ಸಾರಾಂಶ
ಕೊಪ್ಪಳ: ಲಕ್ಷ ಲಕ್ಷ ಭಕ್ತರ ಜೈಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ, ಉಪದೇಶಾಮೃತಗಳ ಮೂಲಕ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಸೋಮವಾರ ವೈಭವದ ತೆರೆ ಎಳೆಯಲಾಯಿತು.ಮೂರು ದಿನಗಳ ಕಾಲ ಕೈಲಾಸಮಂಪಟದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರಿಂದ ಸಂಗೀತ ಸುಧೆ, ದೇಶದ ಮೂಲೆ ಮೂಲೆಯಿಂದ ಬಂದಿದ್ದ ಸಾಧಕರ ಅನಿಸಿಕೆ, ಹರಗುರು ಚರಮೂರ್ತಿಗಳ ಉಪದೇಶಾಮೃತಗಳು ಅನುರಣಿಸಿದವು.
ಪ್ರತಿ ವರ್ಷಕ್ಕಿಂತ ಅಧಿಕ ಭಕ್ತ ಗಣ ಈ ಬಾರಿ ಸೇರಿತ್ತು. ರಥೋತ್ಸದವ ದಿನ ಸುಮಾರು 8 ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದು ದಾಖಲೆಯಾದರೆ ಜಾತ್ರೆಯ ಮರುದಿನವೂ ಸಹ ಸುಮಾರು 2.5 ಲಕ್ಷ ಭಕ್ತರು ಸೇರಿದ್ದರು. ಮೂರನೇ ದಿನವೂ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಸಂಭ್ರಮಿಸಿದರು. ಗದ್ದುಗೆ ದರ್ಶನ ಪಡೆದರು. ಪ್ರಸಕ್ತ ವರ್ಷ ಮೂರೇ ದಿನಗಳಲ್ಲಿ ಸುಮಾರು ಐದು ಲಕ್ಷ ಭಕ್ತರು ಪ್ರಸಾದ ಸೇವೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.ಮೂರು ದಿನಗಳಲ್ಲಿ 300 ಕ್ವಿಂಟಲ್ ಅಕ್ಕಿಯ ಅನ್ನ ಮಾಡಲಾಗಿದೆ. ಇದರ ಆಧಾರದಲ್ಲಿ ಸುಮಾರು 5 ಲಕ್ಷ ಭಕ್ತರು ಪ್ರಸಾದ ಸೇವಿಸಿದ್ದಾರೆ ಎಂದು ದಾಸೋಹದಲ್ಲಿ ಕಾರ್ಯನಿರ್ವಹಿಸುವರು ಅಭಿಪ್ರಾಯಪಡುತ್ತಾರೆ.ಮೊದಲ ದಿನ 115 ಕ್ವಿಂಟಲ್ ಅಕ್ಕಿ, 2ನೇ ದಿನ 132 ಕ್ವಿಂಟಲ್ ಅಕ್ಕಿ, ಮೂರನೇ ದಿನ 50 ಕ್ವಿಂಟಲ್ ಅಕ್ಕಿಯ ಅನ್ನ ಮಾಡಲಾಗಿದೆ. ಉಳಿದಂತೆ ಸುಮಾರು 7 ಲಕ್ಷ ಶೇಂಗಾ ಹೋಳಿಗೆ, 6-7 ಲಕ್ಷ ರೊಟ್ಟಿ, 1 ಲಕ್ಷ ಸಿಹಿ ಕರ್ಚಿಕಾಯಿ, ಮೈಸೂರು ಪಾಕ್, ಕರದಂಟು, ಮಾದಲಿ ಸೇರಿ ಸುಮಾರು 200 ಕ್ವಿಂಟಲ್ ಸಿಹಿ ಪದಾರ್ಥ ವೆಚ್ಚವಾಗಿದೆ. ಸುಮಾರು 20 ಕೊಪ್ಪರಿಕೆ ಸಾಂಬಾರು ಬಳಕೆಯಾಗಿದೆ.ಗಮನ ಸೆಳೆದವು:ಕೈಲಾಸ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಾರಿ ಜೀ ವಾಹಿನಿಯ ಡಿಕೆಡಿ ತಂಡದ ನೃತ್ಯ ವೈಭವ ನೆರೆದಿದ್ದವರ ಜನಮನ ಸೂರೆಗೊಂಡಿತು. ಜನರು ತುದಿಗಾಲ ಮೇಲೆ ನಿಂತು ಶಿವತಾಂಡವ ವೈಭವ ಕಣ್ತುಂಬಿಕೊಂಡು ಕಲಾವಿದರಿಗೆ ಶಹಬ್ಬಾಸ್‌ಗಿರಿ ನೀಡಿದರು.ಅಸ್ಸಾಂ ರಾಜ್ಯದ ಸಂಪತ್ ಕುಮಾರ್ ಅವರ ರೋಲಾ ಎ ಬೋಲಾ ಬ್ಯಾಲೆನ್ಸ್ ಆಟ ನಿಬ್ಬೆರಗಾಗುವಂತೆ ಮಾಡಿತು. 15 ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ನೋಡಿದರು. ನೆರದಿದ್ದ ಪ್ರೇಕ್ಷಕರು ವಾಹ್ ವಾಹ್ ಎಂದರು. ಮೂರನೇ ದಿನ ಪ್ರಕಾಶ ಹೆಮ್ಮಾಡಿ ಅವರ ಜಾದು ಮೋಡಿ ಮಾಡಿತು.ಈ ವರ್ಷ ಮಹಾದಾಸೋಹದಲ್ಲಿ ಎಲ್ಲವೂ ದಾಖಲೆಯೇ ಆಗಿದೆ. ಮೂರು ದಿನಗಳಲ್ಲಿ ಇಷ್ಟೊಂದು ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದು ಇದೇ ಮೊದಲು. ಮೂರೇ ದಿನಗಳಲ್ಲಿ ಮುನ್ನೂರು ಕ್ವಿಂಟಲ್‌ಗೂ ಅಧಿಕ ಅಕ್ಕಿಯ ಅನ್ನ ಮಾಡಿ ಪ್ರಸಾದ ನೀಡಲಾಗಿದೆ. ಇದೊಂದೇ ಲೆಕ್ಕ ಸಿಕ್ಕಿರುವುದು ಎನ್ನುತ್ತಾರೆ ದಾಸೋಹ ಉಸ್ತುವಾರಿ ರಾಮನಗೌಡ.