ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾದರೆ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ಮಾಡುವುದು ಹೇಗೆ?, ಅಗತ್ಯ ವಸ್ತುಗಳಡಿ ಬರುವ ಅಡುಗೆ ಅನಿಲ ಬೆಲೆ ಏರಿಕೆಯನ್ನು ಯುದ್ಧದ ನೆಪದಲ್ಲಿ ಏರಿಕೆ ಮಾಡಿರುವುದು ಸರಿಯಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರವು ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ ೬೦ ರು. ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದು ಘೋಷಣೆಗಳನ್ನು ಕೂಗಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಬೆಲೆಗಳನ್ನು ಏರಿಸಿ ಬಡ ಜನತೆಗೆ ಅತ್ಯಂತ ಕಷ್ಟ ಕಾಲದ ಆರ್ಥಿಕ ದುಸ್ಥಿತಿಗೆ ತಳ್ಳಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ೪೦೦ ರು. ಇದ್ದ ಅಡುಗೆ ಅನಿಲ ಬೆಲೆಯನ್ನು ಏಕಾಏಕಿ ೧೧೦೦ ರು.ಗೆ ಏರಿಸಿದರು. ಅದನ್ನು ಪ್ರತಿಭಟಿಸಿ ಕಾಂಗ್ರೆಸ್ ದೇಶದ ಉದ್ದಗಲಕ್ಕೂ ಬೀದಿಗಿಳಿದು ಪ್ರತಿಭಟಿಸಿದ್ದರ ಪರಿಣಾಮ ಸಿಲಿಂಡರ್ ಬೆಲೆಯಲ್ಲಿ ೨೦೦ ರು. ಕಡಿಮೆ ಮಾಡುವ ನಾಟಕವಾಡಿತ್ತು. ಆದರೆ, ಈಗ ಮತ್ತೆ ವಿನಾಕಾರಣ ಪ್ರತಿ ಸಿಲೆಂಡರ್ ಬೆಲೆಯನ್ನು ಒಮ್ಮೆಲೇ ೬೦ ರು. ಹೆಚ್ಚಿಸಿ ಬಡಜನತೆಯ ಮೇಲೆ ಅನ್ಯಾಯದ ಆರ್ಥಿಕ ಹೊರೆಯನ್ನು ಹೇರಿದೆ. ಕೂಡಲೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಮಾತನಾಡಿ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾದರೆ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ಮಾಡುವುದು ಹೇಗೆ?, ಅಗತ್ಯ ವಸ್ತುಗಳಡಿ ಬರುವ ಅಡುಗೆ ಅನಿಲ ಬೆಲೆ ಏರಿಕೆಯನ್ನು ಯುದ್ಧದ ನೆಪದಲ್ಲಿ ಏರಿಕೆ ಮಾಡಿರುವುದು ಸರಿಯಲ್ಲ. ಬಡ-ಮಧ್ಯಮ ವರ್ಗದವರಿಗೆ ಇದು ಹೊರೆಯಾಗಿದೆ. ತಕ್ಷಣವೇ ಈ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದ ಮಹಿಳೆಯರು ಮತ್ತು ಜನತೆ ಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರವು ದಿನೇ ದಿನೇ ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಬಡವರು ಅಡುಗೆ ಮಾಡ ದಂತಹ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಅಚ್ಛೇ ದಿನ್ ತರುತ್ತೇವೆ ಎಂದವರು ಇಂದು ಪ್ರತಿಯೊಬ್ಬರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಕಾಂಗ್ರೆಸ್ ಮುಖಂಡರಾದ ಚಂದಗಾಲು ವಿಜಯ್ ಕುಮಾರ್ , ಸುಂಡಹಳ್ಳಿ ಮಂಜುನಾಥ್, ಅಜ್ಜಹಳ್ಳಿ ರಾಮಕೃಷ್ಣ, ಚನ್ನಪ್ಪ, ಚಿನಕುರಳಿ ರಮೇಶ್, ಎಲ್.ಕೃಷ್ಣ, ಹನ್ಸಿಯಾಬಾನು, ಕೃಷ್ಣೇಗೌಡ, ಅಭಿಲಾಷ್, ನಾಗಮಣಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಮಹಿಳಾ ಘಟಕದ ಸದಸ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು