ಸಾರಾಂಶ
ಮಾನ್ವಿ ಪಟ್ಟಣದ ಕಲ್ಮಠ ಶಾಲೆಯಲ್ಲಿ ಕಲ್ಮಠ ವತಿಯಿಂದ ನಡೆಯುವ ಗಾರಿಗೆ ಜಾತ್ರೆಯ ಭಿತ್ತಿ ಪತ್ರವನ್ನು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಮಾನ್ವಿ
ಮುಕ್ತಗುಚ್ಚ ಬೃಹನ್ಮಠ ಕಲ್ಮಠದ ವತಿಯಿಂದ ಪ್ರತಿ ವರ್ಷದಂತೆ ಶಿವರಾತ್ರಿ ನಿಮಿತ್ತ 9ನೇ ವರ್ಷದ ಗಾರಿಗೆ ಜಾತ್ರೆಯನ್ನು ಮಾ.3 ರಿಂದ 8ರವರೆಗೆ ಆಯೋಜಿಸಲಾಗಿದೆ ಎಂದು ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.ಪಟ್ಟಣದ ಕಲ್ಮಠ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾನುವಾರ ಧರ್ಮ ಧ್ವಜಾರೋಹಣ, ನಿತ್ಯ ಸಂಜೆ ಕೈವಲ್ಯ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಬ್ಯಾಡಗಿಹಾಳ್ನ ಸಿದ್ದರಾಮ ಶಾಸ್ತ್ರಿಗಳು ಹಿರೇಮಠ ಅವರು ಪ್ರವಚನ ನೀಡಲಿದ್ದಾರೆ.
ಸೋಮವಾರ ಚಿತ್ರಕಲಾ ಸ್ಪರ್ಧೆಯನ್ನು ಖ್ಯಾತ ಚಿತ್ರಕಲಾವಿದರಾದ ವಾಜೀದ್ ಸಾಜೀದ್ ಸಹೋದರರು ಉದ್ಘಾಟಿಸಲಿದ್ದು, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.5 ಮತ್ತು 6 ಕ್ಕೆ ಮಹಿಳಾ ದೇಶಿ ಕ್ರೀಡೆಗಳು, ಸಂಜೆ ಜಾನಪದ ಕಾರ್ಯಕ್ರಮ, ದತ್ತಿ ಬಹುಮಾನ ಸಮಾರಂಭಗಳು ಜರುಗಲಿವೆ. 7 ಕೈವಲ್ಯ ದರ್ಶನ ಪ್ರವಚನ ಸಮಾರೋಪ, ಮಾ.8 ರಂದು ಮಹಾಶಿವರಾತ್ರಿ ನಿಮಿತ್ತ 15 ಕ್ಕು ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ, ಸಂಜೆ ಶ್ರೀಮಠದಲ್ಲಿ ಲಿಂ.ಶ್ರೀ ಗುರು ವಿರೂಪಾಕ್ಷೇಶ್ವರ ಪಲ್ಲಕ್ಕಿ ಉತ್ಸವ, ನಂತರ ನಡೆಯಲಿರುವ ರಥೋತ್ಸವ ಗಾರಿಗೆ ಜಾತ್ರೆಯನ್ನು ಬೆಂಗಳೂರಿನ ಬೆಳಕು ಅಕಾಡೆಮಿಯ ಅಧ್ಯಕ್ಷ ಆಶ್ವಿನಿ ಅಂಗಡಿರವರು ಚಾಲನೆ ನೀಡಲಿದ್ದಾರೆ. ಮಹಾಶಿವರಾತ್ರಿಯ ಸಂಜೆ ಮಹಾಪ್ರಸಾದ, ರಾತ್ರಿ 8 ಕ್ಕೆ ನೃತ್ಯ ಕಲಾ ವೈಭವ ನೃತ್ಯಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.ಜಾತ್ರಾ ಮಹೋತ್ಸವದಲ್ಲಿ ಸಚಿವರ, ಶಾಸಕರು, ವಿವಿಧ ಪಕ್ಷಗಳ ಮುಖಂಡರು, ಮಠಗಳ ಸ್ವಾಮೀಜಿಗಳು, ಸಮಾಜಗಳ ಪ್ರಮುಖರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ನೀಲಗಲ್ ಬೃಹನ್ಮಠದ ರೇಣುಕ ಶಾಂತಮಲ್ಲ ಶಿವಾಚಾರ್ಯರು. ರಾಯಚೂರಿನ ಮಂಗಳವಾರಪೇಟೆ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಇದ್ದರು.