ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಕಾಂಗ್ರೆಸ್ ನಾಯಕರಿಗೆ ಮೆಚ್ಚಿಸಲು ಔರಾದ್ ಶಾಸಕ ಪ್ರಭು ಚವ್ಹಾಣ್ ಹೀಗೆ ಮಾಡುತ್ತಿರಬಹುದು. ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗಿನ ಒಳ ಒಪ್ಪಂದ ಇವತ್ತು ಸ್ಪಷ್ಟವಾಗಿದೆ. ಚವ್ಹಾಣ್ ಮಹಾ ಪಾಪ ಮಾಡಿದ್ದಾರೆ ಅವರಿಗೆ ತಕ್ಕ ಉತ್ತರ ಕೊಡುವದಾಗಿ ವಿಜಯೇಂದ್ರ ಹೇಳಿದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.ಖೂಬಾಗೆ ಟಿಕೆಟ್ ನೀಡದಂತೆ ಬೀದರ್‌ಗೆ ಆಗಮಿಸಿದ್ದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಶಾಸಕ ಪ್ರಭು ಚವ್ಹಾಣ್ ಸಾಷ್ಟಾಂಗ ನಮಸ್ಕಾರ ಮಾಡಿ ಮನವಿಸಿದ್ದ ವಿಚಾರವಾಗಿ ಅವರು ನಗರದಲ್ಲಿ ಕನ್ನಡಪ್ರಭ ಸಹೋದರ ಸಂಸ್ಥೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದರು.
ನಮ್ಮದು ಶಿಸ್ತು ಬದ್ಧ ಇರುವ ಪಕ್ಷ, ಈಗಾಗಲೇ ಟಿಕೆಟ್ ನೀಡದಂತೆ ಸಾವಿರ ಸಾರಿ ಹೇಳಿದ್ದಾರೆ. ಈ ಹಿಂದಿನಿಂದಲೂ ಬಿಜೆಪಿ ಹೈಕಮಾಂಡ್ ಮೇಲೆ ಟಿಕೆಟ್ ನೀಡದಂತೆ ವಿರೋಧಿಸಿಕೊಂಡು ಬರುತ್ತಿದ್ದಾರೆ. ಇಷ್ಟಾದರೂ ಸಾವಿರಾರು ಕಾರ್ಯಕರ್ತರ ಮುಂದೆ ಹೇಳೋದು ನೋಡಿದರೆ ಅನುಮಾನ ಬರುತ್ತಿದೆ ಎಂದರು.ಚವ್ಹಾಣ್ ಸೋಲಿಸಲು ನಾನು ಯಾವತ್ತೂ ಪ್ರಯತ್ನ ಮಾಡಿಲ್ಲ. ಚವ್ಹಾಣ್ ಸೋಲಿಸಿ ಎಂದು ಎಲ್ಲಿಯಾದರೂ ಹೇಳಿರುವ ಬಗ್ಗೆ ಒಂದೇ ಒಂದು ಸಾಕ್ಷಿ ಕೊಡಲಿ. ಕಾರ್ಯರ್ತರಿಗೆ ಅನ್ಯಾಯ ಆದರೆ ನನ್ನ ಜೊತೆಗೆ ಕಾರ್ಯಕರ್ತರು ಯಾಕೆ ಇರುತ್ತಿದ್ದರು. ಚವ್ಹಾಣ್ ಆರೋಪದಲ್ಲಿ ಸಾಸಿವೆ ಅಷ್ಟಾದರೂ ಸತ್ಯ ಇದೆಯಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸಚಿವ, ಶಾಸಕರ ಜೊತೆ ಹೋಟೆಲ್ ಭೇಟಿ ವರಿಷ್ಠರಿಗೆ ವರದಿ:ಯಾರು ಭ್ರಷ್ಟರು, ಯಾರು ಪ್ರಾಮಾಣಿಕರು ಎಂದು ಎಲ್ಲರಿಗೂ ಗೊತ್ತಿದೆ. ಕಳೆದ ಬಾರಿ ಉಸ್ತುವಾರಿ ಸಚಿವರಾಗಿದ್ದರೂ ಒಂದೇ ಒಂದು ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ವಿರುದ್ಧ ಒಂದೇ ಒಂದು ಹೋರಾಟ ಮಾಡಿಲ್ಲ. ಕಾಂಗ್ರೆಸ್ ಸಚಿವರು, ಶಾಸಕರ ಜೊತೆಯಲ್ಲಿ ಯಾವ ಯಾವ ಹೋಟೆಲ್, ಎಲ್ಲೆಲ್ಲಿ ಭೇಟಿಯಾಗಿ ಮಾತಾಡಿದ್ದೀರಿ ಎಂಬುವದನ್ನು ವರಿಷ್ಠರಿಗೆ ಹೇಳುತ್ತೇನೆ ಎಂದು ಭಗವಂತ ಖೂಬಾ ಹೇಳಿದರು.