ಗೌರಿಬಿದನೂರು ಸರ್ಕಾರಿ ಶಾಲೆ ಮುಖ್ಯದ್ವಾರದಲ್ಲಿ ಕಸದ ರಾಶಿ: ದಾರಿಯುದ್ದಕ್ಕೂ ದುರ್ವಾಸನೆ

| Published : Oct 30 2025, 01:30 AM IST

ಗೌರಿಬಿದನೂರು ಸರ್ಕಾರಿ ಶಾಲೆ ಮುಖ್ಯದ್ವಾರದಲ್ಲಿ ಕಸದ ರಾಶಿ: ದಾರಿಯುದ್ದಕ್ಕೂ ದುರ್ವಾಸನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪ್ರವೇಶ ದ್ವಾರದೆದುರು ರಾಶಿ-ರಾಶಿ ಕಸ ಕಾಣಬಹುದಾಗಿದೆ. ನಗರದೊಳಗಿನ ಬಹುತೇಕ ಶಾಲೆಗಳ ಸ್ಥಿತಿ ಹೀಗೇ ಇದೆ.

ಕನ್ನಡಪ್ರಭ ವಾರ್ತೆ, ಗೌರಿಬಿದನೂರು

ʻನಮ್ಮ ಪರಿಸರ ಸ್ವಚ್ಛವಾಗಿಡಬೇಕು, ಎಲ್ಲೆಂದರಲ್ಲಿ ಕಸ ಚೆಲ್ಲಬಾರದುʼ ಎಂದು ಶಾಲೆ ಒಳಗೆ ಪಾಠ ಕೇಳಿಸಿಕೊಂಡ ಮಕ್ಕಳು ಶಾಲೆ ಆವರಣದಿಂದ ಹೊರಗೆ ಬರುತ್ತಿದ್ದಂತೆ ಕಸದರಾಶಿ ದಾಟಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂದಪಟ್ಟ ಇಲಾಖೆ ಅಧಿಕಾರಿಗಳಾಗಲಿ, ನಗರಸಭೆ ಸದಸ್ಯರಾಗಲಿ ಗಮನ ಹರಿಸದಿರುವುದು ವಿಪರ್ಯಾಸ. ಸರ್ಕಾರಿ ಶಾಲೆ ಮುಂದೆಯೇ ರಾಶಿ-ರಾಶಿ ಕಸ ಬಿದ್ದಿದ್ದು, ತೀವ್ರ ದುರ್ವಾಸನೆ ಬೀರುತ್ತಿದೆ.

ನಗರದ ಹೃದಯಭಾಗದಲ್ಲಿರುವ ಕೋಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪ್ರವೇಶ ದ್ವಾರದೆದುರು ರಾಶಿ-ರಾಶಿ ಕಸ ಕಾಣಬಹುದಾಗಿದೆ. ನಗರದೊಳಗಿನ ಬಹುತೇಕ ಶಾಲೆಗಳ ಸ್ಥಿತಿ ಹೀಗೇ ಇದೆ. ಸರ್ಕಾರಿ ಶಾಲೆ ಸುತ್ತಮುತ್ತಲಿನ ಪರಿಸರ ಎಷ್ಟು ಕೆಟ್ಟದಾಗಿದೆ ಎಂದರೆ, ಮಕ್ಕಳಿಗೆ ಸ್ವಚ್ಚತೆ ಪಾಠ ಹೇಳುವಾಗ ಶಿಕ್ಷಕರಿಗೂ ಮುಜುಗರವಾಗುವಂತಿದೆ.

ʻಇಷ್ಟೇ ಅಲ್ಲ, ಈ ಶಾಲೆಯ ಪಕ್ಕದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹ ಇದೆ. ತಾಲೂಕು ಮಟ್ಟದ ಅಧಿಕಾರಿ ಕಚೇರಿ ಪಕ್ಕದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಇತ್ತ ಗಮನ ಹರಿಸಿಲ್ಲ. ಈ ಶಾಲೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಒಂದುವೇಳೆ ಈ ತ್ಯಾಜ್ಯದಿಂದ ಮಕ್ಕಳ ಆರೋಗ್ಯ ಏರು-ಪೇರಾಗಿ ರೋಗ-ರುಜಿನಗಳು ಬಂದಲ್ಲಿ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಶಾಲೆಯು ನಗರದ ಹೃದಯಭಾಗದಲ್ಲಿದ್ದು ಈಗ ತಾನೆ 100ರ ಸಂಭ್ರಮ ಆಚರಿಸಿದೆ, ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಇಂದು ದೊಡ್ಡ-ದೊಡ್ಡ ಸ್ಥಾನ ಅಲಂಕರಿಸಿದ್ದಾರೆ. ಇಂತಹ ಮಹೋನ್ನತ ಹೆಸರನ್ನು ಹೊಂದಿರುವ ಶಾಲೆ ಕಸದಿಂದಾಗಿ ಅಸಹ್ಯ ಪಡುವಂತಾಗಿದೆ. ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದಿಲ್ಲ. ಆದುದರಿಂದ ಈ ರೀತಿ ಅಧ್ವಾನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಶಾಲೆ ಪಕ್ಕದಲ್ಲೇ ಚಿಕ್ಕ ಹೋಟೆಲ್‌ ಕೂಡ ಇದೆ. ಅಲ್ಲಿಯೂ ಸ್ವಚ್ಛತೆ ಕಾಣಲಿಲ್ಲ. ಕಸವನ್ನು ಸರಿಯಾಗಿ ಸಂಗ್ರಹಿಸದ ಕಾರಣ ಶಾಲೆಯ ಮುಂದೆ, ಅಕ್ಕ-ಪಕ್ಕದ ಜನರು ದಿನನಿತ್ಯ ಕಸವನ್ನು ತಂದು ಶಾಲೆ ಮುಭಾಗದಲ್ಲಿ ಸುರಿಯುತ್ತಾರೆ ಎಂದು ಸ್ಥಳಿಯರು ದೂರಿದ್ದಾರೆ. ಅದರಲ್ಲಿ ಪ್ಲಾಸ್ಟಿಕ್‌ ಹಾಗೂ ಇತರೆ ಕೆಲವು ವಸ್ತುಗಳು ಗಾಳಿಗೆ ಹಾರಾಡಿ ರಸ್ತೆಯಲ್ಲಷ್ಟೇ ಅಲ್ಲದೆ ಶಾಲೆಯೊಳಗೂ ಹೋಗುತ್ತಿದೆ. ಇಲ್ಲಿ ಸಂಚರಿಸುವ ಇತರೆ ಶಾಲೆ-ಕಾಲೇಜು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಾರೆ. ಶಾಲೆಯೊಳಗೂ ದುರ್ವಾಸನೆ ಮೂಗಿಗೆ ರಾಚುತ್ತದೆ.

- ಬಾಕ್ಸ್

ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಬೇಕಿದ್ದ ಅಧಿಕಾರಿಗಳೇ ಆರೋಗ್ಯ ಹಾಳು ಮಾಡಲು ನಿಂತಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮವಹಿಸಿ ಈ ಸ್ಥಳದಲ್ಲಿ ಯಾರೂ ಕಸ ಸುರಿಯದಂತೆ ಬ್ಲಾಕ್‌ ಸ್ಪಾಟ್‌ನ್ನಾಗಿ ಗುರುತಿಸಬೇಕಿದೆ.

- ನವೀನ್‌ಕುಮಾರ್‌.ಜಿ.ಎಂ. ಆಸ್ಪತ್ರೆಯ ಸಿಬ್ಬಂದಿ

- ಬಾಕ್ಸ್

ಶಾಲೆಯ ಅಕ್ಕ-ಪಕ್ಕದ ಮನೆಯವರು ಮುಂದೆ ಶಾಲೆಯಿದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದಂತೆ ಕಸದ ರಾಶಿ ಹಾಕಿರುವುದು ಬೇಸರ ತಂದಿದೆ. ಸ್ವಚ್ಛತೆಗೆ ಮುಂದಾಗದ ನಗರಸಭೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು.- ನರಸಿಂಹಗೌಡ ಆರ್., ರಾಜ್ಯ ಉಪಾಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರ ವೇದಿಕೆ.