ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜ. ೫ರಿಂದ ಉತ್ಸವ ಮಾದರಿಯಲ್ಲಿ ಆಚರಿಸಲ್ಪಡುವ ಗವಿಮಠದ ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಕೊಪ್ಪಳ: ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಜಾತ್ರೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.
ಜ. ೫ರಿಂದ ಉತ್ಸವ ಮಾದರಿಯಲ್ಲಿ ಆಚರಿಸಲ್ಪಡುವ ಗವಿಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆಗೆ ಬರುವ ಲಕ್ಷಾಂತರ ಮಹಾದಾಸೋಹ ಮಂಟಪದ ಮೂಲಕ ಪುಷ್ಕಳ ಪ್ರಸಾದ ಬಡಿಸಲಾಗುತ್ತದೆ. ಹೀಗಾಗಿ ಮಹಾದಾಸೋಹ ಮಂಟಪ ಸೇರಿದಂತೆ ಜಾತ್ರೆಯ ಅಗತ್ಯ ಸಿದ್ದತೆಗಳು ಶ್ರೀಮಠದಲ್ಲಿ ಭರದಿಂದ ಸಾಗಿವೆ. ಈ ವರ್ಷ ಮಹಾದಾಸೋಹ ಮಂಟಪದ ಆವರಣ ನಾಲ್ಕು ಎಕರೆ ಪ್ರದೇಶದಿಂದ ೬ ಎಕರೆ ಪ್ರದೇಶಕ್ಕೆ ವಿಸ್ತಾರಗೊಂಡಿದೆ.ಪ್ರತಿ ವರ್ಷವೂ ಜಾತ್ರೆಗೆ ಬರುವ ಯಾತ್ರಿಕರಿಗೆ ಯಾವುದೇ ಕೊರತೆಯಾಗದಂತೆ ಮಠ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುತ್ತದೆ. ಮೂಲಭೂತ ಸೌಕರ್ಯಗಳ ಜತೆಗೆ ಮಹಾದಾಸೋಹ ಮಂಟಪದ ಮೂಲಕ ಅಚ್ಚಕಟ್ಟಾಗಿ ಪುಷ್ಕಳ ಪ್ರಸಾದ ಬಡಿಸಲಾಗುತ್ತದೆ. ಸುಮಾರು ನಾಲ್ಕು ಎಕರೆ ಪ್ರದೇಶ ವಿಸ್ತಾರದಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಭಕ್ತರಿಗೆ ಪ್ರಸಾದ ಬಡಿಸಲು ಮಹಾದಾಸೋಹ ಮಂಟಪ ಸಜ್ಜುಗೊಳಿಸಲಾಗುತ್ತಿತ್ತು. ಆದರೆ ಈ ವರ್ಷ ಮಹಾದಾಸೋಹ ಮಂಟಪ ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ. ಒಟ್ಟು ೬ ಎಕರೆ ಪ್ರದೇಶದಲ್ಲಿ ಮಹಾದಾಸೋಹ ಮಂಟಪ ಸಜ್ಜುಗೊಳ್ಳುತ್ತಿದ್ದು, ಇನ್ನಷ್ಟು ಹೆಚ್ಚಿನ ಸಂಖ್ಯೆಯ ಭಕ್ತರು ಆರಾಮಾಗಿ ಕುಳಿತುಕೊಂಡು ಪ್ರಸಾದ ಸ್ವೀಕರಿಸುವ ವ್ಯವಸ್ಥೆಯಾಗಲಿದೆ. ಏಕಕಾಲದಲ್ಲಿ ಸುಮಾರು ಐದರಿಂದ ಆರು ಸಾವಿರ ಭಕ್ತರು ಪ್ರಸಾದ ಸೇವಿಸಬಹುದಾಗಿದೆ. ಜ. ೧ರಿಂದ ಜ. ೧೮ರ ವರೆಗೆ ಹಾಗೂ ಅಮಾವಾಸ್ಯೆಯ ದಿನದಂದು ಸಹ ಈ ಮಹಾದಾಸೋಹ ಮಂಟಪದ ಮೂಲಕ ಲಕ್ಷಾಂತರ ಭಕ್ತರಿಗೆ ಪುಷ್ಕಳ ಪ್ರಸಾದ ಬಡಿಸಲಾಗುತ್ತದೆ.
ಹೀಗಿರಲಿದೆ ಮಹಾದಾಸೋಹ ಮಂಟಪ: ಮಹಾದಾಸೋಹ ಮಂಟಪದಲ್ಲಿ ಪುರುಷರು, ಮಹಿಳೆಯರು, ಗರ್ಭಿಣಿಯರು, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ದೊಡ್ಡದಾದ ಅಡುಗೆ ಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ ಹಾಗೂ ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಸುಮಾರು 76 ಪ್ರಸಾದ ವಿತರಣಾ ಕೌಂಟರ್ ನಿರ್ಮಿಸಲಾಗಿದೆ. ಅದರಲ್ಲಿ 40 ಕೌಂಟರ್‌ಗಳು ಅನ್ನ ಸಾರು, 36 ಕೌಂಟರ್‌ಗಳು ಸಿಹಿ ಪದಾರ್ಥ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. 45*50 ವಿಸ್ತೀರ್ಣದ ಎರಡು ಕೋಣೆಗಳು ರೊಟ್ಟಿ ಸಂಗ್ರಹಣೆಗಾಗಿ ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕಾರ್ಯ ಭರದಿಂದ ಸಾಗಿದೆ. 70 ನಲ್ಲಿ ಇರುವ ಎರಡು ನೀರಿನ ಕಟ್ಟೆಗಳು, 50 ನಲ್ಲಿ ಇರುವ ಒಂದು ಕಟ್ಟೆ ಸಿದ್ಧಗೊಳಿಸಲಾಗಿದೆ. 250-300 ಭಕ್ತರು ಏಕಕಾಲಕ್ಕೆ ನೀರು ಸೇವಿಸಲು ವ್ಯವಸ್ಥೆ ಮಾಡಲಾಗಿದೆ.ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆಯ ವಿಶೇಷವೂ ಹೌದು, ಅದಕ್ಕೆಂದೆ 16*6 ಅಡಿ ವಿಸ್ತೀರ್ಣದ 3, 20*6 ಅಡಿ ವಿಸ್ತೀರ್ಣದ 3 ಕಟ್ಟೆಗಳು ಒಟ್ಟು 6 ಮಾದಲಿ ಕಟ್ಟೆಗಳು, 65 ಅಡಿಯ ಅನ್ನ ಸಂಗ್ರಹಣಾ ಕಟ್ಟೆ ಸಿದ್ಧಗೊಂಡಿವೆ.
ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಕೌಂಟರ್‌ಗಳನ್ನು ಪ್ರಸಾದ ಬಡಿಸಿಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 4 ಪ್ರವೇಶ ದ್ವಾರಗಳಿರುತ್ತವೆ. ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಓಳಾಂಗಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಒಂದು ದಿನಕ್ಕೆ ಸುಮಾರು 300ರಿಂದ 400 ಪ್ರಸಾದ ತಯಾರಿಸುವ ಭಕ್ತರು ಇರಲಿದ್ದು, ಪ್ರಸಾದ ವಿತರಣೆಯಲ್ಲಿ ಸುಮಾರು 500ರಿಂದ 600 ಭಕ್ತರು ಪಾಲ್ಗೊಳ್ಳುವರು.