ಗೋಕರ್ಣದ ಬೀದಿಯಲ್ಲಿ ಕಸದ ರಾಶಿ

| Published : Mar 24 2024, 01:34 AM IST

ಸಾರಾಂಶ

ಓಣಿ, ಸಂಧಿಯಲ್ಲಿ ಮಲ, ಮೂತ್ರ ವಿರ್ಸಜನೆ ಮಾಡಿ ತೆರಳಿದ್ದು, ಈ ಓಣಿಗಳೆಲ್ಲಾ ಇಂದಿಗೂ ಗಬ್ಬು ವಾಸನೆ ಬರುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

ಗೋಕರ್ಣ: ಶಿವರಾತ್ರಿ ಪ್ರಯುಕ್ತ ಹಾಕಲಾಗಿದ್ದ ಅಂಗಡಿಗಳು ಇತ್ತೀಚೆಗೆ ತೆರವುಗೊಂಡಿವೆ. ಆದರೆ ಊರಿನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದೆ. ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟು 240 ಅಂಗಡಿಗಳು ಈ ಬಾರಿ ಜಾತ್ರೆಗೆ ಬಂದಿತ್ತು. ಪ್ರತಿದಿನ ಸಹಸ್ರಾರು ಜನರು ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು. ರಾತ್ರಿಯವರೆಗೂ ಜನಜಾತ್ರೆ ನಡೆದರೆ, ಮುಂಜಾನೆ ಪ್ರತಿ ಮಾರ್ಗದಲ್ಲೂ ಪ್ಲಾಸ್ಟಿಕ್‌ ತ್ಯಾಜ್ಯದ ರಾಶಿಯೇ ಬೀಳುತ್ತಿದ್ದು, ಪ್ರತಿದಿನ ಒಂದು ಟನ್‍ಗೂ ಅಧಿಕ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಲಾಗಿತ್ತು. ಇತ್ತೀಚೆಗೆ ಎಲ್ಲ ಅಂಗಡಿಗಳು ತೆರವುಗೊಂಡಿದೆ.ಹಲವು ಮನೆಯ ಮುಂದೆ ಮಲ ಮೂತ್ರ ವಿಸರ್ಜನೆ ಮಾಡಿದ್ದಾರೆ. ದುಬಾರಿ ಹಣ ನೀಡಿದರೂ ರಸ್ತೆ ಅಂಚಿನಲ್ಲಿ ಮಲಗಿ, ಓಣಿ, ಸಂಧಿಯಲ್ಲಿ ಮಲ, ಮೂತ್ರ ವಿರ್ಸಜನೆ ಮಾಡಿ ತೆರಳಿದ್ದು, ಈ ಓಣಿಗಳೆಲ್ಲಾ ಇಂದಿಗೂ ಗಬ್ಬು ವಾಸನೆ ಬರುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

ಪ್ಲಾಸ್ಟಿಕ್ ಹವಾ: ಪ್ಲಾಸ್ಟಿಕ್ ನಿಷೇಧ ಎಂಬುದು ಕೇವಲ ನಾಮಫಲಕದಲ್ಲಿ ಉಳಿದಿದ್ದು, ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ತುಳುಕುತ್ತಿತ್ತು. ಶಿವರಾತ್ರಿ ದಿನ ಮಾತ್ರ ಮಂದಿರದಲ್ಲಿ ಹಾಲಿ ಪ್ಯಾಕೆಟ್ ನಿಷೇಧಿಸಿದ್ದು, ಬಿಟ್ಟರೆ ಉಳಿದೆಲ್ಲಾ ದಿನ ಪ್ಲಾಸ್ಟಿಕ್ ಬಳಕೆ ಮಾಮೂಲು ಆಗಿತ್ತು.

ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಈ ಬಾರಿ ಹಂಗಾಮಿ ಅಂಗಡಿಗಳು ಬಾಡಿಗೆ ಹೆಚ್ಚಿಸಿರುವ ಗ್ರಾಮ ಪಂಚಾಯಿತಿ ಬಗ್ಗೆ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಶಿವರಾತ್ರಿ ಜಾತ್ರೆಗೆ ರಥಬೀದಿ, ಗಂಜೀಗದ್ದೆ, ಬಸ್‍ನಿಲ್ದಾಣದ ರಸ್ತೆ ಸೇರಿದಂತೆ ವಿವಿಧ ಮಾರ್ಗದಲ್ಲಿ ಹರಾಜಿನ ಮೂಲಕ ಅಂಗಡಿಯನ್ನು ನೀಡಲಾಗುತ್ತದೆ. ಚಿಕ್ಕ ಜಾಗಕ್ಕೂ ದೊಡ್ಡ ಮೊತ್ತದ ಹಣ ನೀಡಿ ಜಿಲ್ಲೆಯ ವಿವಿಧೆಡೆಯ ವ್ಯಾಪಾರಸ್ಥರು ವಹಿವಾಟು ನಡೆಸುತ್ತಿದ್ದರು. ಈ ವರ್ಷ ಶೇ. 20ರಷ್ಟು ಬಾಡಿಗೆ ಹೆಚ್ಚಳ ಮಾಡಿದ್ದರು.

ಈ ಅಂಗಡಿಗಳ ಹರಾಜು ಮಾಡುವ ವೇಳೆ ಎಲ್ಲಡೆ ಗುರುತಿನ ಸಂಖ್ಯೆ ನಮೂದಿಸಿ ನೀಡಲಾಗಿತ್ತು. ಇದರಂತೆ ಹಣ ತುಂಬಿ ಪಡೆದ ಕೆಲವರಿಗೆ ಒಂದೇ ನಂಬರ್‌ ಇಬ್ಬರಿಗೆ ನೀಡಿದ್ದರು. ಇದರಿಂದ ವ್ಯಾಪಾರಸ್ಥರು ತೊಂದರೆ ಅನುಭವಿಸಿದ್ದರು. ಇದಲ್ಲದೇ ಹಲವು ಮನೆಗಳ ಮುಂದೆ ಜಾಗವನ್ನು ಪಂಚಾಯಿತಿ ಅಂಗಡಿಕಾರರಿಗೆ ನೀಡಿದ್ದರೆ, ಮನೆಯ ಮಾಲೀಕರು ಬೇರೆಯವರಿಗೆ ಕೊಟ್ಟಿದ್ದರು. ತಮ್ಮ ಮನೆಯ ಆವಾರದಲ್ಲಿ ಪಂಚಾಯಿತಿ ಹೇಗೆ ಹಣ ಪಡೆಯುತ್ತದೆ ಎಂದು ಮನೆಯ ಮಾಲೀಕರು ವಾದಿಸಿದರೆ, ಟೆಂಡರ್‌ ಪಡೆದವರು ಹಣವನ್ನಾದರೂ ವಾಪಸ್‌ ನೀಡಿ ಎಂದು ಗ್ರಾಮ ಪಂಚಾಯಿತಿಗೆ ದುಂಬಾಲು ಬಿದ್ದಿದ್ದರು. ಈ ವಿವಾದ ಪ್ರಸ್ತುತ ಗ್ರಾಹಕರ ನ್ಯಾಯಾಲಯಕ್ಕೆ ತಲುಪಿದ್ದು ವಿಚಾರಣೆಯಲ್ಲಿದೆ. ಇದರಂತೆ ಇನ್ನೂ ಅನೇಕ ಆವಾಂತರಗಳು ನಡೆದಿತ್ತು.