ಸಾರಾಂಶ
ಬಳ್ಳಾರಿ: ಧರ್ಮವನ್ನು ಬೋಧಿಸದ ಬುದ್ಧ ಧಮ್ಮವನ್ನು ಬೋಧಿಸಿದ. ದೇವರು, ಸ್ವರ್ಗ, ನರಕ, ಕರ್ಮದ ವಿಚಾರಗಳ ಬದಲಿಗೆ ಜನರಲ್ಲಿ ವೈಚಾರಿಕತೆಯ ಮನೋಭಾವ ತುಂಬಿದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ವಿಶೇಷ ಕರ್ತವ್ಯಾಧಿಕಾರಿ ವೆಂಕಟಗಿರಿ ದಳವಾಯಿ ಹೇಳಿದರು.
ತಾಲೂಕಿನ ಸಂಗನಕಲ್ಲು ಗ್ರಾಮದ ಪ್ರಾಗೈತಿಹಾಸಿಕ ಬೆಟ್ಟದಲ್ಲಿ ಪ್ರತಿಷ್ಠಾಪಿಸಲಾಗಿರುವ ಬುದ್ಧನ ಪ್ರತಿಮೆಗೆ ಪುಷ್ಪ ಅರ್ಪಿಸಿ, ಬುದ್ಧ ಪೂರ್ಣಿಮೆ ಆಚರಿಸುವ ಮೂಲಕ ಅವರು ಮಾತನಾಡಿದರು.ನನ್ನನ್ನು ಮತ್ತು ನನ್ನ ವಿಚಾರಗಳನ್ನು ಶೋಧಿಸಿ ಸತ್ಯ ಎನಿಸಿದರೆ ಸ್ವೀಕರಿಸಿ ಎಂದು ಬುದ್ಧ ಹೇಳಿದ. ನಾನು ಯಾವುದೇ ಪ್ರವಾದಿ, ಸಂತನಲ್ಲ. ವಿಶೇಷ ವಿಚಾರಗಳನ್ನು ಹೇಳಲು ಬಂದಿರುವ ಒಬ್ಬ ಸಾಮಾನ್ಯ ಮನುಷ್ಯ ಎಂದು ಗೌತಮ ಬುದ್ಧ ಹೇಳಿಕೊಳ್ಳುತ್ತಿದ್ದರು ಎಂದು ಅವರು ಸ್ಮರಿಸಿದರು.
ಅಂಚೆ ಅಧೀಕ್ಷಕ ವಿಠ್ಠಲ್ ಚಿತಕೋಟೆ ಮಾತನಾಡಿ, ಐತಿಹಾಸಿಕ ಹಿನ್ನೆಲೆಯುಳ್ಳ ಬೆಟ್ಟದ ಪ್ರದೇಶದಲ್ಲಿ ಬುದ್ಧನ ಪುತ್ಥಳಿ ಪ್ರತಿಷ್ಠಾಪಿಸಿ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬ ವಿಶೇಷ ಎಂದರು.ಲೇಖಕ ವೆಂಕಟಯ್ಯ ಅಪ್ಪೆಗೆರೆ, ಕಂಪ್ಲಿಯ ಬೌದ್ಧ ಸಮಾಜ ಮುಖಂಡ ರಮೇಶ್ ಮಾತನಾಡಿದರು. ಇದಕ್ಕೂ ಮುನ್ನ ಬುದ್ಧಪೂರ್ಣಿಮೆ ನಿಮಿತ್ತ ಗಣ್ಯರೆಲ್ಲರೂ ಬುದ್ಧನ ಪ್ರತಿಮೆಗೆ ಮೇಣದ ಬತ್ತಿಹಚ್ಚಿ, ಪುಷ್ಪ ಅರ್ಪಿಸಿದರು. ಬಳಿಕ ಬುದ್ಧನ ಪ್ರಾರ್ಥನೆ ಸಲ್ಲಿಸುವ ಮೂಲಕ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಇದೇ ವೇಳೆ ಬುದ್ಧ ಪೂರ್ಣಿಮೆ ಆಯೋಜಿಸಿದ್ದ ಸಂಗನಕಲ್ ವಿಜಯಕುಮಾರ್ ಮತ್ತು ಕಪ್ಪಗಲ್ ಓಂಕಾರಪ್ಪ ಅವರನ್ನು ಕಂಪ್ಲಿಯ ಬೌದ್ಧ ಸಮಾಜ ವೃಂದದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲೇಖಕಿ ಎನ್.ಡಿ. ವೆಂಕಮ್ಮ, ನಿವೃತ್ತ ಉಪನ್ಯಾಸಕ ಬಿ.ಶ್ರೀನಿವಾಸ ಮೂರ್ತಿ, ಮುಖಂಡರಾದ ಎರ್ರೆಣ್ಣ, ಪಿ.ಜಗನ್ನಾಥ್, ಕೆಎಂಎಫ್ ನಿರ್ದೇಶಕ ಧನಂಜಯ ಹಮಾಲ್, ಗಂಗಾಧರ, ಗ್ರಾಪಂ ಸದಸ್ಯ ಸಿರಿವಾರ ಗಾದಿಲಿಂಗ, ಗ್ರಾಪಂ ಮಾಜಿ ಅಧ್ಯಕ್ಷ ಶೇಖರ್, ಸಂಗನಕಲ್ಲು ಗ್ರಾಪಂ ಅಧ್ಯಕ್ಷೆ ಪ್ರಮೀಳಾ ವೀರೇಶ್, ಗ್ರಾಪಂ ಸದಸ್ಯ ಪಿ.ರಂಜಾನ್ ಬಾಷಾ, ಪುಷ್ಪಾಚಂದ್ರಶೇಖರ್, ಬೈಲೂರು ಲಿಂಗಪ್ಪ, ಶಂಕರ್, ರಘು, ಕಂಪ್ಲಿಯ ಬೌದ್ಧ ಸಮಾಜದ ಪದಾಧಿಕಾರಿಗಳು ಇದ್ದರು.