ವಿಜಯಪುರ: ವಾಣಿಜ್ಯ ಸಿಲಿಂಡರ್‌ಗಳ ಅಭಾವದಿಂದಾಗಿ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಒಂದೆಡೆಯಾದರೆ, ಬಡವರ ಹಸಿವು ನೀಗಿಸುವ "ಇಂದಿರಾ ಕ್ಯಾಂಟೀನ್'''''''' ಗೂ ಇದರ ಬಿಸಿ ತಟ್ಟಿದ್ದು, ಸೌದೆ ಒಲೆಯಲ್ಲಿ ಅಡುಗೆ ಸಿದ್ದಪಡಿಸಲಾಗುತ್ತಿದೆ.
ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಳೆದ ಒಂದು ವಾರದಿಂದ ಗ್ಯಾಸ್ ಪೂರೈಕೆಯಾಗದೆ ಅಡುಗೆ ಸಿಬ್ಬಂದಿ ಅನಿವಾರ್ಯ ಹೊರಗಡೆಯೇ ಅಡುಗೆ ಮಾಡುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿ ಸೌದೆ ಉರಿಸಿ ಅಡುಗೆ ಮಾಡುವುದು ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.ಕ್ಯಾಂಟೀನ್ ಪಕ್ಕದಲ್ಲೇ ಶಾಲೆಯಿದ್ದು, ಸೌದೆ ಒಲೆಯಿಂದ ಹೊರ ಬರುವ ದಟ್ಟ ಹೊಗೆ ಶಾಲಾ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೊಗೆಯಿಂದಾಗಿ ಮಕ್ಕಳು ಪಾಠ ಕೇಳಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಡುಗೆ ತಯಾರಿಸಲು ಒಂದು ಲೋಡ್ ಸೌದೆಗೆ ೫ ರಿಂದ ೬ ಸಾವಿರ ರು. ಖರ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಒಣ ಸೌದೆ ಸಿಗುತ್ತಿಲ್ಲ. ಹಾಗಾಗಿ ಹಸಿ ಸೌದೆ ಬಳಸುವುದರಿಂದ ಅಡುಗೆ ತಡವಾಗುತ್ತಿದ್ದು, ವಿಪರೀತ ಹೊಗೆಯಿಂದ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತಿದೆ ಎಂದು ಕ್ಯಾಂಟೀನ್ ಸಿಬ್ಬಂದಿಯೊಬ್ಬರು ತಿಳಿಸಿದರು.
ಆಹಾರ ಮೆನುವಿನಲ್ಲಿ ವ್ಯತ್ಯಯ:ಬೆಳಗ್ಗೆ ೭.೩೦ಕ್ಕೆ ತಿಂಡಿ, ಮಧ್ಯಾಹ್ನ ೧೨.೩೦ಕ್ಕೆ ಊಟ ಹಾಗೂ ಸಂಜೆ ೭ ಗಂಟೆಗೆ ರಾತ್ರಿ ಊಟ ಸಿದ್ಧವಾಗಿರಬೇಕು. ಆದರೆ ಸಿಲಿಂಡರ್ ಇಲ್ಲದ ಕಾರಣ ಚಪಾತಿ ಸುಡುವ ಮಿಷನ್ ಸ್ಥಗಿತಗೊಂಡಿದೆ. ಗ್ರಾಹಕರು ಬಂದು ಇಡ್ಲಿ, ಚಪಾತಿ ಕೇಳುತ್ತಾರೆ. ಒಲೆಯಲ್ಲಿ ಇವುಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೊರಗಿನಿಂದ ಚಪಾತಿ ತಂದು ಕೊಡುತ್ತಿದ್ದೇವೆ. ಶೀಘ್ರವಾಗಿ ಗ್ಯಾಸ್ ಪೂರೈಸದಿದ್ದರೆ ತೊಂದರೆಯಾಗಲಿದೆ ಎಂದು ಅಡುಗೆ ತಯಾರಕ ಚನ್ನಬಸವ ಹೇಳಿದರು.ಗ್ಯಾಸ್ ಏಜೆನ್ಸಿಯವರಿಗೆ ಫೋನ್ ಮಾಡಿದರೆ ಕರೆಯನ್ನೇ ಸ್ವೀಕರಿಸುತ್ತಿಲ್ಲ. ಅನಿವಾರ್ಯವಾಗಿ ಮೂರು ಪಟ್ಟು ಹಣ ನೀಡಿ ಸೌದೆ ತರಿಸಿ ರೈಸ್ ಬಾತ್, ಉಪ್ಪಿಟ್ಟು ಮಾಡುತ್ತಿದ್ದೇವೆ. ಕ್ಯಾಂಟೀನ್ ನಂಬಿ ಬರುವ ನೂರಾರು ಕೂಲಿ ಕಾರ್ಮಿಕರಿಗೆ ತೊಂದರೆಯಾಗಬಾರದೆಂದು ಈ ಸಾಹಸ ಮಾಡುತ್ತಿದ್ದೇವೆ ಎಂದು ಕ್ಯಾಂಟೀನ್ ಸಿಬ್ಬಂದಿ ಸರಸ್ವತಮ್ಮ ಹೇಳಿದರು.
ಪ್ರತಿನಿತ್ಯ ಸಾವಿರಾರು ಕಾರ್ಮಿಕರು, ಹಮಾಲಿಗಳು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು ಇಂದಿರಾ ಕ್ಯಾಂಟೀನನ್ನೇ ಅವಲಂಬಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.