ಕನ್ಯೆ ನಿಶ್ಚಯವಾದ ಕುಟುಂಬಸ್ಥರು ಬೀಗರ ಮನೆಗೆ ಗೌರಿ ಹುಣ್ಣಿಮೆಗೆ ಸಂದರ್ಭದಲ್ಲಿ ಸಕ್ಕರೆ ಗೊಂಬೆ, ಸೀರೆ, ಮಲ್ಲಿಗೆ ಹೂವು, ಮಲ್ಲಿಗೆ ಹೂವಿನ ದಂಡೆ ತರುವ ಸಂಪ್ರದಾಯವಿದೆ. ಹೀಗಾಗಿ ಗೌರಿ ಹುಣ್ಣಿಮೆಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಗೊಂಬೆಗಳು ಖರ್ಚಾಗುತ್ತವೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಮನೆ ಮನೆಗಳಲ್ಲಿ ಗೌರಿಹುಣ್ಣಿಮೆ ಹಿನ್ನೆಲೆಯಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಗೌರಿ ಹಾಡುಗಳನ್ನು ಹಾಡುತ್ತಾ ಬಣ್ಣ ಬಣ್ಣದ ಸಕ್ಕರೆ ಗೊಂಬೆಗಳ ಆರತಿ ಬೆಳಗಿ ಸಂಭ್ರಮಿಸಿದರು.

ನಾಲ್ಕೈದು ದಿನಗಳಿಂದ ಇಲ್ಲಿಯ ಹಳೆ ಹುಬ್ಬಳ್ಳಿ, ಜನತಾ ಬಜಾರ್‌, ದುರ್ಗದ ಬೈಲ್‌ ಸೇರಿದಂತೆ ಆಯಾ ವಾರ್ಡ್‌ಗಳ ಮಾರುಕಟ್ಟೆ ಪ್ರದೇಶ ಸೇರಿದಂತೆ ತಾಲೂಕು ಕೇಂದ್ರ, ಹೋಬಳಿಗಳಲ್ಲೂ ಸಕ್ಕರೆ ಗೊಂಬೆಗಳ ಮಾರಾಟ ಶುರುವಾಗಿದ್ದು, ಶುಕ್ರವಾರ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಖರೀದಿಸಿದರು. ಸಾಮಾನ್ಯ ದಿನಗಳಲ್ಲಿ ಮಲ್ಲಿಗೆ ಹೂವು ₹40ರಿಂದ ₹50ಕ್ಕೆ 4 ಮೊಳ ಮಾರಾಟವಾಗುತ್ತದೆ. ಆದರೆ ಶುಕ್ರವಾರ ₹100ರಿಂದ ₹120 ವರೆಗೂ ಮಾರಾಟವಾಗಿದೆ. ಇದೆ ಮಲ್ಲಿಗೆಯ ಹೂವಿನ ದಂಡೆ ಕನಿಷ್ಠ ₹50ರಿಂದ ₹150 ವರೆಗೂ ಮಾರಾಟವಾಗಿದೆ.

ಕನ್ಯೆ ನಿಶ್ಚಯವಾದ ಕುಟುಂಬಸ್ಥರು ಬೀಗರ ಮನೆಗೆ ಗೌರಿ ಹುಣ್ಣಿಮೆಗೆ ಸಂದರ್ಭದಲ್ಲಿ ಸಕ್ಕರೆ ಗೊಂಬೆ, ಸೀರೆ, ಮಲ್ಲಿಗೆ ಹೂವು, ಮಲ್ಲಿಗೆ ಹೂವಿನ ದಂಡೆ ತರುವ ಸಂಪ್ರದಾಯವಿದೆ. ಹೀಗಾಗಿ ಗೌರಿ ಹುಣ್ಣಿಮೆಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಗೊಂಬೆಗಳು ಖರ್ಚಾಗುತ್ತವೆ.₹200 ವರೆಗೂ ಮಾರಾಟ:

ಹಬ್ಬದ ಹಿನ್ನೆಲೆಯಲ್ಲಿ ಸಕ್ಕರೆ ಗೊಂಬೆಗಳ ಖರೀದಿ ಜೋರಾಗಿದ್ದು, ಕಿಲೋಗೆ ₹200 ವರೆಗೂ ಮಾರಾಟವಾಗಿವೆ.

ಕಟ್ಟಿಗೆ ಪಡಿಯಚ್ಚುಗಳಿಗೆ ಸಕ್ಕರೆ ಪಾಕವನ್ನು ಹಾಕಿ ಈ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಾರೆ. ಆರತಿ, ರಥ, ಶಿವ-ಪಾರ್ವತಿ, ಆನೆ, ನಂದಿ, ಗೋಪುರ ಹೀಗೆ ಬೇರೆ ಆಕಾರದಲ್ಲಿ ಬಣ್ಣ ಬಣ್ಣಗಳನ್ನು ಹಾಕಿ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಾರೆ.

ಸೀರೆ ಉಟ್ಟು ಶೃಂಗಾರಗೊಂಡ ಮೇಲೆ ಮಲ್ಲಿಗೆ ಹೂವು ಮುಡಿಯುವ ಮಹಿಳೆಯರು ಗೆಳತಿಯರೊಂದಿಗೆ ಆರತಿ ಹಿಡಿದು ಗೌರಿ ಹಾಡುಗಳನ್ನು ಹಾಡುತ್ತಾ ದೇವಸ್ಥಾನಗಳು ಸೇರಿ ಗೌರಿ ಪ್ರತಿಷ್ಠಾಪಿಸಿದ ಮನೆಗೆ ತೆರಳಿ ಆರತಿ ಬೆಳಗುತ್ತ ಭಕ್ತಿ ಸಮರ್ಪಿಸುತ್ತಾರೆ.

ಸೀಗೆ ಹುಣ್ಣಿಮೆ ಸಂದರ್ಭದಲ್ಲೂ ಕೆಲವು ಕಡೆ ಮಹಿಳೆಯರು ಆರತಿ ಬೆಳಗುವ ಸಂಪ್ರದಾಯವಿದೆ.

ಪ್ರತಿ ವರ್ಷ ನಾವು ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತೇವೆ. ಬಹಳಷ್ಟು ಜನರು ಹಬ್ಬದ ಸಂದರ್ಭದಲ್ಲಿ ಕೇಳುತ್ತಾರೆ. ಲಾಭಕ್ಕಿಂತ ಜನರ ಒತ್ತಡದ ಹಿನ್ನೆಲೆಯಲ್ಲಿ ಇದನ್ನು ಮುಂದುವರಿಸಿಕೊಂಡಿ ಹೋಗುತ್ತಿದ್ದೇವೆ ಎಂದು ಸುವರ್ಣ ಜವಳಿ ಹೇಳಿದರು.