ಹನುಮ ಧ್ವಜ ವಿವಾದ: ಹಾಸನದಲ್ಲಿ ಬಿಜೆಪಿ ಪ್ರತಿಭಟನೆ

| Published : Jan 30 2024, 02:01 AM IST

ಸಾರಾಂಶ

ಮಂಡ್ಯದ ಕೆರಗೋಡಿ ಗ್ರಾಮದಲ್ಲಿ ಹನುಮ ಧ್ವಜವನ್ನು ಇಳಿಸಿದ್ದನ್ನು ಖಂಡಿಸಿ ಇಳಿಸಿರುವ ಧ್ವಜವನ್ನು ಮತ್ತೆ ಸ್ಥಾಪಿಸಲು ಆಗ್ರಹಿಸಿ ಸೋಮವಾರ ಬಿಜೆಪಿ ಪಕ್ಷದಿಂದ ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮಂಡ್ಯ ಜಿಲ್ಲೆಯ ಕೆರಗೋಡಿ ಗ್ರಾಮದಲ್ಲಿ ಘಟನೆ । ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ । ಮನವಿ ಸಲ್ಲಿಕೆ । ಧ್ವಜ ಮರು ಸ್ಥಾಪಿಸಲು ಒತ್ತಾಯ

ಕನ್ನಡಪ್ರಭ ವಾರ್ತೆ ಹಾಸನ

ಮಂಡ್ಯದ ಕೆರಗೋಡಿ ಗ್ರಾಮದಲ್ಲಿ ಹನುಮ ಧ್ವಜವನ್ನು ಇಳಿಸಿದ್ದನ್ನು ಖಂಡಿಸಿ ಇಳಿಸಿರುವ ಧ್ವಜವನ್ನು ಮತ್ತೆ ಸ್ಥಾಪಿಸಲು ಆಗ್ರಹಿಸಿ ಸೋಮವಾರ ನಗರದಲ್ಲಿ ಬಿಜೆಪಿ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ‘ಮಂಡ್ಯ ಜಿಲ್ಲೆಯ ಕೆರಗೋಡಿ ಗ್ರಾಮದಲ್ಲಿ ಧ್ವಜಸ್ತಂಬ ಸ್ಥಾಪಿಸಿ ಹನುಮಾನ್ ಧ್ವಜ ಹಾರಿಸಲಾಗಿತ್ತು. ಗಣರಾಜ್ಯೋತ್ಸವದ ದಿನ ಕೆಳಗಿಳಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗಿತ್ತು. ಮತ್ತೆ ಹನುಮಾನ್ ಧ್ವಜ ಆರೋಹಣ ಮಾಡಲಾಗಿತ್ತು. ಕೆಲವರು ಒಂದು ಧರ್ಮಕ್ಕೆ ಸೀಮಿತವಾದ ಧ್ವಜ ಆರೋಹಣ ಮಾಡುವುದು ಸರಿಯಲ್ಲವೆಂದು ಆಕ್ಷೇಪಿಸಿ ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು’ ಎಂದು ಹೇಳಿದರು.

‘ಧ್ವಜ ಕೆಳಗಿಳಿಸಿದ್ದನ್ನು ವಿರೋಧಿಸಿ ಗ್ರಾಮದ ವ್ಯಾಪಾರಸ್ಥರು ಶನಿವಾರ ಅಂಗಡಿಗಳನ್ನು ಮುಚ್ಚಿ ಪಕ್ಷಾತೀತವಾಗಿ ಮಹಿಳೆಯರು, ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಹನುಮ ಧ್ವಜವನ್ನು ಕಾಂಗ್ರೆಸ್‌ನವರು ಧ್ವಂಸ ಮಾಡಿದ್ದಾರೆ’ ಎಂದು ದೂರಿದರು.

ಹನುಮಾನ್ ಧ್ವಜದ ವಿಷಯದಲ್ಲಿ ಪೊಲೀಸರು ಸರ್ಕಾರದ ವರ್ತನೆ ಆಕ್ಷಮ್ಯ. ಆನಾಗರಿಕ ಕಾಂಗ್ರೆಸ್‌ನವರ ಕಣಕಣದಲ್ಲೂ ಹಿಂದೂ ದ್ವೇಷವೇ ತುಂಬಿದೆ. ಈ ಸರ್ಕಾರ ಪೊಲೀಸರಿಂದ ಗೂಂಡಾಗಿರಿ ಮಾಡಿಸುತ್ತಿದೆ. ಹನುಮ ಧ್ವಜವನ್ನು ಏಕಾಏಕಿ ಬಲತ್ಕಾರದಿಂದ ತೆಗೆದಿದ್ದಾರೆ. ರಾಮಮಂದಿರದ ಮುಂದಿನ ಹನುಮ ಧ್ವಜ ತೆಗೆಯಲು ಕಾಂಗ್ರೆಸ್ ಸರ್ಕಾರಕ್ಕೆ ಯಾವ ಹಕ್ಕಿದೆ, ಅವರು ಯಾರು? ಗ್ರಾಮಸ್ಥರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದರು.

ಯಾರ ಆಕ್ಷೇಪ ಇಲ್ಲದಿದ್ದರೂ ಕೂಡ ಹನುಮಧ್ವಜ ಇಳಿಸಿದ್ದೇಕೆ? ಕರ್ನಾಟಕದಲ್ಲಿರೋದು ಪ್ರಜಾಪ್ರಭುತ್ವವೋ, ತುಘಲಕ್ ಸರ್ಕಾರವೋ? ಹನುಮ ಧ್ವಜ ನಿಷೇಧಿತ ಧ್ವಜವೇ? ಧಾರ್ಮಿಕ ಸ್ವಾತಂತ್ರ್ಯ ಎಂಬುದು ಹಿಂದೂಗಳಿಗಿಲ್ಲವೇ? ಹಿಂದೂ ವಿರೋಧ ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪದಿಂದ ಜನರ ಭಾವನೆಗಳನ್ನು ಕೆಣಕುವ ಕೆಲಸಕ್ಕೆ ಕೈ ಹಾಕುತ್ತಿದೆ. ಅಧಿಕಾರ ಬಳಸಿಕೊಂಡು ಹಿಂದೂ ಶಕ್ತಿಗಳ ವಿರುದ್ಧ ದಮನಕಾರಿ ನೀತಿಗಳನ್ನು ಬಳಸಬೇಡಿ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಅವರು ತಮ್ಮ ಹೆಸರಿನಲಿ ರಾಮ ಇದ್ದಾನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಹೃದಯದಲ್ಲಿ ಟಿಪ್ಪು ಸುಲ್ತಾನ್ ತುಂಬಿಕೊಂಡಿದ್ದಾನೆ. ಬಾಯಲ್ಲಿ ಮಾತ್ರ ರಾಮ ಎನ್ನುತ್ತಾರೆ. ರಾಮನ ಮೇಲೆ ಭಕ್ತಿ ಇದ್ದಿದ್ದರೆ ಮಂಡ್ಯದಲ್ಲಿ ಹನುಮ ಧ್ವಜವನ್ನು ಪೊಲೀಸ್ ಬಲದ ಮೂಲಕ ಇಳಿಸುತ್ತಿರಲಿಲ್ಲ. ಬ್ರಿಟಿಷರ ಸಂಜಾತರಾಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಈಗ ಅದನ್ನು ಹಿಂದೂಗಳ ವಿರುದ್ಧ ಮಾಡುತ್ತಿದೆ. ತುಷ್ಟೀಕರಣ ರಾಜಕಾರಣದ ಪಿತಾಮಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂಗಳ ಭಕ್ತಿ, ನಂಬಿಕೆ ಮೇಲೆ ಮಾತ್ರ ಕೋಪ, ತಾತ್ಸಾರ. ನಮ್ಮ ಧರ್ಮ, ದೇವರನ್ನು ಕಾಪಾಡಿಕೊಳ್ಳಲು ಮಹಿಳೆಯರು ಬೀದಿಗಿಳಿಯುವಂತೆ ಮಾಡಿದ್ದೀರಿ, ಅವರ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಓಲೈಕೆ ರಾಜಕಾರಣಕ್ಕಾಗಿ ನೀವು ಇಷ್ಟು ಕೆಳಮಟ್ಟದ ರಾಜಕಾರಣಕ್ಕೆ ಇಳಿಯುತ್ತೀರೆಂದು ಯಾರೂ ಸಹ ಭಾವಿಸಿರಲಿಲ್ಲ. ಹಿಂದೂಗಳ ಮೇಲಿನ ನಿಮ್ಮ ದಮನಕಾರಿ ನೀತಿಗೆ, ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಗ್ರಾಮಸ್ಥರೆಲ್ಲರೂ ಒಕ್ಕೊರಲು ನಿರ್ಣಯ ಮಾಡಿ ಎಲ್ಲರ ಒಪ್ಪಿಗೆಯನ್ನು ಪಡೆದು ಹಾಕಲಾಗಿದ್ದ ಹನುಮ ಧ್ವಜವನ್ನು ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಬಲಾತ್ಕಾರದಿಂದ ತೆರವುಗೊಳಿಸಿಸಲಾಗಿದೆ. ಅದನ್ನು ಪುನಃ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಹಿರಿಯ ಬಿಜೆಪಿ ಮುಖಂಡ ಗೋಪಾಲ್, ಪ್ರಸನ್ನ ಕುಮಾರ್, ಶೋಭನ್ ಬಾಬು, ದಯಾನಂದ್, ಚನ್ನಕೇಶವ, ಶ್ರೀಕಾಂತ್, ಪ್ರೀತಿ ವರ್ಧನ್, ಎಸ್.ಡಿ. ಚಂದ್ರು, ರತ್ನ, ವಿಜಯಲಕ್ಷ್ಮಿ ಅಂಜನಪ್ಪ, ವೇದವತಿ, ರಾಕೇಶ್, ಪ್ರಭಾಕರ್ ಉಪಸ್ಥಿತರಿದ್ದರು.ಮಂಡ್ಯ ಜಿಲ್ಲೆಯ ಕೆರಗೋಡಿ ಗ್ರಾಮದಲ್ಲಿ ಹನುಮ ದ್ವಜವನ್ನು ಕೆಳಗಿಳಿಸಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.