ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯದಲ್ಲಿ ಗವಿ ಶಾಂತಲಿಂಗೇಶ್ವರ ಮಹಾರಥೋತ್ಸವ ಗುರುವಾರ ಅಪಾರ ಜನಸ್ತೋಮದಲ್ಲಿ ಜಯಘೋಷಣೆಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯದಲ್ಲಿ ಗವಿ ಶಾಂತಲಿಂಗೇಶ್ವರ ಮಹಾರಥೋತ್ಸವ ಗುರುವಾರ ಅಪಾರ ಜನಸ್ತೋಮದಲ್ಲಿ ಜಯಘೋಷಣೆಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.ಕಾರ್ಯಕ್ರಮಕ್ಕೆ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಶಿವಮೊಗ್ಗ, ಆಂದ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವಕ್ಕೆ ಹಣ್ಣು ಎಸೆದು, ಕಾಯಿ ಹೊಡೆದು ಸಮರ್ಪಣೆ ಮಾಡಿದರು. ಗವಿ ಶಾಂತಲಿಂಗೇಶ್ವರ ಸ್ವಾಮಿಯ ಭಾವುಟ ಗುಂಡುಮುಣಗು ತಿಪ್ಪೇಸ್ವಾಮಿ ಎಂಬವರು 1.50 ಲಕ್ಷ ರು.ಗೆ ಸ್ವಾಮಿಯ ಬಾವುಟ ಹರಾಜು ಮಾಡುತ್ತಿದ್ದಂತೆ ಭಕ್ತರ ಜಯಘೋಷಣೆಗಳೊಂದಿಗೆ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಕಣ್ವಕುಪ್ಪೆ ಗವಿಮಠದಲ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮುಂದಿನ ವರ್ಷ ಅತಿವೃಷ್ಟಿ, ಅನಾವೃಷ್ಟಿ ಆಗುವ ಸಾಧ್ಯತೆ ಇದ್ದು, ಕೆಲವು ಕಡೆ ಉತ್ತಮ ಮಳೆ, ಕೆಲವು ಕಡೆ ಕಡಿಮೆಮಳೆಯಾಗುವ ಸಾಧ್ಯತೆ ಇದ್ದರೂ ರೈತರಿಗೆ ಏನು ತೊಂದರೆಯಾಗುವುದಿಲ್ಲ ಎಂದು ಈ ವರ್ಷವೂ ಭವಿಷ್ಯ ನುಡಿದರು.ಮನೆಯ ಪರಿವಾರದಲ್ಲಿ ಯಾರು ಏನು ಹೇಳಿದ ತಕ್ಷಣ ಒಪ್ಪಿದರೆ ಕೆಡಿಸಲು ಕೆಲವು ಸಂಚು ಮೂಡಿಸುವ ಸಾಧ್ಯತೆ ಇದ್ದು , ಒಳ್ಳೆಯದನ್ನು ಅಳವಡಿಸಿಕೊಳ್ಳಿರಿ. ಸಾರ್ಥಕ ಬದುಕನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಉತ್ತರಾಯಣ ಪುಣ್ಯ ಕಾಲದ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಿ. ಧರ್ಮವನ್ನು ಬಿಡಬಾರದು. ದುಚ್ಚಟಗಳಿಗೆ ಒಳಗಾದವರು ಇಂದಿಗೆ ದುಶ್ಚಟಗಳಿಂದ ಮಕ್ತರಾಗಿ ಶುದ್ದ ಮನುಷುರಾಗಿ ಬಾಳಬೇಕು ಎಂದರು.
ಕಣ್ವಕುಪ್ಪೆ ಗವಿ ಮಠಕ್ಕೆ ಆಗಮಿಸಿದ ಭಕ್ತರಿಗೆ ಶ್ರೀಮಠದ ಆವರಣದಲ್ಲಿ ಅನ್ನ ಸಂತರ್ಪಣೆಯನ್ನು ಭಕ್ತರೇ ನೆರವೇರಿಸಿದ್ದು ವಿಶೇಷವಾಗಿತ್ತು. ದಾವಣಗೆರೆಯ ಭಕ್ತರೊಬ್ಬರು ಬೆಳಗ್ಗೆ ಇಡ್ಲಿ, ವಡೆ, ವಿವಿಧ ಜಿಲ್ಲೆ, ಜಗಳೂರು ತಾಲ್ಲೂಕಿನ ಅನೇಕ ಭಕ್ತರು ವಿವಿಧ ಭಗೆಯ ರೊಟ್ಟಿ ,ಪುಡಿ ಚಟ್ನಿ ಕೊಟ್ಟಿದ್ದು, ಮಧ್ಯಾಹ್ನ ಗೋಧಿ ಹುಗ್ಗಿ, ರೊಟ್ಟಿ ಪುಡಿ ಚಟ್ನಿ, ಅನ್ನ ಸಾಂಬಾರ್, ಕೊಟ್ಟೂರಿನ ಭಕ್ತರಿಂದ ಮೆಣಸಿನಕಾಯಿ, ಕೂಡ್ಲಿಗಿ ಭಕ್ತರಿಂದ ಅನ್ನದಾಸೋಹವನ್ನು ನೀಡಿದ್ದು , ಮಠಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಪ್ರಸಾಧ ಮಾಡಿದ್ದು ಕಂಡು ಬಂದಿತು.ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಆರ್.ಎಸ್.ಎಸ್.ಪ್ರಮುಖ್ ಮುನಿಯಪ್ಪ, ಕಾಂಗ್ರೆಸ್ ಮುಖಂಡರು ಮಾಜಿ ಜಿ.ಪಂ.ಸದಸ್ಯ ಕೆ.ಪಿ.ಪಾಲಯ್ಯ ಕೇದಾರನಾಥದ ಪ್ರಧಾನ ಅರ್ಚಕರಾದ ಗಂಗಾಧರ ಲಿಂಗರು ಮುಖಂಡರು ಇದ್ದರು.