ಕನ್ನಡಪ್ರಭ ವಾರ್ತೆ ಪಾವಗಡ ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ಪಾವಗಡ ನಗರ ಹಾಗೂ ತಾಲೂಕಿನಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಹೀಗಾಗಿ ಪಟ್ಟಣದ ನಾಯಕ್ ಏಜೆನ್ಸಿ ಮುಂದೆ ಖರೀದಿಗೆ ಗ್ರಾಹಕರು ಮುಗಿಬಿದ್ದ ದೃಶ್ಯ ಶುಕ್ರವಾರ ಕಂಡು ಬಂದಿತು.

ಪಟ್ಟಣದ ತುಮಕೂರು ರಸ್ತೆಯಲ್ಲಿನ ನಾಯಕ್ ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂದೆ ಮನೆ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈ ಕೆಯಲ್ಲಿ ಪ್ರಮುಖವಾಗಿದ್ದು, ಬೆಳಗ್ಗೆ 7ರಿಂದಲೇ ಜನ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು.ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಅನಿಲ ಸರಬರಾಜು ಮಾಡುವ ಹಡಗುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತೈಲ ಕಂಪನಿಗಳು ಸಮಜಾಯಿಷಿ ನೀಡುತ್ತಿವೆ.ಇದನ್ನೇ ನೆಪ ಮಾಡಿ ಕೊಂಡಿರುವ ಕೆಲವು ಸ್ಥಳೀಯ ವಿತರಕರು, ದಾಸ್ತಾನು ಇದ್ದರೂ ಸಿಲಿಂಡರ್‌ ಪೂರೈಕೆ ಮಾಡುತ್ತಿಲ್ಲ ಮತ್ತು ಗೃಹ ಬಳಕೆಯ ಗ್ಯಾಸ್ ಸಿಲಿಂಡ‌ರ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಸರ್ಕಾರ ತಕ್ಷಣ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಖಾಲಿ ಸಿಲಿಂಡರ್ ಹಿಡಿದು ರಸ್ತೆಗಿಳಿದ ಜನರು, ಇಂಡಿಯನ್ ಗ್ಯಾಸ್ ಕಚೇರಿಗೆ ಮುತ್ತಿಗೆ ಹಾಕಿ ಗ್ಯಾಸ್‌ ಸಿಲಿಂಡರ್‌ ನೀಡುವಂತೆ ಆಕ್ರೋಶ ಹೊರಹಾಕಿದ ಪ್ರಸಂಗ ನಡೆಯಿತು.

ಈ ವೇಳೆ ಇಂಡಿಯನ್ ಗ್ಯಾಸ್ ಮಾಲಿಕ ಕಾರ್ತಿಕ್ ಪ್ರತಿಕ್ರಿಯಿಸಿ, ಸಿಲಿಂಡರ್ ದಾಸ್ತಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಮಗೆ ಬರಬೇಕಾಗಿರುವ ಗ್ಯಾಸ್ ಸಿಲಿಂಡ‌ರ್ ಬಂದಿದೆ. ಆತಂಕ ಪಡುವ ಅಗತ್ಯವಿಲ್ಲ.ಸರ್ವ‌ರ್‌ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಒಟಿಪಿ ಬಂದಿರುವ ಎಲ್ಲಾ ಗ್ರಾಹಕರಿಗೂ ಸರ್ವರ್ ಬಂದ ನಂತರ ಸಿಲಿಂಡ‌ರ್ ವಿತರಣೆ ಮಾಡಲಾಗುತ್ತದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.ಈ ಕುರಿತು ಸ್ಥಳಕ್ಕೆ ಬಂದ ತಹಸೀಲ್ದಾರ್‌ ರವಿ, ಜನರನ್ನು ಸಮಾಧಾನಗೊಳಸಿ ಮಾತನಾಡಿ, ಗ್ಯಾಸ್ ಅಭಾವದ ನಡುವೆ ದುಬಾರಿ ದರಕ್ಕೆ ಸಿಲಿಂಡರ್‌ ಮಾರಾಟವಾಗುತ್ತಿರುವ ಆರೋಪಗಳು ಕೇಳಿಬಂದಿದ್ದು, ಈ ಮಧ್ಯೆ ಹೋಟೆಲ್, ಟೀ ಶಾಪ್ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಮನೆ ಬಳಕೆಯ ಸಿಲಿಂಡರ್‌ಗಳನ್ನು ಬಳಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಬಳಸಿದ್ರೆ ಸಿಲಿಂಡರ್‌ಗಳನ್ನು ಸೀಜ್ ಮಾಡಿ, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಸಲಾಗುವುದು. ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿಗಳಿಂದ ಇಂಧನ ಪೂರೈಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿದೆ. ಆದರೆ, ಪಾವಗಡ ತಾಲೂಕಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳು ಅವಶ್ಯಕತೆಗೆ ತಕ್ಕಂತೆ ಸರಬರಾಜು ಆಗುತ್ತಿವೆ. ಸಾರ್ವಜನಿಕರು ಯಾವುದೇ ಆಂತಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ತೈಲ ಕಂಪನಿಗಳಿಂದ ಅಡುಗೆ ಅನಿಲ ಸಿಲಿಂಡರ್‌ಗಳು ಸರಬರಾಜು ಆಗುತ್ತಿದ್ದು, ಸಾರ್ವಜನಿಕರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿ ಕೊಡಬಾರದು. ತಾಲೂಕಿನಲ್ಲಿನ ಹೋಟೆಲ್, ಬೇಕರಿ, ಬೀದಿ ಬದಿ ವ್ಯಾಪಾರಿಗಳು ಗೃಹ ಬಳಕೆ ಸಿಲಿಂಡರ್ ಗಳನ್ನು ವಾಣಿಜ್ಯ ಬಳಕೆಗಾಗಿ ಉಪಯೋಗಿಸುವುದು ಕಂಡುಬಂದಲ್ಲಿ, ಅಂತಹವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.