ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮಿತ್ ಬದ್ದಿ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಆರೋಪಿಯು ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನಿಸಿರುವುದು ಫೋಟೋಗಳಲ್ಲಿ ಕಂಡುಬಂದಿದೆ.

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನೂತನ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಅಮಿತ್‌ ಬದ್ದಿ ಹೂಗುಚ್ಛ ನೀಡಿ ಸನ್ಮಾನಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮಿತ್ ಬದ್ದಿ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಆರೋಪಿಯು ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನಿಸಿರುವುದು ಫೋಟೋಗಳಲ್ಲಿ ಕಂಡುಬಂದಿದೆ.

ಅಧಿಕಾರ ಸ್ವೀಕರಿಸಿದ ಕೂಡಲೇ ಡ್ರಗ್ ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದೇಶ ನೀಡಿದ್ದ ಆಯುಕ್ತ ಬೋರಸೆ ಅವರನ್ನೇ ಡ್ರಗ್ಸ್ ಪ್ರಕರಣದ ಆರೋಪಿಯೊಬ್ಬರು ಸನ್ಮಾನಿಸಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹೊಸ ಆಯುಕ್ತರಿಗೆ ಸ್ಥಳೀಯ ರೌಡಿಶೀಟರ್‌ಗಳು, ಪಾತಕಿಗಳು ಅಥವಾ ಪ್ರಕರಣ ಎದುರಿಸುತ್ತಿರುವವರ ಕುರಿತು ಸಂಪೂರ್ಣ ಮಾಹಿತಿ ಇಲ್ಲದಿರುವ ಸಾಧ್ಯತೆ ಇದೆ. ಆದರೆ, ಪೊಲೀಸ್ ಆಯುಕ್ತರ ಕಚೇರಿಗೆ ಇಂತಹ ಆರೋಪಿಗಳು ಪ್ರವೇಶಿಸಿ ಸನ್ಮಾನಿಸುವ ಮಟ್ಟಿಗೆ ಅವಕಾಶ ದೊರೆತಿದ್ದು ಹೇಗೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳೊಂದಿಗೆ ಪರಿಚಯ ಬೆಳೆಸಿಕೊಳ್ಳಲು ರೌಡಿಶೀಟರ್‌ಗಳು ಹಾಗೂ ಪ್ರಕರಣ ಎದುರಿಸುತ್ತಿರುವವರು ವಿವಿಧ ರೀತಿಯಲ್ಲಿ ಪ್ರಯತ್ನಿಸುವುದು ಸಾಮಾನ್ಯ. ಆದರೆ, ಇಂತಹ ಸಂದರ್ಭದಲ್ಲಿ ಪೊಲೀಸ್ ಆಯುಕ್ತಾಲಯದ ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆಯೇ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ನೂತನ ಆಯುಕ್ತರು ಡ್ರಗ್ಸ್ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲೇ ಆರೋಪಿಯೊಬ್ಬರಿಂದ ಸನ್ಮಾನ ಸ್ವೀಕರಿಸಿರುವ ಫೋಟೋಗಳು ವೈರಲ್ ಆಗಿರುವುದು ಪೊಲೀಸ್ ಇಲಾಖೆಗೆ ಮುಜುಗರದ ಸಂಗತಿಯಾಗಿದ್ದು, ಈ ಕುರಿತು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಪೊಲೀಸ್ ಆಯುಕ್ತರ ಸ್ಪಷ್ಟನೆ: ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ನಾಗರಿಕರು ಶುಭ ಕೋರಲು ಆಗಮಿಸಿದ್ದ ವೇಳೆ ಅಪರಾಧ ಹಿನ್ನೆಲೆಯುಳ್ಳ ಕೆಲವರು ಛಾಯಾಚಿತ್ರ ತೆಗೆಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಪೊಲೀಸ್ ಇಲಾಖೆಯೊಂದಿಗಿನ ಯಾವುದೇ ಸಂಬಂಧವೆಂದು ಪರಿಗಣಿಸಬಾರದು. ಹು-ಧಾ ಮಹಾನಗರ ಪೊಲೀಸರು ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ನಿಷ್ಪಕ್ಷಪಾತವಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಬದ್ಧರಾಗಿದ್ದಾರೆ ಎಂದು ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಭೂಷಣ ಬೋರಸೆ ಸ್ಪಷ್ಟನೆ ನೀಡಿದ್ದಾರೆ.