ಕಸದ ಗುಡ್ಡೆಗೆ ಬೆಂಕಿ: 300 ಅಡಿಕೆ, 50 ತೆಂಗು ಮರ ಭಸ್ಮ

| Published : Feb 04 2025, 12:30 AM IST

ಸಾರಾಂಶ

ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸಿ ವಿಲೇವಾರಿ ಮಾಡಿದ ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ರೈತರೊಬ್ಬರಿಗೆ ಸೇರಿದ್ದ ಅಡಿಕೆ ತೋಟಕ್ಕೆ ಬೆಂಕಿ ಆವರಿಸಿ ಸುಮಾರು 20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ಸೋಮವಾರ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾವಗಡ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸಿ ವಿಲೇವಾರಿ ಮಾಡಿದ ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ರೈತರೊಬ್ಬರಿಗೆ ಸೇರಿದ್ದ ಅಡಿಕೆ ತೋಟಕ್ಕೆ ಬೆಂಕಿ ಆವರಿಸಿ ಸುಮಾರು 20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ಸೋಮವಾರ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ನಿಡಗಲ್‌ ಹೋಬಳಿ ವ್ಯಾಪ್ತಿಯ ಅರಸೀಕೆರೆ ಗ್ರಾಮದ ವಾಸಿ ಮುನಿಸ್ವಾಮಿ ಬೇಸಾಯದಿಂದ ಜೀವನ ಸಾಗಿಸುತ್ತಿದ್ದು ಇದೇ ಗ್ರಾಮದ ಕೆರೆ ಸಮೀಪದ ಜಮೀನಿನಲ್ಲಿ ಅಡಕೆ ಹಾಗೂ ತೆಂಗಿನ ತೋಟ ಬೆಳೆಸಿದ್ದಾರೆ. ಅರಸೀಕೆರೆ ಗ್ರಾಮದಲ್ಲಿ ಮನೆಮನೆಯಿಂದ ಸಂಗ್ರಹಿಸಿದ್ದ ಘನ ತ್ಯಾಜ್ಯವನ್ನು ಕೆರೆಯ ಪಕ್ಕದ ಸ್ಥಳದಲ್ಲಿ ರಾಶಿ ಮಾಡಿದ್ದು ಸುಟ್ಟುಹಾಕುವ ಸಲುವಾಗಿ ಅವೈಜ್ಞಾನಿಕವಾಗಿ ಈ ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿ ಆವರಿಸಿ ರೈತ ಬಿ.ಕೆ.ಮುನಿಸ್ವಾಮಿಯ ತೋಟಕ್ಕೆ ಬೆಂಕಿ ವ್ಯಾಪಿಸಿಕೊಂಡ ಕಾರಣ ಅಡಕೆ ತೆಂಗು ಹಾಗೂ ಇತರೆ ಡ್ರಿಪ್‌ ಸಾಮಗ್ರಿಗಳು ಸುಟ್ಟುಭಸ್ಮವಾಗಿ ಸುಮಾರು 20 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಇದೇ ವೇಳೆ ಸಂತ್ರಸ್ತ ರೈತ ಬಿ.ಕೆ.ಮುನಿಸ್ವಾಮಿ ಮಾತನಾಡಿ ನಮ್ಮ ಜಮೀನಿನ ಪಕ್ಕ ಸುರಿಯುತ್ತಿದ್ದು ಸಂಜೆ 6ಗಂಟೆಯ ಬಳಿಕ ಕಸದ ರಾಶಿಗೆ ಬೆಂಕಿ ಹಚ್ಚಿದ ಕಾರಣ ನಮ್ಮ ತೋಟಕ್ಕೆ ಬೆಂಕಿ ಆವರಿಸುವ ಮೂಲಕ ಅಡಕೆ ತೆಂಗು ಹಾಗೂ ಇತರೆ ತೋಟಗಾರಿಕೆಯ ಬೆಳೆಗ‍ಳು ಸಂರ್ಪೂಣ ನಷ್ಟಕ್ಕಿಡಾಗಿದೆ. ಈ ರೀತಿ ಘಟನೆ ನಡೆಯುತ್ತಿರುವುದು ಎರಡನೇ ಸಲವಾಗಿದೆ. ತೋಟದಲ್ಲಿ ಫಸಲಿಗೆ ಬಂದ 300 ಅಡಿಕೆ ಮರ, 50 ತೆಂಗಿನ ಮರ, ಮೂರು ಹುಣಸೆ ಮರ, ಕೊಳವೆಬಾವಿಯ ಪಂಪ್‌ ಸೆಟ್‌ ಹಾಗೂ ಡ್ರಿಪ್‌ ಸಾಮಗ್ರಿಗಳು, ಜೀವಾಮೃತ ಟ್ಯಾಂಕ್ ಬೆಂಕಿಯಲ್ಲಿ ಸುಟ್ಟು ಹೋಗಿದೆ. ತಮಗಾದ ನಷ್ಟವನ್ನು ಗ್ರಾಪಂ ವತಿಯಿಂದ ನೀಡಿ ನೆರವಾಗುವಂತೆ ಮನವಿ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.