ಶಾಲಾ ವಾಹನ ಅಪಘಾತ: ನಾಲ್ಕು ಮಕ್ಕಳ ಸಾವು, 30ಕ್ಕೂ ಅಧಿಕ ಜನ ಗಾಯ

| Published : Jan 30 2024, 02:01 AM IST

ಸಾರಾಂಶ

ಜಮಖಂಡಿ: ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿ ಮಕ್ಕಳನ್ನು ಮನೆಗೆ ತಲುಪಿಸಲು ತೆರಳುತ್ತಿದ್ದ ಶಾಲಾ ವಾಹನವೊಂದು ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಬಳಿ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು, ಪಾಲಕರು ಗಾಯಗೊಂಡಿದ್ದು, ಅವರನ್ನು ಜಮಖಂಡಿ ಮತ್ತು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿ ಮಕ್ಕಳನ್ನು ಮನೆಗೆ ತಲುಪಿಸಲು ತೆರಳುತ್ತಿದ್ದ ಶಾಲಾ ವಾಹನವೊಂದು ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಬಳಿ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು, ಪಾಲಕರು ಗಾಯಗೊಂಡಿದ್ದು, ಅವರನ್ನು ಜಮಖಂಡಿ ಮತ್ತು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಕವಟಗಿ ಗ್ರಾಮದ ವಿದ್ಯಾರ್ಥಿಗಳಾದ ಗೋವಿಂದ ಸದಾಶಿವ ಜಂಬಗಿ (13), ಶ್ವೇತಾ ಶಿವನಗೌಡ ಪಾಟೀಲ (12), ಬಸವರಾಜ ಕೊಟ್ಟಗಿ (17), ಸಾಗರ ಗುರಲಿಂಗ ಕಡಕೋಳ (16) ಮೃತಪಟ್ಟವರು.

ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಶ್ರೀ ಮಹಾವೀರ ಅಲ್ಪಸಂಖ್ಯಾತರ ಕನ್ನಡ/ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ, ಶ್ರೀಮತಿ ಚಂದ್ರವ್ವ ನ್ಯಾಮಗೌಡ ಪ್ರೌಢ ಶಾಲೆಯಲ್ಲಿ ಭಾನುವಾರ ತಡರಾತ್ರಿವರೆಗೂ ನಡೆದಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮುಗಿಸಿ ಶಾಲಾ ಮಕ್ಕಳನ್ನು ಮರಳಿ ಮನೆಗೆ ಬಿಡಲು ವಾಹನ ಹೊರಟಿತ್ತು.

ವಾಹನ ಕವಟಗಿ ಗ್ರಾಮಕ್ಕೆ ಹೋಗುವಾಗ ಮುಂದೆ ಹೋಗುತ್ತಿದ್ದ ಲಾರಿ ಓವರ್ ಟೇಕ್‌ ಮಾಡಲು ಹೋದಾಗ ಎದುರಿಗೆ ಬಂದ ಟ್ರ್ಯಾಕ್ಟರ್‌ ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೂವರು ಅಸುನೀಗಿದರು. ಡಿಕ್ಕಿ ರಭಸಕ್ಕೆ ವಾಹನದ ಬಲಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನದಲ್ಲಿದ್ದ 33 ಜನರ ಇದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡ ಹಲವರನ್ನು ತಾಲೂಕು ಸರ್ಕಾರಿ/ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ, ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸರ್ಕಾರಿ ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ತಡರಾತ್ರಿ ಜಿಲ್ಲಾ ಎಸ್‌ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ, ಜಿಲ್ಲಾಧಿಕಾರಿ ಎಸ್. ಜಾನಕಿ, ಸಿಇಒ ಶಶಿಧರ ಕೋರೆ, ಎಸಿ ಸಂತೋಷ ಕಾಮಗೊಂಡ, ಡಿಎಸ್‌ಪಿ ಶಾಂತವೀರ ಈ., ತಹಸೀಲ್ದಾರ್‌ ಸದಾಶಿವ ಮಕ್ಕೋಜಿ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಈ ಕುರಿತು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

--

ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದೇನೆ. ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಸರ್ಕಾರ ಮಟ್ಟದಲ್ಲಿ ಬರುವ ಪರಿಹಾರ ಕೊಡುವ ವ್ಯವಸ್ಥೆ ಮಾಡುತ್ತೇನೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ವೈಯಕ್ತಿಕವಾಗಿ ₹25 ಸಾವಿರ ನೀಡುತ್ತೇನೆ.

-ಜಗದೀಶ ಗುಡಗುಂಟಿಸ ಶಾಸಕ ಜಮಖಂಡಿ