ಕಸ ವಾಹನದ ಹಾಡು ಕೇಳುತ್ತದೆ, ವಾಹನ ಬರುತ್ತಿಲ್ಲ: ಸುಂಟಿಕೊಪ್ಪ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಅಸಮಾಧಾನ

| Published : Dec 29 2023, 01:30 AM IST

ಕಸ ವಾಹನದ ಹಾಡು ಕೇಳುತ್ತದೆ, ವಾಹನ ಬರುತ್ತಿಲ್ಲ: ಸುಂಟಿಕೊಪ್ಪ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಪಂಚಾಯಿತಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತಮ್ಮ ಹಲವು ಸಮಸ್ಯೆಗಳನ್ನು ಅಧಿಕಾರಿಗಳು ತೆರೆದಿಟ್ಟರು. ಇದಕ್ಕೆ ಅಧಿಕಾರಿಗಳು ಸೂಕ್ತ ಪರಿಹಾರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಸ ಸಂಗ್ರಹಕ್ಕೆ ಬಾರದ ವಾಹನ, 10 ವರ್ಷಗಳಿಂದ ಈಡೇರದ ನ್ಯಾಯಬೆಲೆ ಅಂಗಡಿ ಬೇಡಿಕೆ, ಸಮಯಕ್ಕೆ ಸರಿಯಾಗಿ ತೆರಯದ ನ್ಯಾಯಬೆಲೆ ಅಂಗಡಿಗಳು, ನಿರ್ವಹಣೆಯಿಲ್ಲದ ಚರಂಡಿಯ ಪೋಟೋ, ಕೈಸುಡುತ್ತಿರುವ ವಿದ್ಯುತ್ ಬಿಲ್‌ನ ಪ್ರದರ್ಶನ, ನಿರಂತರ ಟ್ರಾಫಿಕ್ ಜಾಮ್, ಕನ್ನಡ ವೃತ್ತದಲ್ಲಿ ಜಿಬ್ರಾಕ್ರಾಸ್ ಅಳವಡಿಸುವಂತೆ ಆಗ್ರಹ ಇದು ಗುರುವಾರ ನಡೆದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಗ್ರಾಮ ಸಭೆಯ ಪ್ರಮುಖಾಂಶ.

ಸುಂಟಿಕೊಪ್ಪ ಗ್ರಾ.ಪಂ.ನ 2023ನೇ ಸಾಲಿನ ಗ್ರಾಮಸಭೆಯು ಮಂಜನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಗ್ರಾಮಸಭೆಗೆ ನೋಡೆಲ್ ಅಧಿಕಾರಿಯಾಗಿ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಆಗಮಿಸಿದ್ದರು.

ಕಳೆದ ಸಾಲಿನ ಗ್ರಾಮಸಭೆಯ ವರದಿ ಮಂಡನೆಯಾದ ನಂತರ ನೆರೆದಿದ್ದ ಗ್ರಾಮಸ್ಥರು ನಿರ್ಣಯವಾದ ಎಷ್ಟು ಕೆಲಸಗಳು ಅನುಷ್ಠಾನಗೊಂಡಿದೆ. ಚೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ಪಾವತಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಅರ್ಧಭಾಗದಷ್ಟು ಪಾವತಿಸಲಾಗಿದೆ ಮುಂದಿನ ದಿನಗಳಲ್ಲಿ ಪಾವತಿಸಲು ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಕೇಂದ್ರ ಸರ್ಕಾರದ ಜಲಜೀವನ್ ಯೋಜನೆ ಅನುಷ್ಠಾನ ಯಾಕೆ ವಿಳಂಬಗೊಂಡಿದೆ, ಇತರೆಡೆಗಳಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದೆ. ಸುಂಟಿಕೊಪ್ಪದಲ್ಲಿ ಯಾಕೆ ಅನುಷ್ಠಾನಗೊಂಡಿಲ್ಲವೆಂದು ಬಿ.ಕೆ.ಮೋಹನ್ ಪ್ರಶ್ನಿಸಿದರು. ಇದಕ್ಕೆ ಜಿಲ್ಲಾ ಪಂಚಾಯಿತಿ ಅಭಿಯಂತರರಾದ ಫಯಾಜ್, ಟೆಂಡರ್ ಪ್ರಕ್ರಿಯೆಯು ನಡೆದಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಉತ್ತರಿಸಿದರು.* ಕಸ ವಿಲೇವಾರಿ ಆಗುತ್ತಿಲ್ಲಸುಂಟಿಕೊಪ್ಪ ಪಟ್ಟಣದಲ್ಲಿ ಕಸ ವಿಲೇವಾರಿಯು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ, ಕಸವನ್ನು ಸಂಗ್ರಹಿಸುವ ವಾಹನ ಬಾರದ ಹಿನ್ನೆಲೆ ವಾರಗಟ್ಟಲೇ ಕಸವನ್ನು ಮನೆಗಳಲ್ಲಿ ಸಂಗ್ರಹಿಸಿ ಇಡುವಂತಾಗಿದೆ. ಇದರಿಂದ ಮನೆ ಮಂದಿಗೆ ಸಾಂಕ್ರಾಮಿಕ ಬಾಧಿಸುವ ಸಾಧ್ಯತೆ ಹೆಚ್ಚಾಗಿದೆ. ಕಸದ ವಾಹನದ ಹಾಡು ಮಾತ್ರ ಕೇಳಿಸುತ್ತದೆ ಆದರೆ ವಾಹನ ಬರುತ್ತದೆ ಎಂದು ಆ ಭಾಗದ ನಿವಾಸಿಗಳು ಕಾದು ನಿಂತರೂ ಕಸ ಸಂಗ್ರಹಿಸುವ ವಾಹನ ಬಾರದಿರುವುದರಿಂದ ರಸ್ತೆ ಇಕ್ಕೆಲ, ಮನೆಯ ಮುಂಭಾಗದಲ್ಲಿ ಇರಿಸುವ ಕಸವನ್ನು ನಾಯಿ ಸೇರಿದಂತೆ ಇತರೆ ಪ್ರಾಣಿಗಳು ಎಳೆದಾಡುತ್ತಿದೆ. ಹಿಂದಿನಂತೆ ಕಸದ ತೊಟ್ಟಿಗಳನ್ನು ಅಳವಡಿಸಿ. ಕೆಲವು ಮಂದಿ ಅಂಗನವಾಡಿ ಕೇಂದ್ರಗಳ ಮುಂದೆ ಕಸ ಇರಿಸಿ ಹೋಗುತ್ತಿದ್ದು, ಇದನ್ನು ಬೀದಿ ನಾಯಿಗಳು ಎಳೆದಾಡುತ್ತಿದ್ದು, ಕಾರ್ಯಕರ್ತೆ ಹಾಗೂ ಸಹಾಯಕಿ ನಿತ್ಯ ಸ್ವಚ್ಛಗೊಳಿಸುವಂತಾಗಿದೆ. ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಬಿ.ಕೆ.ಮೋಹನ್, ಇಬ್ರಾಹಿಂ, ಇಸಾಕ್ ಖಾನ್, ಫೆಲ್ಸಿ ಡೆನ್ನಿಸ್ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ, ಮುಂದಿನ 2 ತಿಂಗಳಲ್ಲಿ ನೂತನ 2 ವಾಹನ ಖರೀದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ವಾಹನಗಳು ಬಂದಲ್ಲಿ ಸಮಸ್ಯೆಯು ಬಗೆಹರಿಯಲಿದೆ ಎಂದರು.

ಗದ್ದೆಹಳ್ಳದ ಗಿರಿಯಪ್ಪ, ಮನೆ ಬಳಿ ಹರಿಯುತ್ತಿದ್ದ ಮತ್ತೊಂದು ತೋಡು ನೀರನ್ನು ಅವೈಜ್ಞಾನಿಕವಾಗಿ ಈ ಭಾಗದ ತೋಡಿನ ನೀರಿಗೆ ಸೇರ್ಪಡೆಗೊಳಿಸಿರುವುದರಿಂದ ಮಳೆಗಾಲದಲ್ಲಿ ತೋಡು ನೀರು ವಾಸದ ಮನೆಗಳಿಗೆ ನುಗ್ಗುತ್ತಿದ್ದು, ಉಕ್ಕಿ ಹರಿಯಲಾರಂಭಿಸಿದೆ. ಈ ಭಾಗದಲ್ಲಿ ನೆಲೆಸಿರುವ ಮನೆಗಳಿಗೆ ನೀರು ನುಗ್ಗುವುದಲ್ಲದೆ ನಡೆದಾಡಲು ಕಷ್ಟವಾಗುತ್ತಿದ್ದು, ನಮಗೆ ಮಳೆಗಾಲದಲ್ಲಿ ದೋಣಿ ಒದಗಿಸಿಕೊಡುವಂತೆ ರಜಾಕ್ ಹಾಗೂ ಈ ಭಾಗದ ಮಹಿಳೆಯರು ತಮ್ಮ ಕಷ್ಟವನ್ನು ತೋಡಿಕೊಂಡರು.* ನ್ಯಾಯಬೆಲೆ ಅಂಗಡಿ ಬಗ್ಗೆ ಆಕ್ರೋಶ2ನೇ ಮತ್ತು 3ನೇ ವಿಭಾಗದಲ್ಲಿ 10 ವರ್ಷದಿಂದ ನ್ಯಾಯಬೆಲೆ ಅಂಗಡಿಗಾಗಿ ಬೇಡಿಕೆಯನ್ನು ಸಲ್ಲಿಸುತ್ತಿದ್ದೇವೆ. ಇಂದಿನವರೆಗೂ ನ್ಯಾಯಬೆಲೆ ತೆರೆದಿಲ್ಲವೆಂದು ಅಸಾಮಾಧಾನ ವ್ಯಕ್ತಪಡಿಸಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಸೋಪು ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ. ಕೆಲವು ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಪಡಿತರ ಸಾಮಗ್ರಿಗಳನ್ನು ವಿತರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಅಧಿಕಾರಿ ಶ್ವೇತಾ, ಅಧಿಕೃತ ನೋಂದಾಯಿತ ಸಂಘಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡುತ್ತೇವೆ. ಈಗಾಗಲೇ ದೂರು ಬಂದ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮಕೈಗೊಂಡಿದ್ದೇವೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.ವಾರಾಂತ್ಯ ದಿನಗಳಲ್ಲಿ ವಾಹನ ದಟ್ಟಣೆಯು ಹೆಚ್ಚಾಗಿದ್ದು, ರಸ್ತೆಯ 2 ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಟ್ಟಡಗಳನ್ನು ನಿಯಮ ಮೀರಿ ನಿರ್ಮಿಸಲಾಗುತ್ತಿದೆ. ಇದರಿಂದ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಶಾಲಾ ಮಕ್ಕಳು ಶಾಲೆಗೆ ಬರುವ ಸಂದರ್ಭ, ಶಾಲೆ ಬಿಡುವ ಸಂದರ್ಭ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಕನ್ನಡ ವೃತ್ತ ಹಾಗೂ ಮಾರುಕಟ್ಟೆ ರಸ್ತೆ ಬಳಿ ಜಿಬ್ರಾಕ್ರಾಸ್ ಅಳವಡಿಸಿ ಎಂದು ಬಿ.ಕೆ.ಮೋಹನ್, ಇಬ್ರಾಹಿಂ, ಇಸಾಕ್‌ಖಾನ್, ಶಿಕ್ಷಕಿ ಸೌಭಾಗ್ಯ, ಪೈರೋಜ್ ಖಾನ್, ಸದಸ್ಯ ಪಿ.ಎಫ್.ಸಬಾಸ್ಟೀನ್ ಒತ್ತಾಯಿಸಿದರು.

ಗದ್ದೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹ ಅಡುಗೆಗೂ ನೀರಿನ ಸಮಸ್ಯೆ ತಲೆದೋರಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಾಕುಮಾರಿ, ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸೌಭಾಗ್ಯ ತಿಳಿಸಿದರು.

ವಿದ್ಯುತ್ ಬಿಲ್ ದುಬಾರಿಯಾಗುತ್ತಿದೆ. ಈ ಹಿಂದೆ ಕೈನಲ್ಲಿ ಬರೆದುಕೊಡುವಾಗ ಬಿಲ್ ಯಾವುದೇ ರೀತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ. ಡಿಜಿಟಲೀಕರಣಗೊಂಡ ನಂತರ ಬಿಲ್ ಅಧಿಕಗೊಳ್ಳುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಸಭೆಯ ಮಹತ್ವತೆ ಹಾಗೂ ಸಾಧಕಭಾದಕಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿರುವ ಇರುವ ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್‌, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ರಫೀಕ್‌ ಖಾನ್, ಆಲಿಕುಟ್ಟಿ, ಪ್ರಸಾದ್‌ ಕುಟ್ಟಪ್ಪ, ಶಬೀರ್, ಸೋಮನಾಥ್, ಜೀನಾಸುದ್ದೀನ್, ಮಂಜುನಾಥ, ನಾಗರತ್ನ ಸುರೇಶ್, ಮಂಜುಳಾ (ರಾಸಥಿ), ವಸಂತಿ, ಹಸೀನಾ, ರೇಷ್ಮ, ಗ್ರಾ..ಪಂ. ಲೆಕ್ಕಾಧಿಕಾರಿ ಚಂದ್ರಕಲಾ, ಸಿಬ್ಬಂದಿಯಾದ ಡಿ.ಎಂ.ಮಂಜುನಾಥ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಇದ್ದರು.