ತ್ಯಾಜ್ಯಕ್ಕೆ ಬೆಂಕಿ: ಅರ್ಧ ಧಾರವಾಡ ಹೊಗೆಮಯ

| Published : May 13 2024, 12:02 AM IST / Updated: May 13 2024, 12:03 AM IST

ಸಾರಾಂಶ

ದಟ್ಟವಾಗಿ ವ್ಯಾಪಿಸಿರುವ ಹೊಗೆ. ಗುಡ್ಡದಂತಿರುವ ಸ್ಥಳದಲ್ಲಿ ಧಗಧಗಿಸುತ್ತಿರುವ ಬೆಂಕಿ. ಗಾಳಿ ಬಂದ ಕಡೆ ತೂರುತ್ತಾ ನಗರವನ್ನು ಆವರಿಸಿಕೊಳ್ಳುತ್ತಿರುವ ಹೊಗೆ. ಮುಖಕ್ಕೆ ಬಟ್ಟೆ ಹಿಡಿದುಕೊಂಡು ಶಪಿಸುತ್ತಿರುವ ಜನ. ಇದುವೇ ಧಾರವಾಡದ ಹೊಸಯಲ್ಲಾಪೂರದಲ್ಲಿ ಸೃಷ್ಟಿಯಾಗಿರುವ 8ನೇ ಗುಡ್ಡ.

ಕನ್ನಡಪ್ರಭ ವಾರ್ತೆ ಧಾರವಾಡ

ಏಳು ಗುಡ್ಡಗಳ ಮಧ್ಯೆ ಧಾರವಾಡ ನಗರ ಚಾಚಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಅದಕ್ಕೆ ಮತ್ತೊಂದು ಗುಡ್ಡ ಸೇರ್ಪಡೆಯಾಗಿದೆ. ಏಳು ಗುಡ್ಡಗಳು ಧಾರವಾಡ ನಗರಕ್ಕೆ ತಂಪಾದ ಗಾಳಿ ಬೀಸಿದರೆ, ಹೊಸದಾಗಿ ಸೃಷ್ಟಿಯಾದ ಗುಡ್ಡ ನಗರದ ಜನತೆಗೆ ಕಾರ್ಬನ್‌ ಗಾಳಿ ಉಗ್ಗುತ್ತಿದೆ.

ದಟ್ಟವಾಗಿ ವ್ಯಾಪಿಸಿರುವ ಹೊಗೆ. ಗುಡ್ಡದಂತಿರುವ ಸ್ಥಳದಲ್ಲಿ ಧಗಧಗಿಸುತ್ತಿರುವ ಬೆಂಕಿ. ಗಾಳಿ ಬಂದ ಕಡೆ ತೂರುತ್ತಾ ನಗರವನ್ನು ಆವರಿಸಿಕೊಳ್ಳುತ್ತಿರುವ ಹೊಗೆ. ಮುಖಕ್ಕೆ ಬಟ್ಟೆ ಹಿಡಿದುಕೊಂಡು ಶಪಿಸುತ್ತಿರುವ ಜನ. ಇದುವೇ ಧಾರವಾಡದ ಹೊಸಯಲ್ಲಾಪೂರದಲ್ಲಿ ಸೃಷ್ಟಿಯಾಗಿರುವ 8ನೇ ಗುಡ್ಡ.

ಪ್ರತಿ ಬಾರಿ ಬೇಸಿಗೆಯಲ್ಲಿ ಈ ಗುಡ್ಡದ ಬಗ್ಗೆ ಚರ್ಚೆ ಶುರು. ಬೇಸಿಗೆಯ ಬಿಸಿಗೆ ಕಸಕ್ಕೆ ಬೆಂಕಿ ಹೊತ್ತಿಕೊಂಡು ಇಡೀ ನಗರದ ಜನತೆಗೆ ತೊಂದರೆ ಸಿಲುಕುವಂತಾಗಿದೆ. ಕಸದ ಗುಡ್ಡದಿಂದ ಬರುತ್ತಿರುವ ಬೆಂಕಿ ರೂಪದ ಹೊಗೆಯಿಂದ ಸುತ್ತಲು ವಾಸಿಸುತ್ತಿರುವ ಜನರು ಬೇಸತ್ತು ಹೋಗಿದ್ದಾರೆ.

ಇಡೀ ಧಾರವಾಡ ನಗರದ ಕಸವನ್ನು ಮಹಾನಗರ ಪಾಲಿಕೆ ಹೊಸಯಲ್ಲಾಪೂರದ ರುದ್ರಭೂಮಿ ಬಳಿ ಸಂಗ್ರಹಿಸಿದ್ದು, ಇದೀಗ ಗುಡ್ಡದ ರೂಪ ತಾಳಿದೆ. ಈ ಮೊದಲು ಬರೀ ಕಸದ ಗುಡ್ಡಗಳಿದ್ದವು. ಇತ್ತೀಚೆಗೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗುತ್ತಿದ್ದರೂ ಕಸಕ್ಕೆ ಬೆಂಕಿ ಹತ್ತುವುದು ಮಾತ್ರ ನಿಲ್ಲುತ್ತಿಲ್ಲ. ಸಣ್ಣಪುಟ್ಟದಾಗಿ ಕಸಕ್ಕೆ ಬೆಂಕಿ ಹೊತ್ತಿಕೊಂಡು ದೊಡ್ಡ ಮಟ್ಟಕ್ಕೆ ಹೋಗುತ್ತಿದೆ. ಕಳೆದೆರಡು ದಿನಗಳಿಂದ ದೊಡ್ಡ ಪ್ರಮಾಣದಲ್ಲಿಯೇ ಕಸ ಸುಡುತ್ತಿದೆ. ಇದರಿಂದಾಗಿ ಸಮೀಪದ ದಾನೇಶ್ವರಿ ನಗರ, ಜನ್ನತ ನಗರ, ಹೊಸಯಲ್ಲಾಪುರ, ಲಕ್ಷ್ಮೀ ನಗರ, ರಜತಗಿರಿ, ವಿದ್ಯಾಗಿರಿಯ ಸೇರಿದಂತೆ ಹತ್ತಾರು ಬಡಾವಣೆಯ ನೂರಾರು ಕುಟುಂಬಗಳು ಉಸಿರು ಗಟ್ಟಿಯಾಗಿ ಹಿಡಿದುಕೊಂಡು ಕೂತಿದ್ದಾರೆ. ಈ ಗುಡ್ಡದ ತೀರಾ ಸಮೀಪದ ಕುಟುಂಬಗಳಂತೂ ಮನೆ ಬಿಟ್ಟು ಕೆಲವು ದಿನ ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ.

ಈ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ಸಂಸ್ಕರಿಸುವ ಕಾರ್ಯ ಕೆಲ ವರ್ಷಗಳಿಂದ ನಡೆದಿದೆ. ಆದರೂ ಕಸಕ್ಕೆ ಬೆಂಕಿ ಹೊತ್ತಿಕೊಳ್ಳುವುದು ನಿಲ್ಲುತ್ತಿಲ್ಲ. ಇದರಿಂದ ಜನ ರೋಸಿ ಹೋಗಿದ್ದಾರೆ. ಕಸ ವಿಲೇವಾರಿ ಮಾಡಲಾಗದೇ ಪಾಲಿಕೆಯವರೇ ಹೀಗೆ ಬೆಂಕಿ ಹಚ್ಚಿ ಕಸ ಸುಡುತ್ತಿದ್ದಾರೆ ಎನ್ನುವ ವಾದ ಒಂದಾದರೆ, ಬೇಸಿಗೆಯಲ್ಲಿ ತಾನಾಗಿಯೇ ಬೆಂಕಿ ಹೊತ್ತಿಕೊಳ್ಳುತ್ತಿದೆ ಎನ್ನುವುದು ಇನ್ನೊಂದು ವಾದ. ಬೆಂಕಿ ಹೊತ್ತಿಕೊಳ್ಳಬಾರದೆಂದು ಆಗಾಗ ನೀರು ಬಿಡುವ ವ್ಯವಸ್ಥೆಯೂ ಇದೆ. ಆದರೆ ಅದು ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪವೂ ಇದೆ. ಅದೇ ಕಾರಣಕ್ಕೆ ಈಗ ಬೆಂಕಿ ಹೊತ್ತಿಕೊಂಡು ಎರಡೂ ದಿನವಾದರೂ ನಂದಿಸುವ ಕಾರ್ಯವಾಗಿಲ್ಲ.

ಇಲ್ಲಿ ಸೃಷ್ಟಿಯಾಗುವ ಹೊಗೆ ಬರೀ ಸುತ್ತಲಿನ ಪ್ರದೇಶವಲ್ಲದೇ, ಅರ್ಧ ಧಾರವಾಡ ನಗರ ಆವರಿಸಿಕೊಂಡಿದ್ದು, ಅಕ್ಕಪಕ್ಕದವರಿಗಂತೂ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿದೆ. ಸಾಮಾನ್ಯ ಹೊಗೆಯಾಗಿದ್ದರೆ ಪರವಾಗಿಲ್ಲ. ಹತ್ತಾರು ದಿನಗಳ ಕಸದ ವಾಸನೆ ತಡೆಯಲಾಗುತ್ತಿಲ್ಲ. ಇದು ಅನೇಕರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಇದರ ವಿರುದ್ಧ ಅನೇಕ ಸಲ ಹೋರಾಟ ಮಾಡಿದವರೂ ಪ್ರಯೋಜನವಾಗಿಲ್ಲ. ಮತ್ತೇ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ದಾನೇಶ್ವರಿ ನಗರದ ನಿವಾಸಿ ಕೆ.ವೈ. ಕೋರಿ ಬೇಸರ ವ್ಯಕ್ತಪಡಿಸುತ್ತಾರೆ.

ಸದ್ಯ ಧಾರವಾಡದ ಈ ತ್ಯಾಜ್ಯ ಪರ್ವತದ ಹೊಗೆ ಧಾರವಾಡ ನಗರದ ಜನತೆಯ ನೆಮ್ಮದಿಯನ್ನೆ ಹಾಳು ಮಾಡಿ ಹಾಕಿದ್ದು, ಹೊಗೆಗೆ ಹೆದರಿ ಸ್ವಂತ ಮನೆಯಿದ್ದರೂ ಅದನ್ನು ಬಿಟ್ಟು ಬೇರೆ ಕಡೆ ಬಾಡಿಗೆ ಮನೆಯಲ್ಲಿರುವಂತಹ ಸ್ಥಿತಿ ಬಂದಿದೆ. ಈಗಾಗಲೇ ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರ ಗಮನಕ್ಕೆ ಇದು ಬಂದಿದೆ. ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿ ಘಟಕವೂ ಕಾರ್ಯೋನ್ಮುಖವಾಗಿದೆ. ಆದರೆ, ಹತ್ತಾರು ವರ್ಷಗಳಿಂದ ಇರುವ ಕಸ ಬೇಗ ಕರಗುತ್ತಿಲ್ಲ. ಹೀಗಾಗಿ ಆಗಾಗ ಅದರಲ್ಲೂ ಬೇಸಿಗೆಯಲ್ಲಿ ಕಸ ಸುಡುತ್ತಿದ್ದು ಹೆಚ್ಚಿನ ನೀರಿನ ಮೂಲಕವಾದರೂ ಬೆಂಕಿ ಆರಿಸಿ ಹೊಗೆ ನಿಲ್ಲಿಸುವ ಪ್ರಯತ್ನ ಆಗಲಿ ಎನ್ನುವುದು ಪರಿಸರವಾದಿಗಳ ಆಗ್ರಹ.