ಸಾರಾಂಶ
ಗವಿಶ್ರೀ ಕ್ರೀಡಾ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿದ ಸಚಿವಕೊಪ್ಪಳ:
ಜಾತ್ರಾ ಮಹೋತ್ಸವ ಹಿನ್ನೆಲೆ ಗವಿಸಿದ್ಧೇಶ್ವರ ಸ್ವಾಮೀಜಿ ಕ್ರೀಡೆಗಳ ಆಯೋಜನೆ ಮಾಡುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಿ ಆದ್ಯತೆ ಕೊಟ್ಟಿರುವುದು ಶ್ಲಾಘನೀಯ ಎಂದು ಸಚಿವ ಸಂತೋಷ ಲಾಡ್ ಹೇಳಿದರು.ನಗರದ ತಾಲೂಕು ಕ್ರೀಡಾಂಗಣದಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಗವಿಶ್ರೀ ಕ್ರೀಡಾ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗವಿಸಿದ್ಧೇಶ್ವರ ಸ್ವಾಮೀಜಿ ಬುದ್ಧ, ಬಸವೇಶ್ವರ ವಿಚಾರಧಾರೆಯ ಶ್ರೀಗಳಾಗಿದ್ದಾರೆ. ಬಡ ಮಕ್ಕಳಿಗಾಗಿ ನಿತ್ಯ ನಿರಂತರ ಶ್ರಮಿಸುತ್ತಿದ್ದಾರೆ. ಅವರ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಗವಿಶ್ರೀ ಕ್ರೀಡಾಕೂಟದಲ್ಲಿ ಹಲವು ಕ್ರೀಡಾಪಟುಗಳಿಗೆ ಅವಕಾಶ ಕೊಡುವ ಮೂಲಕ ಪ್ರತಿಭೆ ಬೆಳಗುವಂತೆ ಮಾಡಿದ್ದಾರೆ. ಇದೊಂದು ಉತ್ತಮ ವೇದಿಕೆಯಾಗಿದೆ. ನಮ್ಮ ಸರ್ಕಾರ ಕೂಡ ಕ್ರೀಡೆಗೆ ಸದಾ ಸಹಕಾರ ಕೊಡುತ್ತಿದೆ ಎಂದರು.18 ಕ್ರೀಡೆಗಳನ್ನು ಆಯೋಜನೆ ಮಾಡಿದ್ದು, ಅದರಲ್ಲೂ ಗ್ರಾಮೀಣ ಕ್ರೀಡೆಗೆ ಒತ್ತು ಕೊಡಲಾಗಿದೆ. ಪ್ರತಿಭೆಗಳಿಗೆ ಅವಕಾಶ ಕೊಟ್ಟಿರುವುದು ಉತ್ತಮ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಆಹ್ವಾನ ಮಾಡಿ ಅವಕಾಶ ಕೊಟ್ಟು ಪ್ರತಿಭೆ ಬೆಳೆಸಿ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕ್ರೀಡೆಗೆ ಮೆರುಗು ತರಬೇಕು ಎಂಬ ಉದ್ದೇಶದಿಂದ ಗವಿಶ್ರೀ ಕ್ರೀಡಾ ಉತ್ಸವ ಆಯೋಜನೆ ಮಾಡಿತ್ತು. ಈ ಕ್ರೀಡೆಯಲ್ಲಿ 4 ಸಾವಿರ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಕ್ರೀಡೆ ತುಂಬಾ ಉತ್ಸಾಹ ತರಿಸಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ 18 ಕ್ರೀಡೆ ಆಯೋಜನೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಹೊನಲು ಬೆಳಕಿನ ಕ್ರೀಡೆಗಳು ಇಲ್ಲಿ ನಡೆದಿದ್ದು, ಕ್ರೀಡೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಿಕೆ ಮುಖ್ಯ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಸದೃಢವಾಗಲಿದೆ ಎಂದರು.
ಕೊಪ್ಪಳ ಕ್ಷೇತ್ರವು ತುಂಬಾ ವೇಗವಾಗಿ ಬೆಳೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಮೆಡಿಕಲ್ ಕಾಲೇಜು, 450 ಬೆಡ್ ಆಸ್ಪತ್ರೆ ಲೋಕಾರ್ಪಣೆಗೂ ಸಿದ್ಧವಾಗಿದೆ. ಕೊಪ್ಪಳ ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ಶಿಕ್ಷಣಕ್ಕೆ ಒತ್ತು ಕೊಟ್ಟಿದೆ ಎಂದರು.ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಾಗರಾಜ, ಕವಿತಾ ರಡ್ಡಿ, ಕಾಟನ್ ಪಾಷಾ, ಮತ್ತುರಾಜ ಕುಷ್ಟಗಿ, ಚನ್ನಪ್ಪ ಕೊಟಿಹಾಳ, ವಿಠ್ಠಲ ಚೌಗಲಾ, ಎ. ಬಸವರಾಜ, ಪ್ರಸನ್ನ ಗಡಾದ, ಅಮರೇಶ ಉಪಲಾಪುರ, ಪಂಪಣ್ಣ ಪೂಜಾರ, ರಾಜಶೇಖರ ಆಡೂರು, ವಿಠ್ಠಲ ಜಾಬಗೌಡರ ಇತರರಿದ್ದರು.ಗವಿಶ್ರೀ ಕ್ರೀಡಾ ಪ್ರಶಸ್ತಿ ವಿಜೇತರು:
ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಪ್ಪಳ ಪ್ರಥಮ, ಬಾಗಲಕೋಟೆ ದ್ವಿತೀಯ, ದಕ್ಷಿಣ ಕನ್ನಡದ ತಂಡವು ತೃತೀಯ ಸ್ಥಾನ ಪಡೆದಿದೆ. ಛದ್ಮವೇಷ ಪಂದ್ಯಾಟದಲ್ಲಿ ಭಾರ್ಗವಿ ಪ್ರಥಮ, ಸೃಷ್ಟಿ ದ್ವಿತೀಯ, ಸಹನಾ ತೃತೀಯ ಸ್ಥಾನ ಪಡೆದಿದ್ದಾರೆ. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಶಶಿಕಲಾ ತಂಡ ಪ್ರಥಮ, ರುಕ್ಮಿಣಿ ತಂಡ ದ್ವಿತೀಯ, ಅಕ್ಕಮಹಾದೇವಿ ತಂಡ ತೃತೀಯ ಸ್ಥಾನ ಪಡೆದಿದೆ. ಪುರುಷರ ತಂಡದಲ್ಲಿ ಹೊಸಕೇರಾ ತಂಡ ಪ್ರಥಮ, ಚಳ್ಳಾರಿ ತಂಡ ದ್ವಿತೀಯ, ಕುಕನೂರು ತಂಡವು ತೃತೀಯ ಸ್ಥಾನ ಪಡೆದಿದೆ. ಎತ್ತಿನ ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಬಸವರಾಜ ಶಿಡ್ಲಬಾವಿ ಪ್ರಥಮ, ಗೋಪಾಲಕೃಷ್ಣ ಕಿಡದೂರು ದ್ವಿತೀಯ, ವಿಜಯಕುಮಾರ ಚಳ್ಳಾರಿ ತೃತೀಯ ಸ್ಥಾನ ಪಡೆದಿದ್ದಾರೆ.ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ರಮೇಶ ರಾಯಚೂರು ಪ್ರಥಮ, ಹನುಮಂತ ತುರ್ವಿಹಾಳ ದ್ವಿತೀಯ, ವೆಂಕೋಬ ವೀರಾಪುರ ತೃತೀಯ ಸ್ಥಾನ ಪಡೆದಿದ್ದಾರೆ. ಮ್ಯಾರಥಾನ್ ಓಟದಲ್ಲಿ ಬಸಲಿಂಗಮ್ಮ ಪ್ರಥಮ, ಪ್ರಿಯಾ ಪಾಟೀಲ್ ದ್ವಿತೀಯ, ನೂರುಜಹಾನ್ ತೃತೀಯ ಸ್ಥಾನ ಪಡೆದಿದ್ದಾರೆ. ಮಹಿಳೆಯರ ರಂಗೋಲಿ ಸ್ಪರ್ಧೆಯಲ್ಲಿ ಜಯಶ್ರೀ ಮೇಘರಾಜ ಪ್ರಥಮ, ಸುಜಾತಾ ದ್ವಿತೀಯ, ರೇಣುಕಾ ಕೊಪ್ಪಳ ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಉಡುಪಿಯ ಚರಣರಾಜ್ ಚಾಂಪಿಯನ್ ಆದರೆ, ಮೊದಲ ರನ್ನರ್ ಅಪ್ ರಾಮ ಬೆಂಗಳೂರು, ಪ್ರಶಾಂತ ಬೆಳಗಾವಿ ದ್ವಿತೀಯ ಸ್ಥಾನ ಪಡೆದಿದ್ದಾರೆ.