ಹೊಸಪೇಟೆ: ಗೌತಮ ಬುದ್ಧ ಜಗತ್ತಿಗೆ ಶಾಂತಿ, ಅಹಿಂಸೆಯನ್ನು ಸಾರಿದ ಮಹಾನ್ ವ್ಯಕ್ತಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸೋಮಶೇಖರ್ ಬಣ್ಣದಮನೆ ಹೇಳಿದರು.
ನಗರದ ಜೈ ಭೀಮ್ ವೃತ್ತದಲ್ಲಿ ಭಗವಾನ್ ಗೌತಮ ಬುದ್ಧ ಜಯಂತಿ ಅಂಗವಾಗಿ ಶುಕ್ರವಾರ ನಡೆದ ಬುದ್ಧ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.ಇಂದಿನ ಜಾಗತಿಕ ಸಂಘರ್ಷಗಳ ನಡುವೆ ಬುದ್ಧನ ಅಹಿಂಸೆ ಮತ್ತು ಕರುಣೆಯ ತತ್ವಗಳು ಅತ್ಯಂತ ಪ್ರಸ್ತುತವಾಗಿವೆ. ಗೌತಮ ಬುದ್ಧ ಶಾಂತಿ, ಸಹಬಾಳ್ವೆ ಮತ್ತು ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.
ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ಸಿಂಡಿಕೇಟ್ ಸದಸ್ಯ, ಸಾಹಿತಿ ಪಿ. ಪೀರ್‌ಬಾಷಾ ಮಾತನಾಡಿ, ಬುದ್ಧ ಧರ್ಮ ಈ ಜಗತ್ತಿನ ಮೊದಲ ಧರ್ಮವಾಗಿದೆ. ಬುದ್ದ ತಮ್ಮ ಇಡೀ ಜೀವನ ಜಗತ್ತಿನ ಒಳಿತಿಗಾಗಿ ಚಿಂತಿಸಿದ ಮಹಾನ್ ದಾರ್ಶನಿಕ. ನೈತಿಕ ಧರ್ಮದ ಪರಿಕಲ್ಪನೆಯನ್ನು ಬುದ್ದ ಧರ್ಮ ಮೊದಲು ಪ್ರತಿಪಾದಿಸಿದ್ದು ಎಂದು ಅವರು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ವರಪೇಟೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ, ಸ್ಥಳೀಯ ಮುಖಂಡರಾದ ಸೂರ್ಯನಾರಾಯಣ, ಲಕ್ಷ್ಮಣ್, ಜಿ. ಶಿವಕುಮಾರ್, ಮಾವ್ನಹಳ್ಳಿ ಬಸವರಾಜ್, ದೊಡ್ಮನಿ, ಭರ್ಮನಗೌಡ್ರು, ಜೆ, ಸಿ. ಈರಣ್ಣ, ರಾಮಚಂದ್ರ ಬಾಬು, ಮರಿಸ್ವಾಮಿ, ಪ್ರಕಾಶ್, ಮುದುಕಪ್ಪ, ಸುನಿಲ್, ಹನುಮಂತ, ರಮೇಶ್, ಕೆ.ಸಿ. ಚಂದ್ರ, ಉಮೇಶ್, ಸಣ್ಣ ಮಾರಪ್ಪ, ಇಂತಿಯಾಜಿ, ಸಜ್ಜಾದ್ ಖಾನ್, ವಿನಾಯಕ ಶೆಟ್ಟರ್, ನಾಗರಾಜ್, ಸ್ಲಂ ವೆಂಕಟೇಶ್, ವಿಶಾಲ್ ಮ್ಯಾಸರ್ ಸೇರಿದಂತೆ ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿದ್ದರು.
ಸಭೆಗೂ ಮುನ್ನ ತೆರೆದ ವಾಹನದಲ್ಲಿ ಸಿದ್ದಾರ್ಥ ಗೌತಮ ಬುದ್ಧ, ಸಾಂಸ್ಕೃತಿಕ ನಾಯಕ ಬಸವಣ್ಣ, ಬಾಬಾಸಾಹೇಬ್ ಅಂಬೇಡ್ಕರ ಅವರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿ, ಹರಿಹರ ರಸ್ತೆಯಲ್ಲಿರುವ ಸಿದ್ದಾರ್ಥ ಗೌತಮ ಬುದ್ಧ ವೃತ್ತ ತಲುಪಿತು.
ನೂರಾರು ಯುವಕರು ಮತ್ತು ಬುದ್ಧನ ಅನುಯಾಯಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹೊಸಪೇಟೆ ನಗರದ ಜೈ ಭೀಮ್ ವೃತ್ತದಲ್ಲಿ ಭಗವಾನ್ ಗೌತಮ ಬುದ್ಧ ಜಯಂತಿಯನ್ನು ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ಆಚರಿಸಿದರು.