ಗೌರಿ ಹಬ್ಬ: ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ

| Published : Aug 31 2025, 02:00 AM IST

ಸಾರಾಂಶ

ಹೊನ್ನಮ್ಮನ ಕೆರೆ ಜಾತ್ರೋತ್ಸವ ಹಾಗೂ ಬಾಗಿನ ಅರ್ಪಣಾ ಕಾರ್ಯಕ್ರಮ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಗೌರಿ ಹಬ್ಬ ಪ್ರಯುಕ್ತ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಜಾತ್ರೋತ್ಸವ ಹಾಗು ಬಾಗಿನ ಅರ್ಪಣಾ ಕಾರ್ಯಕ್ರಮ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.ಹೊನ್ನಮ್ಮನ ಕೆರೆಯ ದಡದಲ್ಲಿನ ಹೊನ್ನಮ್ಮತಾಯಿ, ಬಸವೇಶ್ವರ ಹಾಗು ಗಣಪತಿ ದೇವಾಲಯದಲ್ಲಿ ಬೆಳಗಿನಿಂದಲೇ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ನಂತರ ತಾವು ಮನೆಯಿಂದ ಪೂಜಿಸಿ ತಂದ ಬಾಗಿನವನ್ನು ಬಂಗಾರದ ಕಟ್ಟೆಯ ಮೇಲಿಟ್ಟು ಹೊನ್ನಮ್ಮತಾಯಿಗೆ ಪೂಜೆ ಸಲ್ಲಿಸಿದರು. ಬಿದಿರಿನಿಂದ ಹೆಣೆದ ಮೊರದಲ್ಲಿ ಅರಸಿನ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಾಚಣಿಕೆ, ಬಳೆ, ಗೌರಿ ಹೂ, ತೆಂಗಿನ ಕಾಯಿ, ಫಲತಾಂಬೂಲಗಳನ್ನೊಳಗೊಂಡ ಬಾಗಿನವನ್ನು ಹೊನ್ನಮ್ಮ ತಾಯಿಯ ಕುಟುಂಬಸ್ಥರು ಮೊದಲಿಗೆ ಕೆರೆಯಲ್ಲಿ ಅರ್ಪಿಸಿದರು.ಶಾಸಕ ಡಾ.ಮಂತರ್‌ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ದೊಡ್ಡಮಳ್ತೆ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ್, ದೊಡ್ಡಮಳ್ತೆ ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಪ್ರಮುಖರಾದ ಎಚ್.ಆರ್.ಸುರೇಶ್, ಕೆ.ಎಂ.ಲೋಕೇಶ್, ಬಿ.ಬಿ.ಸತೀಶ್, ಬಿ.ಜೆ.ದೀಪಕ್ ಮತ್ತಿತರರು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.ಹೊನ್ನಮ್ಮನಕೆರೆ ಅಭಿವೃದ್ಧಿಗೆ ರು. 50ಲಕ್ಷ ವಿಶೇಷ ಅನುದಾನ: ಡಾ.ಮಂತರ್‌ ಗೌಡಸಾವಿರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಜಾತ್ರೋತ್ಸವ ಆಚರಿಸುತ್ತಿರುವುದು ಶ್ಲಾಘನೀಯವಾದದು. ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೊನ್ನಮ್ಮನ ಕೆರೆ ವಿಶಾಲವಾಗಿರುವುದರಿಂದ ಪ್ರತಿದಿನ ಬೋಟಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು. ಪ್ರಸಕ್ತ ವರ್ಷ ವಿಶೇಷ ಅನುದಾನದಲ್ಲಿ 50 ಲಕ್ಷ ರು.,ಗಳನ್ನು ಹೊನ್ನಮ್ಮಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುವುದು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.