ಹೆಚ್ಚು ಸಮಯ ಇರುವುದಿಲ್ಲ. ಆದಷ್ಟು ಬೇಗನೆ ಸ್ಮಾರಕಗಳನ್ನು ವೀಕ್ಷಿಸಿಕೊಂಡು ತೆರಳುತ್ತಾರೆ.

ಡಿಸೆಂಬರ್‌ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಹಂಪಿಗೆ ಭೇಟಿ ನೀಡಿದಾಗಲೂ ಹಂಪಿಯ ಸ್ಮಾರಕಗಳ ಬಳಿ ಸ್ವಚ್ಛತೆ ಕಾಪಾಡಿಲ್ಲ. ಎಲ್ಲೆಂದರಲ್ಲಿ ಕಸ, ಗಲೀಜು ಇದೆ ಎಂದು ಜಿಲ್ಲಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.


ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಹಂಪಿಯಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 25 ಜನ ಕಾರ್ಮಿಕರನ್ನು ಏಕಾಏಕಿ ಅನುದಾನದ ಕೊರತೆಯಿಂದಾಗಿ ನಾಲ್ಕೈದು ದಿನಗಳಿಂದ ಕೆಲಸದಿಂದ ಕೈಬಿಟ್ಟಿರುವುದರಿಂದ ಹಂಪಿಯಲ್ಲಿ ಈಗ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದೆ.

ತಕ್ಷಣವೇ ಗುತ್ತಿಗೆ ಆಧಾರದಲ್ಲಿ ಹಂಪಿಯಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಕಾರ್ಮಿಕರ ಮೂರು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಿಐಟಿಯುನ ವಿಜಯನಗರ ಜಿಲ್ಲಾ ಸಮಿತಿಯ ಸಂಚಾಲಕಿ ಕೆ.ಎಂ. ಸ್ವಪ್ನ ಮತ್ತು ಜಿಲ್ಲಾ ಸಹ ಸಂಚಾಲಕ ಕೆ.ಎಂ. ಸಂತೋಷಕುಮಾರ್ ನೇತೃತ್ವದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಒಳಗೊಂಡಂತ ನಿಯೋಗ ಸೋಮವಾರ ಕಮಲಾಪುರದಲ್ಲಿರುವ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರಿದ ಆಯುಕ್ತ ರಮೇಶ್ ಅವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.ನಿತ್ಯ ಹಂಪಿಯಲ್ಲಿ ಕೆಲಸ ಮಾಡುವ ಸುಮಾರು 25 ಕಾರ್ಮಿಕರನ್ನು ಅನುದಾನವಿಲ್ಲ ಎಂದು ಕೆಲಸದಿಂದ ತೆಗೆದಿರುವುದು ಸರಿಯಲ್ಲ. ತಕ್ಷಣವೇ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು ಹಂಪಿಯನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎನ್ನುತ್ತಾರೆ ಸಿಐಟಿಯುನ ಜಿಲ್ಲಾ ಸಹ ಸಂಚಾಲಕ ಕೆ.ಎಂ. ಸಂತೋಷಕುಮಾರ.