ಒಳಮೀಸಲಾತಿ ಜಾರಿಗೆ ತರಲು ಗವಿಸಿದ್ದಪ್ಪ ದ್ಯಾಮಣ್ಣನವರ ಆಗ್ರಹ

| Published : Aug 18 2025, 12:00 AM IST

ಸಾರಾಂಶ

ಸಿದ್ದರಾಮಯ್ಯನವರು ಕಾಲಹರಣದ ನೀತಿಯನ್ನು ಪಕ್ಕಕ್ಕೆ ಇಟ್ಟು ತಕ್ಷಣ ಒಳ ಮೀಸಲಾತಿ ಜಾರಿ ಮಾಡಬೇಕು. ಆ. 19ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳಮೀಸಲಾತಿ ಘೋಷಿಸಬೇಕು ಎಂದು ಮುಖಂಡ ಚಂದ್ರಪ್ಪ ಕಲಗೂದುರಿ ಒತ್ತಾಯಿಸಿದರು.

ಹಾವೇರಿ: ನ್ಯಾ. ನಾಗಮೋಹನ್ ದಾಸ್ ವರದಿ ಸಲ್ಲಿಸಿದ ತರುವಾಯ ಕರೆದಿರುವ ವಿಶೇಷ ಸಚಿವ ಸಂಪುಟ ಸಭೆ ಆ. 19ಕ್ಕೆ ಜರುಗಲಿದ್ದು, ಕಡ್ಡಾಯವಾಗಿ ಒಳಮೀಸಲಾತಿ ಜಾರಿಗಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಸರ್ಕಾರವನ್ನು ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಜಿಲ್ಲಾ ಮಟ್ಟದ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮಾತನಾಡಿದರು.ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸುವುದು ಮಾದಿಗ ಸಮಾಜದ ಬೇಡಿಕೆಯಾಗಿರಲಿಲ್ಲ. ಆಯೋಗದ ಕಾರ್ಯಕಲಾಪದಲ್ಲಿ ಒಂದೇ ಗುಂಪಿನ ಅಧಿಕಾರಿಗಳೇ ಕಾರ್ಯನಿರ್ವಹಿಸಿದಾರೆ. ಈಗ ಅದೇ ಜನ ವರದಿಯ ಬಗ್ಗೆ ತಕರಾರು ತೆಗೆದು ಸಂಪುಟ ಉಪಸಮಿತಿ ರಚಿಸುವ ಹುನ್ನಾರದ ಹಿಂದೆ ಸಕ್ರಿಯರಾಗಿದ್ದಾರೆ. ಇದು ಒಳಮೀಸಲಾತಿ ಕುರಿತಾದ ಕಾಂಗ್ರೆಸ್ಸಿನ ವಿಳಂಬ ನೀತಿ, ನಿಧಾನ ದ್ರೋಹದ ಮುಂದುವರಿದ ಭಾಗವಾಗಿದೆ ಎಂದರು.

ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಲ್ಲಿ ಆದಿಕರ್ನಾಟಕ(ಜನಸಂಖ್ಯೆ: 1,47,199) ಆದಿದ್ರಾವಿಡ(ಜನಸಂಖ್ಯೆ: 3,20,641) ಆದಿ ಆಂಧ್ರ(ಜನಸಂಖ್ಯೆ: 7,114) ಇದನ್ನು ಇ ಪ್ರವರ್ಗದಲ್ಲಿ ಗುರುತಿಸಲಾಗಿದೆ. ಈಗ ಅ ಗುಂಪಿಗೆ ಇಡಿಯಾಗಿ ಇ ಗುಂಪಿಗೆ ಸೇರಿಸುವ ಹುನ್ನಾರ ನಡೆದಿದೆ. ಇ ಗುಂಪಿನಲ್ಲಿ ಮೂಲ ಜಾತಿ ಹೇಳದೆ ಆದಿದ್ರಾವಿಡ ಎಂದು ಗುರುತಿಸಿಕೊಂಡವರು 3,20,641 ಜನ ಇದ್ದಾರೆ. ಇವರಲ್ಲಿ ಬಹುತೇಕ ಜನ ಪೌರಕಾರ್ಮಿಕ ವೃತ್ತಿಯಲ್ಲಿ ಇದ್ದು, ಮಾದಿಗ ಸಂಬಂಧಿತ ಜಾತಿಗಳವರಾಗಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂಬುದು ಆಗ್ರಹಿಸಿದರು.ರಾಜ್ಯ ಸಂಘಟನಾ ಸಂಚಾಲಕ ಉಡಚಪ್ಪ ಮಾಳಗಿ ಮಾತನಾಡಿ, ಆ. 1ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ವರ್ಷ ಕಳೆಯಿತು. ಒಳಮೀಸಲಾತಿ ವಿಷಯದಲ್ಲಿ ಒಂದು ಹೆಜ್ಜೆಯೂ ಮುಂದೆ ಇಟ್ಟಿಲ್ಲ. ಯಾರದೋ ಅಣತಿಗೆ ತಕ್ಕಂತೆ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳುತ್ತಿರುವುದನ್ನು ನೋಡಿದರೆ ನ್ಯಾ. ನಾಗಮೋಹನ್ ದಾಸ್ ವರದಿಗೂ, ನ್ಯಾ. ಕಾಂತರಾಜ್ ವರದಿಗೆ ಆದ ಗತಿಯೇ ಆಗುತ್ತದೆಯೇನೊ ಎಂಬ ಆತಂಕ ಉಂಟಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಸಚಿವ ಸಂಪುಟದಲ್ಲಿಯೇ ಒಳಮೀಸಲಾತಿಯ ನಿರ್ಣಯ ಘೋಷಿಸುವುದಾಗಿ ಹೇಳಿದ್ದರು. 2 ವರ್ಷ 3 ತಿಂಗಳಾಯಿತು. ಈಗ ಪರಿಸ್ಥಿತಿ ಎಷ್ಟು ಬಿಗಾಡಿಯಿಸಿದೆ ಎಂದರೆ ಸಿದ್ದರಾಮಯ್ಯನವರಿಗೆ ಸಚಿವ ಸಂಪುಟ ನಡೆಸಲೂ ಸಾಧ್ಯವಾಗುತ್ತಿಲ್ಲ. ಈಗ ನಾಗಮೋಹನ್ ದಾಸ್ ವರದಿಯನ್ನು ತಮ್ಮ ಮೂಗಿನ ನೇರಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಮಾತಿನಂತೆ ಸಿದ್ದರಾಮಯ್ಯನವರು ಶೀಘ್ರವಾಗಿ ಒಳಮೀಸಲಾತಿ ಜಾರಿಗೆ ಮಾಡಲು ಬದ್ಧರಾಗಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ- ಪಂಗಡ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಮುಖಂಡರಾದ ಮಹೇಶಪ್ಪ ಶಾಕಾರ, ಹನುಮಂತಪ್ಪ ಹೌಂಸಿ, ರೆಸಿದಸಾಬ ಚಾದುಸಾಬ ಘಾಟಿನ್, ಕಿರಣಕುಮಾರ ದಾನಮ್ಮನವರ, ಬಸವರಾಜ ಮಧುಕುಮಾರ ಹರಿಜನ ಸೇರಿದಂತೆ ಇತರರು ಇದ್ದರು. 19ಕ್ಕೆ ಅಂತಿಮ ನಿರ್ಧಾರ ಪ್ರಕಟಿಸಿಒಳಮೀಸಲಾತಿ ಜಾರಿ ಆಗುವ ವರೆಗೆ ಉದ್ಯೋಗ ಅವಕಾಶಗಳು ಬಂದ್ ಆಗಿರುವುದರಿಂದ ಎಸ್ಸಿ ಅಲ್ಲದ ಸಮಾಜಗಳೂ ಸಿದ್ದರಾಮಯ್ಯನ ವಿಳಂಬ ಧೊರಣೆಯ ಬಗ್ಗೆ ರೋಸಿ ಹೋಗಿದ್ದಾರೆ. ಉದ್ಯೋಗ ಅವಕಾಶಗಳನ್ನು ನಿಲ್ಲಿಸಿ, ಎಲ್ಲ ಮೂರು ಗುಂಪಿನ ದಲಿತರನ್ನು ಬೀದಿಗೆ ಬರುವಂತೆ ಮಾಡಿರುವುದು ಸಿದ್ದರಾಮಯ್ಯನವರ ಸಾಧನೆಯಾಗಿದೆ. ಸಿದ್ದರಾಮಯ್ಯನವರು ಕಾಲಹರಣದ ನೀತಿಯನ್ನು ಪಕ್ಕಕ್ಕೆ ಇಟ್ಟು ತಕ್ಷಣ ಒಳ ಮೀಸಲಾತಿ ಜಾರಿ ಮಾಡಬೇಕು. ಆ. 19ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳಮೀಸಲಾತಿ ಘೋಷಿಸಬೇಕು ಎಂದು ಮುಖಂಡ ಚಂದ್ರಪ್ಪ ಕಲಗೂದುರಿ ಒತ್ತಾಯಿಸಿದರು.