ಪಾಲಿಕೆ ಮುಖ್ಯದ್ವಾರಕ್ಕೆ ಕಸ ಚೆಲ್ಲಿ ಆಕ್ರೋಶ

| Published : Jul 26 2024, 01:31 AM IST

ಸಾರಾಂಶ

ಪೌರ ಕಾರ್ಮಿಕರ ಬಹುತೇಕ ಬೇಡಿಕೆಗಳು ಸರ್ಕಾರದ ಮಟ್ಟದಲ್ಲಿ ಬಗೆಹರಿಯುವಂಹತದ್ದು. ಹೆಚ್ಚುವರಿ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸಲು ಪಾಲಿಕೆಗೆ ಅಧಿಕಾರವಿಲ್ಲ. ಈ ಕುರಿತು ಪಾಲಿಕೆ ಸಾಮಾನ್ಯ ಸಭೆ ಠರಾವ್‌ ಮಾಡಿದ್ದು, ಈ ಹಿಂದೆಯೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಹುಬ್ಬಳ್ಳಿ:

ನೇರ ನೇಮಕಾತಿ, ನೇರ ವೇತನ ಪಾವತಿ, ಗುತ್ತಿಗೆ ಪದ್ಧತಿ ರದ್ದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರಲ್ಲೊಬ್ಬ ಬೆಳಗ್ಗೆ ಕಸವನ್ನು ಪಾಲಿಕೆ ಕಚೇರಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಏಳೆಂಟು ದಿನಗಳಿಂದ ಪೌರಕಾರ್ಮಿಕರು ಪಾಲಿಕೆ ಎದುರಿಗೆ ಧರಣಿ ನಡೆಸುತ್ತಿದ್ದಾರೆ. 386 ಹುದ್ದೆ ಖಾಲಿಯಿವೆ ಇವುಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಬೇಕು. 799 ಗುತ್ತಿಗೆ ಕಾರ್ಮಿಕರನ್ನು ನೇರ ವೇತನ ಪಾವತಿಯಡಿಗೆ ನೇಮಿಸಿಕೊಳ್ಳಬೇಕು. ಗುತ್ತಿಗೆ ಪದ್ಧತಿ ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಆಗ್ರಹ ಪೌರಕಾರ್ಮಿಕರದ್ದು.ಆದರೆ ಪಾಲಿಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪೌರಕಾರ್ಮಿಕನೊಬ್ಬ ಗುರುವಾರ ಬೆಳಗ್ಗೆ ಕಸದ ರಾಶಿಯನ್ನು ತಂದು ಪಾಲಿಕೆ ಮುಖ್ಯದ್ವಾರದ ಬಳಿಯೇ ಹಾಕಿ ಆಕ್ರೋಶ ವ್ಯಕ್ತಪಡಿಸಿದ. ಬಳಿಕ ಪಾಲಿಕೆ ಸಿಬ್ಬಂದಿ ಅದನ್ನು ಜೆಸಿಬಿಯಿಂದ ಸ್ವಚ್ಛಗೊಳಿಸಿದರು.

ಪೊರಕೆ ಹಿಡಿದು ಪ್ರತಿಭಟನೆ:

ಬಳಿಕ ಪ್ರತಿಭಟನಾಕಾರರು ಸರ್‌ ಸಿದ್ಧಪ್ಪ ಕಂಬಳಿ ರಸ್ತೆ ಮೂಲಕ ಡಾ. ಅಂಬೇಡ್ಕರ್‌ ಸರ್ಕಲ್‌ ವರೆಗೂ ಮತ್ತು ಅಲ್ಲಿಂದ ಚೆನ್ನಮ್ಮ ಸರ್ಕಲ್‌ ಮಾರ್ಗವಾಗಿ ಪುನಃ ಪಾಲಿಕೆ ಆವರಣದ ವರೆಗೆ ಪೊರಕೆ ಹಿಡಿದು ಬೃಹತ್‌ ಮೆರವಣಿಗೆ ನಡೆಸಿದರು.

ಈ ವೇಳೆ ಪೌರಕಾರ್ಮಿಕರ ಸಂಘದ ವಿಜಯ ಗುಂಟ್ರಾಳ, ಬಸಪ್ಪ ಮಾದರ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ ಮೈಲಾರಿ ದೊಡ್ಡಮನಿ, ಮಹೇಶ್‌ ಮಾದರ, ಕನಕಪ್ಪ ಕೊಟಬಾಗಿ, ಪ್ರಶಾಂತ ಚಿಕ್ಕಲಗಾರ, ರಾಕೇಶ್‌ ಚುರಮುರಿ, ರಾಜು ನಾಗರಾಳ ಸೇರಿದಂತೆ ನೂರಾರು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪೊಲೀಸ್‌ ಆಯುಕ್ತ- ಪಾಲಿಕೆ ಆಯುಕ್ತರ ಸಭೆ

ಏತನ್ಮಧ್ಯೆ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಗುರುವಾರ ಮಧ್ಯಾಹ್ನ ದಿಢೀರ್‌ ಪಾಲಿಕೆ ಕಮಿಷನರ್‌ ಕಚೇರಿಗೆ ಭೇಟಿ ನೀಡಿದರು. ಅನಿರ್ದಿಷ್ಟ ಮುಷ್ಕರ ಕುರಿತಾಗಿ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಧರಣಿಯಿಂದ ಜನರಿಗೆ ಮತ್ತು ಟ್ರಾಫಿಕ್‌ ಸಮಸ್ಯೆಯಾಗುತ್ತಿದ್ದು, ಸಮಸ್ಯೆ ಇತ್ಯರ್ಥಕ್ಕೆ ಪೊಲೀಸ್‌ ಕಮಿಷನರ್‌ ಪಾಲಿಕೆ ಆಯುಕ್ತರ ಗಮನ ಸೆಳೆದರು ಎಂದು ತಿಳಿದು ಬಂದಿದೆ.

ಭೇಟಿ ಬಳಿಕ ಶಶಿಕುಮಾರ, ಧರಣಿ ನಿರತರನ್ನು ಭೇಟಿ ಮಾಡಿದರು. ಈ ವೇಳೆ ಎಸಿಪಿ ಶಿವಪ್ರಕಾಶ ನಾಯ್ಕ, ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಸ್‌. ಹೂಗಾರ ಇದ್ದರು.ಸರ್ಕಾರವೇ ನಿರ್ಧರಿಸಬೇಕು

ಪೌರ ಕಾರ್ಮಿಕರ ಬಹುತೇಕ ಬೇಡಿಕೆಗಳು ಸರ್ಕಾರದ ಮಟ್ಟದಲ್ಲಿ ಬಗೆಹರಿಯುವಂಹತದ್ದು. ಹೆಚ್ಚುವರಿ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸಲು ಪಾಲಿಕೆಗೆ ಅಧಿಕಾರವಿಲ್ಲ. ಈ ಕುರಿತು ಪಾಲಿಕೆ ಸಾಮಾನ್ಯ ಸಭೆ ಠರಾವ್‌ ಮಾಡಿದ್ದು, ಈ ಹಿಂದೆಯೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು. ಸಂಕಷ್ಟ ಭತ್ಯೆ ಪಾವತಿ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ ಕಮಿಷನರ್‌, ಪಾಲಿಕೆ ಆವರಣದಲ್ಲಿ ಪೌರಕಾರ್ಮಿಕರ ಸಂಘಕ್ಕೆ ಕೊಠಡಿ ಕಲ್ಪಿಸಬೇಕೆಂಬ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು. ಇದೇ ರೀತಿ 9 ಸಂಘಟನೆಗಳು ಕೊಠಡಿ ಕೊಡುವಂತೆ ಕೇಳಿವೆ. ಹಾಗಾಗಿ ಸದ್ಯಕ್ಕೆ ಯಾವ ಸಂಘಟನೆಗಳಿಗೂ ಕೊಠಡಿ ನೀಡುವ ಪ್ರಸ್ತಾವನೆ ಪಾಲಿಕೆ ಮುಂದಿಲ್ಲ. ಹೊಸ ಕಟ್ಟಡ ನಿರ್ಮಾಣದ ಬಳಿಕ ಆ ಬಗ್ಗೆ ಗಮನ ಹರಿಸುತ್ತೇವೆ. ನೇರ ನೇಮಕಾತಿ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಈಗಾಗಲೇ ಸಿದ್ಧಪಡಿಸಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶೀಲನೆ ನಡೆದಿದೆ. ಬಳಿಕ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.