ಗೌರಿ ಹಬ್ಬ: ಜಿಲ್ಲೆಯಲ್ಲಿ ಪೊಲೀಸರ ಕಟ್ಟೆಚ್ಚರ

| Published : Sep 06 2024, 01:06 AM IST

ಸಾರಾಂಶ

ಮುಂಬರುವ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಗಾಂಜಾ ವಿರುದ್ಧ ಸಮರ ಸಾರಲಾಗಿದೆ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ಮಿಥುನ್‌ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಒಟ್ಟು 53 ಜನ ರೌಡಿಶೀಟರ್ ಗಳನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 1 ಆರ್.ಎ.ಎಫ್. ಕಂಪೆನಿ, 15 ಹೆಚ್ಚುವರಿ ಕೆ.ಎಸ್.ಆರ್.ಪಿ. ತುಕಡಿ ಗಳು, 8 ಡಿ.ಎ.ಆರ್. ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. 1 ಸಾವಿರ ಹೋಂ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಬೇರೆ ಜಿಲ್ಲೆಗಳಿಂದ 1500 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 1300 ರೌಡಿಶೀಟರ್ ಗಳನ್ನು ಗುರುತಿಸಲಾಗಿದೆ. 80-100 ಜನರಿಗೆ ನ್ಯಾಯಾಂಗ ಬಂಧನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಗಾಂಜಾ ವಿರುದ್ಧ ಸಮರ:

ಮುಂಬರುವ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಗಾಂಜಾ ವಿರುದ್ಧ ಸಮರ ಸಾರಲಾಗಿದೆ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 45 ದಿನದ ಅವಧಿಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗಿದೆ. ಸುಮಾರು 250 ಜನರಲ್ಲಿ ಗಾಂಜಾ ಸೇವನೆ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ 68 ಜನರಲ್ಲಿ ಗಾಂಜಾ ಸೇವನೆ ಪತ್ತೆಯಾಗಿದೆ. ಅವರೆಲ್ಲರ ಮೇಲೆ ಕ್ರಮ ಜರುಗಿಸಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಈ ಕ್ರಮ ಜರುಗಿಸಲಾಗಿದೆ. 10 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸ ಲಾಗಿದೆ. 19 ಆರೋಪಿತರನ್ನು ಗಾಂಜಾ ಮಾರಾಟ ಮತ್ತು ಸಾಗಾಟದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ಸುಮಾರು 1.14 ಲಕ್ಷ ರು. ಮೌಲ್ಯದ ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಖಾಲಿ ನಿವೇಶನ, ಲೇಔಟ್ ಹಾಗೂ ನಿರ್ಜನ ಪ್ರದೇಶಗಳಲ್ಲಿ ಇದ್ದಂತಹ ಯುವಕರಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು ಎಂದರು.

1188 ಜನರ ವಿರುದ್ಧ ಗಲಾಟೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಂಜಾ ಸೇವನೆ ಮಾಡಿದ್ದ 59 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 68 ಆರೋಪಿಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಗಾಂಜಾ ಮಾರಾಟ ಹಾಗೂ ಸಾಗಾಟದ 10 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಸಿಸಿ ಕ್ಯಾಮರಾ ಹದ್ದಿನ ಕಣ್ಣು :

ಮಹಾನಗರ ಪಾಲಿಕೆ ವತಿಯಿಂದ 350ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಹಾಗೂ ಸಾರ್ವಜನಿಕರ ಸಹಕಾರದಿಂದ 500 ಸೇರಿ ಒಟ್ಟು 850 ಸಿಸಿ ಕ್ಯಾಮರಾಗಳನ್ನು ನಗರದಲ್ಲಿ ಅಳವಡಿಸಿದ್ದು, ಇಲಾಖೆ ವತಿಯಿಂದಲೂ 100 ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದೆ. ಕಳೆದ ಸಾಲಿನಲ್ಲಿ ಗಣಪತಿ ವಿಸರ್ಜನೆ ಸಂದರ್ಭದ ಎಲ್ಲಾ ವಿಡಿಯೋ ಪರಿಶೀಲಿಸಿ ಶಾಂತಿ ಭಂಗ ಚಟುವಟಿಕೆಗಳನ್ನು ನಡೆಸುವವರನ್ನು ಗುರುತಿಸಿ ವಶಕ್ಕೆ ಪಡೆದು ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಕಾರ್ಯಪ್ಪ, ಡಿವೈಎಸ್ಪಿ ಬಾಬು ಆಂಜನಪ್ಪ, ಸುರೇಶ್, ಇದ್ದರು.

22ರವರೆಗೆ ಬೈಕ್ ರ‍್ಯಾಲಿ ನಿಷಿದ್ಧಫ್ಲೆಕ್ಸ್ ಅಳವಡಿಕೆ ಮತ್ತು ಪ್ರಿಂಟಿಂಗ್‌ಗೆ ಸಂಬಂಧಿಸಿದಂತೆ ಈಗಾಗಲೇ ಫ್ಲೆಕ್ಸ್ ತಯಾರಕರ ಹಾಗೂ ಡಿಟಿಪಿಗಳ ಸಭೆ ನಡೆಸಿ ಅವರಿಗೆ ಸೂಚನೆ ನೀಡಿದ್ದು, ಫ್ಲೆಕ್ಸ್‌ ಗಳಲ್ಲಿ ಮುದ್ರಣಕ್ಕೆ ಬರುವವರ ಮತ್ತು ಮುದ್ರಣ ಮಾಡಿದವರ ಹೆಸರು ಮತ್ತು ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕೆಂದು ಸೂಚಿಸಲಾಗಿದೆ. ಡಿಜೆಯನ್ನು ಈಗಾಗಲೇ ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಸೆ. 22ರವರೆಗೆ ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ ನಿಷೇಧಿಸಲಾಗಿದೆ. ಭದ್ರಾವತಿಯಲ್ಲಿ 130, ಸಾಗರ 70, ಶಿರಾಳಕೊಪ್ಪದಲ್ಲಿ 25 ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದರು.